ಹುಬ್ಬಳ್ಳಿ: ರಾಜ್ಯ ಸರ್ಕಾರ ನಡೆಸಲು ಉದ್ದೇಶಿಸಿರುವ ಸಾಮಾಜಿಕ, ಶೈಕ್ಷಣಿಕ ಹಾಗೂ ಜನಗಣತಿಯಲ್ಲಿ ಧರ್ಮದ ಕಾಲಂ-8ರಲ್ಲಿ ಎಲ್ಲ ಬಸವ ಅಭಿಮಾನಿಗಳಾದ ಲಿಂಗಾಯತರು "ಲಿಂಗಾಯತ " ಎಂದು ಬರೆಸಬೇಕು. ಕಾಲಂ-9ರಲ್ಲಿ ಪಂಗಡ ಅಥವಾ ಜಾತಿಯನ್ನು ಬರೆಸಬೇಕೆಂದು ಜಾಗತಿಕ ಲಿಂಗಾಯತ ಮಹಾಸಭಾ ಧಾರವಾಡ ಜಿಲ್ಲಾಧ್ಯಕ್ಷ ಎಂ.ವಿ. ಗೊಂಗಡಶೆಟ್ಟಿಮನವಿ ಮಾಡಿದರು.
ನಮ್ಮ ಹೋರಾಟ ಯಾವುದೇ ಧರ್ಮ, ಪಕ್ಷ, ಸಂಘಟನೆ ಅಥವಾ ಉಪಜಾತಿ ವಿರುದ್ಧ ಅಲ್ಲ, ಅಖಿಲ ಭಾರತ ವೀರಶೈವ ಮಹಾಸಭಾ ವೀರಶೈವ ಲಿಂಗಾಯತ ಒಂದೇ ಎಂಬ ನಿಲುವಿನೊಂದಿಗೆ ಸ್ವಾತಂತ್ರ್ಯ ಧರ್ಮದ ಮಾನ್ಯತೆ ಪಡೆಯುವಲ್ಲಿ ವಿಫಲವಾಗಿದೆ. ಹಾಗಾಗಿ ನಾವೆಲ್ಲರೂ ಲಿಂಗಾಯತ ಲಾಂಛನದ ಅಡಿಯಲ್ಲಿ ಪ್ರತ್ಯೇಕ ಸ್ವತಂತ್ರ ಧರ್ಮ ಪಡೆಯಲು ಹೋರಾಟ ಮಾಡುತ್ತಿದ್ದೇವೆ ಎಂದರು.
ವೀರಶೈವವು ಲಿಂಗಾಯತದ ಒಂದು ಭಾಗವಾಗಿದ್ದು, ಅದನ್ನು ಅರಿತುಕೊಂಡು ಅವರೆಲ್ಲರೂ ನಮ್ಮ ಹೋರಾಟಕ್ಕೆ ಬೆಂಬಲ ಸೂಚಿಸಬೇಕು. ದೇಶದಲ್ಲಿ ಎರಡು ಹೆಸರಿನ ಧರ್ಮಕ್ಕೆ ಮಾನ್ಯತೆ ಸಿಕ್ಕಿಲ್ಲ, ಹಾಗಾಗಿ ಒಂದೊಮ್ಮೆ ಒಪ್ಪಿಕೊಂಡು ಲಿಂಗಾಯತ ಸ್ವತಂತ್ರ ಧರ್ಮ ಹೋರಾಟಕ್ಕೆ ಸಹಕಾರ ನೀಡಬೇಕು ಎಂದರು.ಲಿಂಗಾಯತವು ಪ್ರತ್ಯೇಕ ಅಲ್ಪಸಂಖ್ಯಾತ ಧರ್ಮ ಎಂದು ಪರಿಗಣಿಸಲ್ಪಟ್ಟ ನಂತರ, ಉಪಪಂಗಡಗಳು ತಮ್ಮ ಆಚರಣೆಗಳನ್ನು ಮಾಡಿಕೊಳ್ಳಬಹುದು. ಹಾಗಾಗಿ ಜಾತಿಗಣತಿ ಸಮೀಕ್ಷೆಯ ವೇಳೆ ನಾವೆಲ್ಲರೂ ಒಟ್ಟಾಗಿ ಹೋಗಬೇಕಾಗಿದೆ. ಲಿಂಗಾಯತರು ಒಂದಾಗಿ ಜಾತಿಗಣತಿಯಲ್ಲಿ ಲಿಂಗಾಯತ ಎಂದೇ ನಮೂದಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಬಸವರಾಜ ಲಿಂಗಶೆಟ್ಟರ್, ಪ್ರೋ. ಎಸ್.ವಿ. ಪಟ್ಟಣಶೆಟ್ಟಿ, ಚನ್ನಗೌಡ ಪಾಟೀಲ್, ದ್ರಾಕ್ಷಾಯಿಣಿ ಕೋಳಿವಾಡ ಸೇರಿದಂತೆ ಅನೇಕರಿದ್ದರು.