ಮುಖ್ಯಮಂತ್ರಿ ಹುದ್ದೆಗೆ ಯಾವ ಜಾತಿ, ಕುಲದ ಮಾನದಂಡವಲ್ಲ: ಶಾಸಕ ಕೆ.ಎಂ.ಉದಯ್

KannadaprabhaNewsNetwork | Published : Mar 9, 2024 1:30 AM

ಸಾರಾಂಶ

ಮುಖ್ಯಮಂತ್ರಿ ಬ್ರಾಹ್ಮಣ, ಲಿಂಗಾಯಿತ, ಒಕ್ಕಲಿಗ ಮಾತ್ರವೇ ಆಗಬೇಕೆಂಬ ನಿಯಮವಿಲ್ಲ. ಒಂದು ವೇಳೆ ದಲಿತರಿಗೆ ಅವಕಾಶ ಸಿಕ್ಕರೆ ಅವರೇ ಮುಖ್ಯಮಂತ್ರಿ ಆಗಲಿ. ಇದಕ್ಕೆ ನನ್ನ ಆಕ್ಷೇಪವಿಲ್ಲ. ಸದ್ಯಕ್ಕೆ ಮುಖ್ಯಮಂತ್ರಿ ಯಾಗಿ ಸಿದ್ದರಾಮಯ್ಯ ಇದ್ದಾರೆ. ಹೀಗಾಗಿ ಮುಖ್ಯಮಂತ್ರಿ ಖುರ್ಚಿ ಖಾಲಿ ಇಲ್ಲ.

ಕನ್ನಡಪ್ರಭ ವಾರ್ತೆ ಮದ್ದೂರುಮುಖ್ಯಮಂತ್ರಿ ಆಗಲು ಯಾವುದೇ ಜಾತಿ, ಕುಲ ಎಂಬ ಮಾನದಂಡವಿಲ್ಲ. ಯಾರು ಬೇಕಾದರೂ ಮುಖ್ಯಮಂತ್ರಿ ಆಗಬಹುದು. ಮುಖ್ಯಮಂತ್ರಿ ಆಯ್ಕೆ ಕಾಂಗ್ರೆಸ್ ವರಿಷ್ಠರ ತೀರ್ಮಾನವೇ ಹೊರತು ಬೇರೆಯವರ ಅಭಿಪ್ರಾಯ ಅಗತ್ಯವಿಲ್ಲ ಎಂದು ಎಂದು ಶಾಸಕ ಕೆ.ಎಂ. ಉದಯ್ ಶುಕ್ರವಾರ ಹೇಳಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬ್ರಾಹ್ಮಣ, ಲಿಂಗಾಯಿತ, ಒಕ್ಕಲಿಗ ಮಾತ್ರವೇ ಆಗಬೇಕೆಂಬ ನಿಯಮವಿಲ್ಲ. ಒಂದು ವೇಳೆ ದಲಿತರಿಗೆ ಅವಕಾಶ ಸಿಕ್ಕರೆ ಅವರೇ ಮುಖ್ಯಮಂತ್ರಿ ಆಗಲಿ. ಇದಕ್ಕೆ ನನ್ನ ಆಕ್ಷೇಪವಿಲ್ಲ. ಸದ್ಯಕ್ಕೆ ಮುಖ್ಯಮಂತ್ರಿ ಯಾಗಿ ಸಿದ್ದರಾಮಯ್ಯ ಇದ್ದಾರೆ. ಹೀಗಾಗಿ ಮುಖ್ಯಮಂತ್ರಿ ಖುರ್ಚಿ ಖಾಲಿ ಇಲ್ಲ ಎಂದರು.

ದಲಿತ ಸಿಎಂ ಪರ ನಮ್ಮ ಪಕ್ಷದ ಕೆಲವು ಶಾಸಕರು ಅನಗತ್ಯ ಚರ್ಚೆ ನಡೆಸುತ್ತಿದ್ದಾರೆ. ಸಿಎಂ ಬದಲಾವಣೆ ಅನಿವಾರ್ಯವಾದರೆ ಈ ಬಗ್ಗೆ ಪಕ್ಷದ ಹೈಕಮಾಂಡ್ ನಿರ್ಧಾರ ಕೈಗೊಳ್ಳುತ್ತದೆ. ಅಂತಹ ಸಂದರ್ಭದಲ್ಲಿ ನಾವು ಶಾಸಕರುಗಳು ಸಹಮತ ವ್ಯಕ್ತಪಡಿಸಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದರು.ಕ್ಷೇತ್ರದ ಕಾಂಗ್ರೆಸ್ ಪಕ್ಷದಲ್ಲಿ ಕೆಲವೊಂದು ಆಂತರಿಕ ಭಿನ್ನಾಭಿಪ್ರಾಯಗಳು ಇದ್ದರೂ ಸಹ ಲೋಕಸಭಾ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಎಲ್ಲಾ ರಾಜಕೀಯ ಪಕ್ಷಗಳಲ್ಲಿ ಇರುವಂತೆ ಮದ್ದೂರು ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕರಲ್ಲಿ ಕೆಲವೊಂದು ವಿಚಾರಕ್ಕೆ ಒಮ್ಮತವಿಲ್ಲದೆ ಇರಬಹುದು. ಆದರೆ, ಲೋಕಸಭಾ ಚುನಾವಣೆಯಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಬೇಕಾಗುತ್ತದೆ ಎಂದರು.

ಪಕ್ಷದ ನಾಯಕರಲ್ಲಿನ ಕೆಲವೊಂದು ಅಪಸ್ವರಗಳನ್ನು ಸರಿಪಡಿಸಲು ಯಾರಿಂದಲೂ ಸಾಧ್ಯವಾಗುವುದಿಲ್ಲ. ಅದು ನಿರಂತರವಾಗಿ ಇರುತ್ತದೆ. ಚುನಾವಣೆಗೂ ಇದಕ್ಕೂ ಸಂಬಂಧವಿಲ್ಲ ಹೇಳಿದರು.ಸಾವಿರಾರು ಕೋಟಿ ರು.ಗಾಗಿ ಸರ್ಕಾರಕ್ಕೆ ಪ್ರಸ್ತಾವನೆ: ಶಾಸಕ ಕೆ.ಎಂ.ಉದಯ್

ಮದ್ದೂರು:

ಕ್ಷೇತ್ರದ ನೀರಾವರಿ, ರಸ್ತೆ ಮತ್ತು ಕೆರೆಕಟ್ಟೆಗಳ ಅಭಿವೃದ್ಧಿಗೆ ಒಂದು ಸಾವಿರ ಕೋಟಿ ರು. ಅನುದಾನ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕ ಕೆ.ಎಂ.ಉದಯ್ ಹೇಳಿದರು.

ತಾಲೂಕಿನ ಕೆಸ್ತೂರು ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ಸರ್ಕಾರ ಮದ್ದೂರು ಕ್ಷೇತ್ರದ ಅಭಿವೃದ್ಧಿಗಾಗಿ ನನ್ನ ಮನವಿ ಮೇರೆಗೆ ತಾತ್ಕಾಲಿಕವಾಗಿ 285 ಕೋಟಿ ರು. ಅನುದಾನ ಬಿಡುಗಡೆ ಮಾಡಿದೆ. ಉಳಿದ ಅನುದಾನವನ್ನು ಲೋಕಸಭಾ ಚುನಾವಣೆ ನಂತರ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದರು.

ಈ ಅನುದಾನದಲ್ಲಿ ಕ್ಷೇತ್ರದ ರಸ್ತೆ, ಚರಂಡಿ, ನೀರಾವರಿ ಯೋಜನೆಗಳಿಗೆ ಮೊದಲ ಆದ್ಯತೆ ನೀಡಿದ್ದೇನೆ. ಕುಡಿಯೋ ನೀರಿನ ಸಮಸ್ಯೆ ನಿವಾರಣೆಗಾಗಿ ಈಗಾಗಲೇ ಟಾಸ್ ಪೋರ್ಸ್ ಸಮಿತಿ ಸಭೆ ಕರೆದು ಚರ್ಚೆ ನಡೆಸಲಾಗಿದೆ. ನೀರಿನ ಸಮಸ್ಯೆ ಇರುವ ಕಡೆ ಟ್ಯಾಂಕರ್ ಗಳ ಮೂಲಕ ನೀರು ಪೂರೈಸುವಂತೆ ಸೂಚನೆ ನೀಡಲಾಗಿದೆ ಎಂದರು.

ಆದ್ಯತೆ ಮೇರೆಗೆ ಕೊಳವೆಬಾವಿಗಳನ್ನು ಕೊರೆಸುವ ಜೊತೆಗೆ ರೈತರ ಕೊಳವೆ ಬಾವಿಗಳನ್ನು ಬಾಡಿಗೆ ಆಧಾರದ ಮೇಲೆ ಪಡೆದುಕೊಂಡು ನೀರಿನ ಸಮಸ್ಯೆ ಇರುವ ಗ್ರಾಮಗಳಿಗೆ ನೀರು ಪೂರೈಸಲು ಕ್ರಮ ವಹಿಸಲಾಗಿದೆ ಎಂದು ಸ್ಪಷ್ಟಪಡಿಸಿದರು. ಮದ್ದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕದಲೂರು ರಾಮಕೃಷ್ಣ, ಗ್ರಾಪಂ ಅಧ್ಯಕ್ಷ ಈಶ್ವರ, ಸದಸ್ಯರಾದ ಶಿವು, ಅಶೋಕ್, ಮಹಮ್ಮದ್ ಬಕ್ಷಿ, ಪಿಡಿಒ ರವಿ, ಮುಖಂಡರಾದ ಸುಧಾ ಮತ್ತಿತರ ಇದ್ದರು.

Share this article