ಜಾತಿ-ಆದಾಯ ಪ್ರಮಾಣ ಪತ್ರ ವಿಳಂಬ: ರಸ್ತೆ, ಚರಂಡಿ, ತಡೆಗೋಡೆ ಬೇಡಿಕೆ

KannadaprabhaNewsNetwork |  
Published : Sep 27, 2026, 02:45 AM IST
ಪ್ರಜಾಸೇವೆ ಆಂದೋಲನದಲ್ಲಿ ಸಾರ್ವಜನಿಕರು ಅಹವಾಲು ಸಲ್ಲಿಸಿದರು | Kannada Prabha

ಸಾರಾಂಶ

ಜಾತಿ-ಆದಾಯ ಪ್ರಮಾಣ ಪತ್ರ ವಿಳಂಬ, ರಸ್ತೆ, ಚರಂಡಿ, ತಡೆಗೋಡೆ, ನಿವೇಶನ, ಮನೆ ಮೂಲಸೌಕರ್ಯ ಬೇಡಿಕೆಗಳ ಬಗ್ಗೆ ಸಾರ್ವಜನಿಕರು ಅಹವಾಲು ಸಲ್ಲಿಸುವ ಮೂಲಕ ಪ್ರಜಾಸೇವೆ ಆಂದೋಲನದಲ್ಲಿ ಭಾಗವಹಿಸಿದರು. ಮಂಗಳೂರು ತಾಲೂಕಿನ ಮಂಗಳೂರು ‘ಎ’ ಹೋಬಳಿ ಮಟ್ಟದ ಪ್ರಜಾಸೇವೆ ಆಂದೋಲನ ಸಭೆ ಮಹಾನಗರ ಪಾಲಿಕೆಯ ಮಂಗಳಾ ಸಭಾಂಗಣದಲ್ಲಿ ಶನಿವಾರ ನಡೆಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ಜಾತಿ-ಆದಾಯ ಪ್ರಮಾಣ ಪತ್ರ ವಿಳಂಬ, ರಸ್ತೆ, ಚರಂಡಿ, ತಡೆಗೋಡೆ, ನಿವೇಶನ, ಮನೆ ಮೂಲಸೌಕರ್ಯ ಬೇಡಿಕೆಗಳ ಬಗ್ಗೆ ಸಾರ್ವಜನಿಕರು ಅಹವಾಲು ಸಲ್ಲಿಸುವ ಮೂಲಕ ಪ್ರಜಾಸೇವೆ ಆಂದೋಲನದಲ್ಲಿ ಭಾಗವಹಿಸಿದರು. ಮಂಗಳೂರು ತಾಲೂಕಿನ ಮಂಗಳೂರು ‘ಎ’ ಹೋಬಳಿ ಮಟ್ಟದ ಪ್ರಜಾಸೇವೆ ಆಂದೋಲನ ಸಭೆ ಮಹಾನಗರ ಪಾಲಿಕೆಯ ಮಂಗಳಾ ಸಭಾಂಗಣದಲ್ಲಿ ಶನಿವಾರ ನಡೆಯಿತು.

ಶಾಸಕ ವೇದವ್ಯಾಸ ಕಾಮತ್‌ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿ ದರ್ಶನ್‌ ಎಚ್‌.ವಿ., ಪಾಲಿಕೆ ಆಯುಕ್ತ ರಾಹುಲ್‌ ರತ್ನಂ ಪಾಂಡೆ, ಸಹಾಯಕ ಆಯುಕ್ತೆ ಮೀನಾಕ್ಷಿ ಆರ್ಯ, ತಹಶೀಲ್ದಾರ್‌ ರಮೇಶ್‌ಬಾಬು ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದು, ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.

ಜಾತಿ-ಆದಾಯ ಪ್ರಮಾಣ ಪತ್ರ ವಿಳಂಬ:

ಪಡಿತರ ಕಾರ್ಡ್‌ಗೆ ಇ-ಕೆವೈಸಿ ಮಾಡಲು ಜಾತಿ-ಆದಾಯ ಅಗತ್ಯವಾಗಿಲ್ಲ ಹಿನ್ನೆಲೆಯಲ್ಲಿ ಅರ್ಜಿ ಹಾಕಿ ಹಲವು ದಿನ ಕಳೆದರೂ ಇನ್ನೂ ಪ್ರಮಾಣಪತ್ರ ಕೈಸೇರಿಲ್ಲ. ಇದರಿಂದ ಇ-ಕೆವೈಸಿ ಮಾಡಲು ಆಗುತ್ತಿಲ್ಲ ಎಂದು ಮಹಿಳೆಯೋರ್ವರು ದೂರಿದರು. ಜಾತಿ-ಆದಾಯ ಪ್ರಮಾಣ ಪತ್ರ ಪಡೆಯಲು ಹೆಚ್ಚಿನ ಅರ್ಜಿಗಳು ಸಲ್ಲಿಕೆಯಾಗುತ್ತಿರುವುದರಿಂದ ಎಲ್ಲ ಕಡೆಗಳಲ್ಲೂ ವಿಳಂಬ ಆಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು. ಅರ್ಜಿಗಳ ವಿಲೇವಾರಿಗಳ ತ್ವರಿತಗೊಳಿಸಲು ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು.

ಬಜಾಲ್‌ನ ಮಹಿಳೆಯೊಬ್ಬರು ತನಗೆ 6 ತಿಂಗಳಿನಿಂದ ಸಂಧ್ಯಾ ಸುರಕ್ಷಾ ಯೋಜನೆಯಡಿ ಪಿಂಚಣಿ ಬಂದಿಲ್ಲ ಎಂದರು. ಈ ರಾಜ್ಯ ಸರ್ಕಾರ ಬಂದ ಮೇಲೆ ಎಪಿಎಲ್‌ನವರಿಗೆ ಈ ಪಿಂಚಣಿ ತಡೆ ಹಿಡಿದಿದೆ. ಇದರಲ್ಲಿ ಶಾಸಕನಾಗಿ ನಾನು ಏನೂ ಮಾಡುವ ಹಾಗಿಲ್ಲ. ಹಾಗಿದ್ದರೂ ಈ ಬಗ್ಗೆ ಸರ್ಕಾರದ ಗಮನಕ್ಕೆ ತರುವುದಾಗಿ ಶಾಸಕ ವೇದವ್ಯಾಸ ಕಾಮತ್‌ ತಿಳಿಸಿದರು.

ರಸ್ತೆ, ಒಳಚರಂಡಿ, ತಡೆಗೋಡೆ ಬೇಡಿಕೆ:

ನೂರಾರು ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಸಲ್ಲಿಸಿದರು. ಸಂಪರ್ಕ ರಸ್ತೆ ಅಭಿವೃದ್ಧಿ ಮಾಡುವಂತೆ, ರಸ್ತೆ ದುರಸ್ತಿ ಮಾಡುವಂತೆ, ಮಣ್ಣು ಕುಸಿತ ಕಡೆಗಳಲ್ಲಿ ತಡೆಗೋಡೆ, ಮನೆ ಸಮೀಪ ತಡೆಗೋಡೆ ನಿರ್ಮಿಸುವಂತೆ ಹೆಚ್ಚಿನ ಅಹವಾಲು ಸಲ್ಲಿಕೆಯಾಗಿದೆ. ಮಾಜಿ ಸೈನಿಕರ ಸಂಘದ ಕಟ್ಟಡದ ಬಳಿ ತಡೆಗೋಡೆ ಕುಸಿತ ಆಗಿರುವುದನ್ನು ಮರುಸ್ಥಾಪನೆ ಬಗ್ಗೆ ಮನವಿ ಸಲ್ಲಿಸಿದರು.

ಭೂಪರಿವರ್ತನೆ ಸಮಸ್ಯೆ ನಿವಾರಿಸಿ:

ಮಂಗಳೂರಿನಲ್ಲಿ ಭೂ ಪರಿವರ್ತನೆ ಮತ್ತು ಏಕ ನಿವೇಶನಕ್ಕೆ ತೊಂದರೆಯಾಗುತ್ತಿದ್ದು, ಸುಮಾರು ಮೂರು ತಿಂಗಳಿಗೂ ಅಧಿಕ ಕಾಲ ಸಾರ್ವಜನಿಕರು ಕಚೇರಿಗಳಿಗೆ ಅಲೆದಾಡುವಂತಾಗಿದೆ ಎಂದು ನಾಗರಿಕ ಹಿತರಕ್ಷಣಾ ಸಮಿತಿಯ ಹನುಮಂತ ಕಾಮತ್‌ ಆಕ್ಷೇಪಿಸಿ ಮನವಿ ಸಲ್ಲಿಸಿದರು. ಹಿಂದೆ ಭೂ ಪರಿವರ್ತನೆ ಮಾಡಿಸಲು ದಾಖಲಾತಿಗಳ ಸಹಿತ ಸಾವಿರ ರು. ಅರ್ಜಿ ಶುಲ್ಕದೊಂದಿಗೆ ತಾಲೂಕು ಕಚೇರಿಯ ಭೂ ಪರಿವರ್ತನಾ ಕಚೇರಿಗೆ ಅರ್ಜಿ ಸಲ್ಲಿಸಿದ ನಂತರ ಸರ್ವೆಯರನ್ನು ನಾವು ನಮ್ಮ ಜಮೀನಿಗೆ ಕರೆದುಕೊಂಡು ಹೋಗಿ ಅಳತೆ ಮಾಡಿಸಿ ಭೂ ಪರಿವರ್ತನೆಗೆ ಅಪೇಕ್ಷಿತ ನಕ್ಷೆ ಎಂದು ಪಡಕೊಂಡು ಅರ್ಜಿ ಸಲ್ಲಿಸಿದರೆ ಭೂ ಪರಿವರ್ತನಾ ಆದೇಶ ಸಿಗುತ್ತಿತ್ತು. ಇದೇ ರೀತಿ ಏಕ ನಿವೇಶನಕ್ಕೆ ಅಪೇಕ್ಷಿತ ನಕ್ಷೆ ಎಂದು ಪಡಕೊಂಡು ದಾಖಲೆಗಳೊಂದಿಗೆ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿ ಮುಡಾದ ಸರ್ವೆಯರನ್ನು ನಮ್ಮ ಜಮೀನಿಗೆ ಕರೆದುಕೊಂಡು ಹೋಗಿ ಅಳತೆ ಮಾಡಿಸಿ ಏಕ ನಿವೇಶನ ಪಡೆದುಕೊಳ್ಳಲು ಸಾಧ್ಯವಾಗುತ್ತಿತ್ತು. ಇದೀಗ ಕರ್ನಾಟಕ ಸರ್ಕಾರ ಪ್ರಾಪಟಿ ಕಾರ್ಡ್‌ ರದ್ದು ಪಡಿಸಿರುವುದರಿಂದ ಸಮಸ್ಯೆಯ ಜತೆಗೆ ವಿಳಂಬವಾಗುತ್ತಿದ್ದು, ಮೊದಲಿನಂತೆ ವ್ಯವಸ್ಥೆ ಮಾಡಬೇಕು. ಈ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಈ ಬಗ್ಗೆ ಕಂದಾಯ ಸಚಿವರನ್ನು ನಾನು ಈಗಾಗಲೇ ಅಧಿವೇಶನದಲ್ಲಿಯೂ ಹಲವು ಬಾರಿ ಮನವಿ ಮಾಡಿದ್ದು, ಇದೊಂದು ಗಂಭೀರ ಸಮಸ್ಯೆಯಾಗಿದೆ ಎಂದು ಶಾಸಕ ವೇದವ್ಯಾಸ ಕಾಮತ್‌ ತಿಳಿಸಿದರು.

ವಾರ್ಡ್‌ 50ರಲ್ಲಿ 7-10 ಮನೆಗಳಿಗೆ ಸಂಪರ್ಕಕ್ಕೆ ಮೆಟ್ಟಿಲುಗಳಿದ್ದು, ತುರ್ತು ಸಂದರ್ಭದಲ್ಲಿ ತೊಂದರೆಯಾಗುತ್ತಿದೆ. ಅಲ್ಲಿ ಸಂಪರ್ಕ ರಸ್ತೆ ಕಲ್ಪಿಸಬೇಕು ಎಂದು ನಿವಾಸಿಗಳು ಮನವಿ ಸಲ್ಲಿಸಿದರು. ಈ ಬಗ್ಗೆ ಎಂಜೀನಿಯರ್‌ಗೆ ಜಂಟಿ ಸ್ಥಳ ಭೇಟಿಗೆ ಸೂಚಿಸಿದ ಶಾಸಕರು, ಶೀಘ್ರ ರಸ್ತೆ ಮಾಡಿಸುತ್ತೇವೆ ಎಂದು ಭರವಸೆ ನೀಡಿದರು.

ತೀರಾ ಕಷ್ಟದಲ್ಲಿರುವ ಬಡವರು ಸಮಸ್ಯೆಗಳೊಂದಿಗೆ ಪ್ರಜಾಸೇವೆಯಲ್ಲಿ ಭಾಗವಹಿಸುತ್ತಾರೆ. ಅವರಿಗೆ ಮಾನವೀಯತೆಯ ದೃಷ್ಟಿಯಿಂದ ತಮ್ಮ ಜವಾಬ್ಧಾರಿ ನಿರ್ವಹಿಸಲು ಅಧಿಕಾರಿಗಳು ಮುಂದಾಗಬೇಕು. ತ್ವರಿತ ಕೆಲಸ ಮಾಡಿ ಸಾರ್ವಜನಿಕರ ಅಹವಾಳಿಗೆ ಸ್ಪಂದಿಸಬೇಕು.

:-ವೇದವ್ಯಾಸ ಕಾಮತ್‌ ಶಾಸಕರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗಣೇಶ ವಿಗ್ರಹ ವಿಸರ್ಜನೆ ಸಂದರ್ಭ ನಾಲ್ಕು ಮಂದಿಗೆ ವಿದ್ಯುತ್ ಸ್ಪರ್ಶ : ಇಬ್ಬರು ಗಂಭೀರ
ಕಾರಿಡರ್‌ ಆವರಣಗೋಡೆ ಕುಸಿತ: ಓರ್ವ ಗಂಭೀರ, ಮೂವರಿಗೆ ಗಾಯ