ಜಾತಿ ಕತ್ತರಿ, ಧರ್ಮ ಸೂಜಿ ಇದ್ದಂತೆ

KannadaprabhaNewsNetwork | Published : Sep 11, 2024 1:08 AM

ಸಾರಾಂಶ

ಧರ್ಮವನ್ನು ಜಾತಿಗೆ ಅಂಟಿಸಬಾರದು. ಜಾತಿ ಹೆಸರಿನಲ್ಲಿ ಕೆಲವರು ಸಮುದಾಯ ಸಂಘಟನೆ ಮಾಡಿ, ಅಖಂಡ ವೀರಶೈವ ಧರ್ಮ ಒಡೆಯುವ ಪ್ರಯತ್ನ ಮಾಡುತ್ತಿದ್ದಾರೆ.

ಹುಬ್ಬಳ್ಳಿ:

ಧಾರ್ಮಿಕ, ಸಾಹಿತ್ಯಿಕ, ರಾಜಕೀಯ ವಲಯದಲ್ಲಿನ ಇಂದಿನ ಅತೃಪ್ತಿ, ಅಸಮಾಧಾನಗಳು ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿವೆ. ಜಾತಿ ಕತ್ತರಿ ಇದ್ದಂತೆ. ಧರ್ಮ ಸೂಜಿ ಇದ್ದಂತೆ. ಧರ್ಮವು ಸಮಾಜದ ಎಲ್ಲ ಜಾತಿ ಒಳಪಂಗಡಗಳನ್ನು ಒಂದುಗೂಡಿಸಿ, ಸನಾತನ ಧರ್ಮದ ಸಂದೇಶ ಸಾರುತ್ತದೆ. ಧರ್ಮ ಜಾತಿಗಿಂತ ದೊಡ್ಡದು ಎಂದು ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ತಾಲೂಕಿನ ಸುಳ್ಳ ಪಂಚಗೃಹ ಹಿರೇಮಠದಲ್ಲಿ ಜರುಗಿದ ಸೊನ್ನಲಗಿ ಶಿವಯೋಗಿ ಸಿದ್ದರಾಮೇಶ್ವರ ಪುರಾಣ ಮಂಗಳ ಧರ್ಮಸಭೆ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಖಾಕಿ, ಕಾವಿ ಮತ್ತು ಖಾದಿ ಹೊತ್ತ ಎಲ್ಲರೂ ಜಾತಿ ಹೆಸರಲ್ಲಿ ಸಮಾಜ ಒಡೆಯದೇ ಆರೋಗ್ಯಕರ ಸ್ವಾಸ್ಥ್ಯ ಕಾಪಾಡಲು ಶ್ರಮಿಸಬೇಕು ಎಂದರು.

ಧರ್ಮವನ್ನು ಜಾತಿಗೆ ಅಂಟಿಸಬಾರದು. ಜಾತಿ ಹೆಸರಿನಲ್ಲಿ ಕೆಲವರು ಸಮುದಾಯ ಸಂಘಟನೆ ಮಾಡಿ, ಅಖಂಡ ವೀರಶೈವ ಧರ್ಮ ಒಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಮಾನವ ಧರ್ಮ ಒಂದೇ ಎಂದು ಧರ್ಮ ಸಂದೇಶ ನೀಡುತ್ತಾ ಬಂದಿರುವ ವೀರಶೈವ ಧರ್ಮ ಅನೇಕರ ತಪ್ಪು ಮಾಹಿತಿ, ಸಂದೇಶಗಳಿಂದ ಕವಲು ದಾರಿಯಲ್ಲಿ ಸಾಗುತ್ತಿದೆ. ಇದು ಉತ್ತಮ ಬೆಳವಣಿಗೆ ಅಲ್ಲ ಎಂದು ಶ್ರೀ ಜಗದ್ಗುರುಗಳು ಹೇಳಿದರು.

ಮಹದಾಯಿ ಯೋಜನೆ ಜಾರಿಗೊಳಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಶ್ರಮಿಸಲಿ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ನೇತೃತ್ವದಲ್ಲಿ ಈ ಭಾಗದ ಎಲ್ಲ ಜನಪ್ರತಿನಿಧಿಗಳು ಆರೋಪ, ಪ್ರತ್ಯಾರೋಪ ಬಿಟ್ಟು ಮಹದಾಯಿ ಯೋಜನೆಗಾಗಿ ಪ್ರಾಮಾಣಿಕ ಪ್ರಯತ್ನ ಮಾಡಲಿ ಎಂದರು.

ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿ, ಇಂದಿನ ದಿನಗಳಲ್ಲಿ ಜನಜಾಗೃತಿ ಮೂಡಿಸಿ ಸಂಸ್ಕಾರವಂತರನ್ನು ರೂಪಿಸಲು ಮಠ-ಮಾನ್ಯಗಳು ಬೇಕು ಎಂದರು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪತ್ನಿ ಜ್ಯೋತಿ ಜೋಶಿ ಮಾತನಾಡಿ, ಧರ್ಮ ಸಂಸ್ಕಾರ ನೀಡುವ ಜಾತ್ರೆ, ಉತ್ಸವಗಳು ನಮ್ಮ ಸಂಸ್ಕೃತಿಯ ಪ್ರತೀಕ ಎಂದರು.

ಸುಳ್ಳ ಪಂಚಗೃಹ ಹಿರೇಮಠದ ಶಿವಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಶಿರಕೋಳ ಹಿರೇಮಠದ ಗುರುಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ಹೂಲಿ ಸಾಂಬಯ್ಯನಮಠದ ಉಮೇಶ ಶಿವಾಚಾರ್ಯರು, ಬ್ಯಾಹಟ್ಟಿ ಹಿರೇಮಠದ ಮರುಳಸಿದ್ದ ಶಿವಾಚಾರ್ಯರು, ಮೊರಬ ಜಡೆಮಠದ ಮಹೇಶ್ವರ ಶಿವಾಚಾರ್ಯರು, ತಿರುಮಲಕೊಪ್ಪದ ದಾನಯ್ಯ ದೇವರು ಉಪಸ್ಥಿತರಿದ್ದರು.

ವಿಶ್ವನಾಥ ಹಿರೇಗೌಡ್ರ, ಪ್ರಕಾಶ ಬೇಂಡಿಗೇರಿ, ಮುತ್ನಾಳ ಹಿರೇಮಠದ ಶಿವಾನಂದ ಸ್ವಾಮಿಗಳು, ಜಿಪಂ.ಮಾಜಿ ಉಪಾಧ್ಯಕ್ಷ ಶಿವಾನಂದ ಕರಿಗಾರ, ಕೆಸಿಸಿ ಬ್ಯಾಂಕ್‌ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹೊರಕೇರಿ, ಗುರು ರಾಯನಗೌಡರ, ಗಿರಿಜಾ ಹೂಗಾರ ಇದ್ದರು. ಸೋಮಾಪುರದ ಸಿದ್ದರಾಮಯ್ಯ ಹಿರೇಮಠ ಅವರು ನಡೆಸಿಕೊಂಡು ಬಂದ ಸೊನ್ನಲಗಿ ಶಿವಯೋಗಿ ಸಿದ್ದರಾಮೇಶ್ವರ ಪುರಾಣ ಮಂಗಲ ಜರುಗಿತು. ಶಿಕ್ಷಕ ಎಂ.ಎಸ್. ಶಿವಳ್ಳಿಮಠ ಕಾರ್ಯಕ್ರಮ ನಿರೂಪಿಸಿದರು. ಗೋಲಪ್ಪ ದ್ಯಾಮಕ್ಕನವರ ವಂದಿಸಿದರು. ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಆಗಲಿ

ಜನರ ವಿಕಾಸ ನಿರಂತರ ಅಭಿವೃದ್ಧಿ ಮೂಲಕ ಆಗಬೇಕೆ ವಿನಾ ದಿಢೀರ್‌ ಶ್ರೀಮಂತಿಕೆಯಿಂದ ಅಲ್ಲ. ರಾಜ್ಯ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆ ಹಲವರಿಗೆ ನೆರವಾಗಿದೆ. ಆದರೆ ಇತರ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆ ಆಗಿದೆ. ಗ್ರಾಮೀಣರ, ಬಡವರ ಬದುಕು ದುಸ್ತರವಾಗಿದೆ. ರಸ್ತೆ, ವಸತಿ, ನೀರಾವರಿ ಸೇರಿ ಎಲ್ಲ ವಲಯದ ಅಭಿವೃದ್ಧಿ ಆಗಬೇಕಿದೆ. ಸರ್ಕಾರ ಗ್ಯಾರಂಟಿ ಯೋಜನೆ ಹಾಗೂ ಗ್ಯಾರಂಟಿ ನಿಯಮಗಳನ್ನು ಮರು ಪರಿಶೀಲಿಸಬೇಕು. ರಾಜ್ಯದ ಬೊಕ್ಕಸ ಅಭಿವೃದ್ಧಿಗೆ ಬಳಕೆ ಮಾಡಬೇಕು. ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಮಾಡಬೇಕೆಂದು ಶ್ರೀ ರಂಭಾಪುರಿ ಶ್ರೀಗಳು ಅಭಿಪ್ರಾಯಪಟ್ಟರು.

Share this article