ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಬೂಕನಕೆರೆ ಗ್ರಾಮದಲ್ಲಿದ್ದ ಸಣ್ಣ ನೀರಾವರಿ ಇಲಾಖೆ ಉಪ ವಿಭಾಗ ಕಚೇರಿಯನ್ನು ನಾಗಮಂಗಲ ತಾಲೂಕಿಗೆ ವರ್ಗಾಯಿಸಿಕೊಂಡ ಸಚಿವ ಎನ್.ಚಲುವರಾಯಸ್ವಾಮಿ ಅವರ ನಡೆಗೆ ಕಾಂಗ್ರೆಸ್ ಮುಖಂಡರು ಸಮರ್ಥನೆ ಮಾಡಿಕೊಂಡಿರುದಕ್ಕೆ ತಾಲೂಕು ಜೆಡಿಎಸ್ ಪಕ್ಷ ಖಂಡಿಸಿದೆ.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜೆಡಿಎಸ್ ಮುಖಂಡರೊಂದಿಗೆ ಸುದ್ದಿಗಾರರೊಂದಿಗೆ ಮಾತನಾಡಿದ ತಾಲೂಕು ಜೆಡಿಎಸ್ ಅಧ್ಯಕ್ಷ ಎ.ಎನ್.ಜಾನಕೀರಾಂ, ಕ್ಷೇತ್ರದ ಕಾಂಗ್ರೆಸ್ಸಿಗರು ತಾಲೂಕಿನ ಪ್ರಗತಿಗೆ ವಿರುದ್ಧವಾಗಿದ್ದಾರೆ ಎಂದು ಕಿಡಿಕಾರಿದರು.
ಬೂಕನಕೆರೆ ಹೋಬಳಿಯಲ್ಲಿ ಸಣ್ಣ ನೀರಾವರಿ ಇಲಾಖೆ ಇರುವುದಕ್ಕೆ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ವಿಜಯ ಭಾಸ್ಕರ್ ಆಕ್ಷೇಪಿಸಿದ್ದಾರೆ. ಅದನ್ನೆ ನೆಪವಾಗಿರಿಸಿ ಸಚಿವ ಎನ್.ಚಲುವರಾಯಸ್ವಾಮಿ ನಮ್ಮ ತಾಲೂಕಿನ ಕಚೇರಿಯನ್ನು ತಮ್ಮ ಸ್ವ-ಕ್ಷೇತ್ರಕ್ಕೆ ಕಿತ್ತುಕೊಂಡು ಹೋಗುವ ಬದಲು ಅದನ್ನು ಕೆ.ಆರ್.ಪೇಟೆ ಪಟ್ಟಣಕ್ಕೆ ವರ್ಗಾಯಿಸಬಹುದಿತ್ತು ಎಂದರು.ಕಾಂಗ್ರೆಸ್ ಮುಖಂಡ ಬಿ.ಎಲ್.ದೇವರಾಜು ಅವರಿಗೆ ತಾಲೂಕಿನ ಬಗ್ಗೆ ಕಾಳಜಿ ಇದ್ದರೆ ನಮ್ಮ ಕ್ಷೇತ್ರದ ಕಚೇರಿಯನ್ನು ಸಚಿವರು ಕಿತ್ತುಕೊಂಡು ಹೋಗಿರುವುದನ್ನು ಸಮರ್ಥಿಸಿಕೊಳ್ಳುವ ಬದಲು ಸಚಿವರ ಮನವೊಲಿಸಿ ಅದನ್ನು ಕೆ.ಆರ್.ಪೇಟೆ ಪಟ್ಟಣಕ್ಕೆ ಸ್ಥಳಾಂತರಿಸುವಂತೆ ವ್ಯವಹರಿಸಬೇಕಾಗಿತ್ತು. ಬಿ.ಎಲ್.ದೇವರಾಜು ಅವರಿಗೆ ಕ್ಷೇತ್ರದ ಪ್ರಗತಿಗಿಂತ ಸಚಿವರನ್ನು ಮೆಚ್ಚಿಸುವುದೇ ಮುಖ್ಯವಾಗಿದೆ ಎಂದು ಟೀಕಿಸಿದರು.
ಕ್ಷೇತ್ರದಲ್ಲಿ ಎಚ್.ಟಿ.ಮಂಜು ಶಾಸಕರಾಗಿದ್ದರೂ ಸಚಿವ ಎನ್.ಚಲುವರಾಯಸ್ವಾಮಿ ಶಾಸಕರನ್ನು ಕಡೆಗಣಿಸಿ ತಾಲೂಕಿನ ಬೀರವಳ್ಳಿಯಲ್ಲಿ ವ್ಯಕ್ತಿಯೊಬ್ಬರಿಗೆ ಸರ್ಕಾರದ ಪರಿಹಾರ ಹಣದ ಚೆಕ್ ವಿತರಿಸಿದ್ದಾರೆ. ಸಚಿವರಾದವರು ಶಾಸಕರಿಗೆ ಗೌರವ ಕೊಡುವ ನಡವಳಿಕೆ ಪ್ರದರ್ಶಿಸಬೇಕು ಎಂದರು.ಕಾಂಗ್ರೆಸ್ ಮುಖಂಡ ಬಿ.ಎಲ್.ದೇವರಾಜು ಕ್ಷೇತ್ರದ ಅಭಿವೃದ್ಧಿಗೆ ಪೂರಕವಾದ ಸಣ್ಣ ನೀರಾವರಿ ಇಲಾಖೆ ತಾಲೂಕಿನಲ್ಲಿಯೇ ಉಳಿಯುವಂತೆ ಪ್ರಯತ್ನಿಸುವಂತೆ ಕಿವಿಮಾತು ಹೇಳಿದರು.
ತಾಪಂ ಸದಸ್ಯ ಬೂಕನಕೆರೆ ಹುಲ್ಲೇಗೌಡ ಮಾತನಾಡಿ, ತಾಲೂಕಿನ ಮಣ್ಣಿನ ಮಗ ಬಿ.ಎಸ್.ಯಡಿಯೂರಪ್ಪ ತಮ್ಮ ಹುಟ್ಟೂರಿಗೆ ನೆನಪಿನ ಕಾಣಿಕೆಯಾಗಿ ಸಣ್ಣ ನೀರಾವರಿ ಇಲಾಖೆ ನೀಡಿದ್ದರು. ಯಡಿಯೂರಪ್ಪ ಅವರ ಮೇಲಿನ ದ್ವೇಷಕ್ಕೆ ಅದನ್ನು ಕಿತ್ತುಕೊಳ್ಳಲಾಗಿದೆ ಎಂದು ಆರೋಪಿಸಿದರು.ಕಾಂಗ್ರೆಸ್ ಮುಖಂಡರು ತಾಲೂಕಿನ ಸ್ವತ್ತನ್ನು ಉಳಸಿಕೊಳ್ಳಲು ಹೋರಾಡುವ ಬದಲು ತಮ್ಮ ರಾಜಕೀಯ ಸ್ವಾರ್ಥಕ್ಕೆ ಅದನ್ನು ಸಮರ್ಥಿಸಿಕೊಂಡಿದ್ದಾರೆ. ಸಚಿವರು ಸ್ಥಳಾಂತರಗೊಂಡಿರುವ ಸಣ್ಣ ನೀರಾವರಿ ಇಲಾಖೆ ಆದೇಶವನ್ನು ಹಿಂಪಡೆದು ಅದನ್ನು ಬೂಕನಕೆರೆಯಲ್ಲಿಯೇ ಉಳಿಸಬೇಕು. ಅದು ಸಾಧ್ಯವಿಲ್ಲದಿದ್ದರೆ ಕೆ.ಆರ್.ಪೇಟೆ ಪಟ್ಟಣಕ್ಕೆ ಸ್ಥಳಾಂತರಿಸಬೇಕು. ಇಲ್ಲದಿದ್ದರೆ ಬೂಕನಕೆರೆ ಗ್ರಾಮದ ಜನ ಹೋರಾಟಕ್ಕಿಳಿಯುವುದಾಗಿ ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಟಿಎಪಿಸಿಎಂಎಸ್ ನಿರ್ದೇಶಕ ಟಿ.ಬಲದೇವ್, ಜೆಡಿಎಸ್ ಯುವ ಮುಖಂಡ ಅಲೋಕ್, ಎಂಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಚ್.ಕೆ.ಅಶೋಕ್, ಟಿಎಪಿಎಂಎಸ್ ನಿರ್ದೇಶಕ ಕೊರಟೀಗೆರೆ ದಿನೇಶ್, ಜೆಡಿಎಸ್ ವಿವಿಧ ಹೋಬಳಿ ಘಟಕಗಳ ಅಧ್ಯಕ್ಷರಾದ ವಸಂತಕುಮಾರ್, ರವಿಕುಮಾರ್ ಸೇರಿದಂತೆ ಹಲವರು ಇದ್ದರು.