ಉಡುಪಿ: ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಫಾರಂ-7 ಅರ್ಜಿಗಳ ದುರುಪಯೋಗ ತಡೆಯುವುದು ಹಾಗೂ ಅರ್ಹ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಕಥೊಲಿಕ್ ಸಭಾ ಉಡುಪಿ ಪ್ರದೇಶ ವತಿಯಿಂದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಸ್ವರೂಪ ಟಿ ಕೆ ಅವರಿಗೆ ಮನವಿ ಸಲ್ಲಿಸಲಾಯಿತು.ಕರ್ನಾಟಕ ರಾಜ್ಯಾದ್ಯಂತ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕಲು ಬಳಸಲಾಗುವ ಫಾರಂ-7 ಅರ್ಜಿಗಳ ದುರುಪಯೋಗದ ಬಗ್ಗೆ ವಿಶೇಷವಾಗಿ ಅಲ್ಪಸಂಖ್ಯಾತ ಸಮುದಾಯಗಳಾದ ಕ್ರೈಸ್ತರು ಹಾಗೂ ಮುಸ್ಲಿಮ ಸಮುದಾಯದಲ್ಲಿ ಆತಂಕ, ಅನುಮಾನಗಳೂ ವ್ಯಕ್ತವಾಗಿವೆ. ಈ ಹಿನ್ನೆಲೆಯಲ್ಲಿ, ಉಡುಪಿ ಜಿಲ್ಲೆಯಲ್ಲಿ ಇದುವರೆಗೆ ಸ್ವೀಕರಿಸಲಾದ ಫಾರಂ-7 ಅರ್ಜಿಗಳ ಒಟ್ಟು ಸಂಖ್ಯೆ, ಅಂಗೀಕರಿಸಲಾದ ಅರ್ಜಿಗಳು ಹಾಗೂ ತಿರಸ್ಕರಿಸಲಾದ ಅರ್ಜಿಗಳ ಸಂಪೂರ್ಣ ವಿವರಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು, ಯಾವುದೇ ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕುವ ಮೊದಲು ಸಂಬಂಧಪಟ್ಟ ಮತದಾರರಿಗೆ ಕಡ್ಡಾಯವಾಗಿ ನೋಟಿಸ್ ನೀಡಿ, ಆಕ್ಷೇಪಣೆ ಸಲ್ಲಿಸಲು ಹಾಗೂ ವಿಚಾರಣೆಯ ಸಂದರ್ಭದಲ್ಲಿ ತಮ್ಮ ವಾದವನ್ನು ಮಂಡಿಸಲು ಸಮರ್ಪಕ ಅವಕಾಶ ಕಲ್ಪಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಯಿತು.