ಸತೀಶ ಸಿ.ಎಸ್
ಕನ್ನಡಪ್ರಭ ವಾರ್ತೆ ರಟ್ಟೀಹಳ್ಳಿತಾಲೂಕಿನಾದ್ಯಂತ ದನಗಳ ಕಳ್ಳರ ಹಾವಳಿ ಹೆಚ್ಚಾಗಿದ್ದು, ಪದೇ ಪದೇ ಕಳ್ಳತನದ ಪ್ರಕರಣಗಳು ದಾಖಲಾದರೂ ಭೇದಿಸುವಲ್ಲಿ ಪೊಲೀಸರು ವಿಫಲವಾಗಿದ್ದಾರೆ ಎಂಬ ಆರೋಪ ರೈತ ವಲಯದಿಂದ ಕೇಳಿಬರುತ್ತಿದೆ.
ಹಾಡು ಹಗಲೇ ಕಳ್ಳತನ ನಡೆಯುತ್ತಿವೆ. ಕಳ್ಳರ ಭಯದಿಂದ ರೈತರು ತಮ್ಮ ಜಾನುವಾರುಗಳನ್ನು ಹಗಲು ರಾತ್ರಿ ಕಾಯುವಂತಾಗಿದೆ.ತಾಲೂಕಿನ ವಿವಿಧ ದೇವಸ್ಥಾನಗಳ ಹುಂಡಿ ಕಳ್ಳತನ, ಸರಣಿ ಮನೆ ಕಳ್ಳತನ, ಜಾನುವಾರು ಕಳ್ಳತನ, ಅಂಗಡಿ ಕಳ್ಳತನ ಸೇರಿದಂತೆ ಕಳ್ಳರ ಕೈ ಚಳಕವೇ ಮೇಲುಗೈ ಸಾಧಿಸಿದೆ.
ರಟ್ಟೀಹಳ್ಳಿ ಪಟ್ಟಣ ಸೇರಿದಂತೆ ಕಡೂರು, ಶಿರಗಂಬಿ, ಹಿರೆಮೋರಬ, ಹಿರೇಯಡಚಿ, ಕವಳಿಕುಪ್ಪಿ ಇನ್ನೂ ಅನೇಕ ಗ್ರಾಮಗಳಲ್ಲಿ ಕಳೆದ ಎರಡು ತಿಂಗಳುಗಳಿಂದ ರೈತರು ತಮ್ಮ ಕೊಟ್ಟಿಗೆಯಲ್ಲಿ ಕಟ್ಟಿದ್ದ ಲಕ್ಷಾಂತರ ಮೌಲ್ಯದ ಬೆಲೆಬಾಳುವ ದನಗಳನ್ನು ಕದ್ದು ಪರಾರಿಯಾಗುತ್ತಿದ್ದಾರೆ. ಈ ಬಗ್ಗೆ ರಟ್ಟೀಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದರೂ ಇನ್ನೂ ನಮ್ಮ ದನಗಳು ಪತ್ತೆಯಾಗಿಲ್ಲ ಎಂಬುದು ಕಳ್ಳತನವಾದ ಮಾಲೀಕರ ಅಳಲಾಗಿದೆ.ಕಳ್ಳರ ಕೈಚಳಕ:
ಊರಾಚಿನ ಒಂಟಿ ಮನೆಗಳಲ್ಲಿ ದನಗಳ್ಳತನ ಹೆಚ್ಚು ನಡೆಯುತ್ತಿವೆ. ರಾತ್ರಿ ಇಲ್ಲವೆ ಬೆಳಗಿನ ಜಾವದ ಸಮಯದಲ್ಲಿ ಮನೆಯ ಬಾಗಿಲು ಬೀಗ ಹಾಕಿ, ಬೈಕ್‌ಗಳ ಪ್ಲಗ್ ತೆಗೆದು, ಗಾಲಿಯ ಗಾಳಿ ತೆಗೆದು ಕೊಟ್ಟಿಗೆಯಲ್ಲಿನ ಬೆಲೆಬಾಳುವ ದನ ಕರುಗಳನ್ನು ಕದ್ದು ದೂರದಲ್ಲಿ ನಿಲ್ಲಿಸಿದ ವಾಹನಗಳಲ್ಲಿ ತುಂಬಿಕೊಂಡು ಪರಾರಿಯಾಗುತ್ತಿದ್ದಾರೆ ಎಂದು ಎತ್ತು ಕಳೆದುಕೊಂಡ ರೈತರು ಅಳಲು ತೋಡಿಕೊಂಡಿದ್ದಾರೆ.ಕಳ್ಳತನವಾದ ದನಗಳು ಯಾವ ಕಸಾಯಿಖಾನೆ ಸೇರುತ್ತಿವೆ, ಎಲ್ಲಿ ಮಾರಾಟವಾಗುತ್ತಿದೆ, ಇಂತಹ ದಂಧೆಗೆ ಕಡಿವಾಣ ಹಾಕುವವರು ಯಾರು? ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.
ನವೆಂಬರ್ ಒಂದೇ ತಿಂಗಳಿನಲ್ಲಿ ತಾಲೂಕಿನ ಹಿರೇಯಡಚಿ, ಕವಳಿಕುಪ್ಪಿ, ಕಡೂರ ಗ್ರಾಮಗಳಲ್ಲಿ ದನ ಕಳ್ಳತನವಾದ ಮೂರು ಪ್ರಕರಣ ದಾಖಲಾಗಿವೆ. ಆದರೆ ಒಂದು ಪ್ರಕರಣವನ್ನೂ ಪೊಲೀಸರು ಭೇದಿಸಿಲ್ಲ.ನ.೨೯ರ ಬೆಳಗಿನ ಜಾವ ಎತ್ತುಗಳು ಕಳ್ಳತನವಾಗಿದ್ದು, ಈ ಬಗ್ಗೆ ರಟ್ಟೀಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ಆದಷ್ಟು ಬೇಗ ಎತ್ತುಗಳನ್ನು ಹುಡುಕಿಕೊಡುವಂತೆ ಮನವಿ ಮಾಡಿದ್ದೇನೆ ಎನ್ನುತ್ತಾರೆ ಎತ್ತಿನ ಮಾಲೀಕ ಗಜೇಂದ್ರ ಸ್ಥಾನಿಕ
ತಾಲೂಕಿನ ಹಿರೇಯಡಚಿ, ಕವಳಿಕುಪ್ಪಿ, ಕಡೂರ ಗ್ರಾಮಗಳಲ್ಲಿ ದನ ಕಳ್ಳತನದ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಸುಳಿವು ದೊರೆತಿದ್ದು ಆದಷ್ಟು ಬೇಗ ಆರೋಪಿಗಳನ್ನು ಪತ್ತೆ ಹಚ್ಚಿ ಅವರನ್ನು ಬಂಧಿಸಿ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಪಿಎಸ್ಐ ಜೆ. ಜಗದೀಶ.