ಕನ್ನಡಪ್ರಭ ವಾರ್ತೆ ಕುಶಾಲನಗರ
ಪಂಚಾಯಿತಿ ಕಚೇರಿ ಆವರಣದ ಸಭಾಂಗಣದಲ್ಲಿ ಅಧ್ಯಕ್ಷೆ ಜಯಲಕ್ಷ್ಮಿಚಂದ್ರು ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಪಟ್ಟಣದ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಅಮೃತ್ 2.0 ಯೋಜನೆಯಡಿ ಕಾವೇರಿ ಕುಡಿಯುವ ನೀರಿನ ಪೂರೈಕೆ ಮಾಡುವ ಬಗ್ಗೆ ಚರ್ಚೆ ನಡೆಯಿತು.
ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಉಮೇಶ್ ಚಂದ್ರ ಮಾತನಾಡಿ, ಪಟ್ಟಣದ 20 ಕಿಲೋಮೀಟರ್ ವ್ಯಾಪ್ತಿಯ ಎರಡು ಸಾವಿರಕ್ಕೂ ಹೆಚ್ಚಿನ ಮನೆಗಳಿಗೆ ನೀರು ಪೂರೈಸಲು ಉದ್ದೇಶಿಸಿಸಲಾಗಿದೆ.ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ದಿಂಡಿಗಾಡು ಬಳಿ ಕಾವೇರಿ ನದಿಯಲ್ಲಿ ಜ್ಯಾಕ್ ವೆಲ್ ನಿರ್ಮಿಸಲು ಜಾಗ ಪರಿಶೀಲನೆ ನಡೆಸಲಾಗಿದೆ.ಈ ಯೋಜನೆ ಮುಂದಿನ ಎರಡು ವರ್ಷಗಳಲ್ಲಿ ಪೂರ್ಣಗೊಳಲಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ಶೇ.50, ರಾಜ್ಯ ಸರ್ಕಾರ ಶೇ.40 ಹಾಗೂ ಸ್ಥಳೀಯ ಸಂಸ್ಥೆ ಶೇ.10 ರಷ್ಟು ಪಾಲು ಹಣ ಭರಿಸಬೇಕಾಗುತ್ತದೆ ಎಂದು ಮಾಹಿತಿ ನೀಡಿದರು.ವಿಷಯ ಪ್ರಸ್ತಾಪಿಸಿದ ಬಿಜೆಪಿ ಸದಸ್ಯ ಬಿ. ಅಮೃತ್‌ರಾಜ್, ನಾವು ಪಟ್ಟಣ ಪಂಚಾಯಿತಿ ಸದಸ್ಯರೋ ಅಥವಾ ಪುರಸಭೆ ಸದಸ್ಯರೋ ? ಎಂಬ ಗೊಂದಲದಿಂದ ಇರುವುದಾಗಿ ತಿಳಿಸಿದರು.
ಬಿಜೆಪಿಯ ಡಿ.ಕೆ. ತಿಮ್ಮಪ್ಪ, ಜಯವರ್ಧನ್, ಜೆಡಿಎಸ್‌ನ ಜಗದೀಶ್ ಬಿ.ಎಲ್. ಧ್ವನಿಗೂಡಿಸಿದರು. ಈ ವೇಳೆ ಪ್ರತಿಕ್ರಿಯಿಸಿದ ಕಾಂಗ್ರೆಸ್‌ನ ಪ್ರಮೋದ್ ಮುತ್ತಪ್ಪ ವಿಷಯ ನ್ಯಾಯಾಲಯದಲ್ಲಿ ಇರುವುದರಿಂದ ಇಲ್ಲಿ ಈಗ ಈ ಪ್ರಸ್ತಾಪ ಸರಿಯಲ್ಲ ಎಂದರು.
ಯುಜಿಡಿ ಕಾಮಗಾರಿಯ ವಿಷಯ ಈ ಸಭೆಯಲ್ಲೂ ಪ್ರತಿಧ್ವನಿಸಿತು. ಇನ್ನು ಒಂದು ತಿಂಗಳ ಒಳಗಾಗಿ ಕಾಮಗಾರಿ ಮುಗಿಸದಿದ್ದರೆ ಪ್ರತಿಭಟನೆ ನಡೆಸುವುದಾಗಿ ಸದಸ್ಯ ಡಿ.ಕೆ. ತಿಮ್ಮಪ್ಪ ಎಚ್ಚರಿಸಿದರು.
ಇದಕ್ಕೆ ಉತ್ತರಿಸಿದ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸಹಾಯಕ ಕಾರ್ಯಪಾಲಕ ಅಭಿಯಂತರ ಉಮೇಶ್ ಚಂದ್ರ, ವಿದ್ಯುತ್ ಸಂಪರ್ಕ ಕಲ್ಪಿಸಿದ ಕೂಡಲೇ ಯುಜಿಡಿ ಕಾರ್ಯಾರಂಭ ಮಾಡಲಿದೆ ಎಂದು ಹೇಳಿದರು.
ಪಟ್ಟಣದಲ್ಲಿ ವಾಹನಗಳ ಪಾರ್ಕಿಂಗ್ ಸಮಸ್ಯೆ ಆಗುತ್ತಿರುವ ಬಗ್ಗೆ ಜೆಡಿಎಸ್‌ನ ಸುರಯ್ಯಾಭಾನು ವಿಷಯ ಪ್ರಸ್ತಾಪಿಸಿದರು. ಸರ್ಕಾರಿ ಆಸ್ಪತ್ರೆ ಬಳಿ ಆರಂಭವಾಗಿರುವ ಮಾಲ್‌ನಿಂದಾಗಿ ಈ ಭಾಗದಲ್ಲಿ ವಾಹನ ದಟ್ಟಣೆ, ಪಾರ್ಕಿಂಗ್ ಸಮಸ್ಯೆ ಆಗುತ್ತಿದ್ದು, ಈ ಮಾಲ್ ಮುಚ್ಚಿಸಿ ಎಂದು ಕೆಲವು ಸದಸ್ಯರು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಕೃಷ್ಣಪ್ರಸಾದ್, ಆ ಮಾಲ್‌ಗೆ ಕಚೇರಿಯಿಂದ ಎನ್‌ಒಸಿ ನೀಡಿಲ್ಲ. ಪರವಾನಗಿಯೂ ಇಲ್ಲ ಎಂದು ಮಾಹಿತಿ ಒದಗಿಸಿದರು.
ಪಟ್ಟಣದಲ್ಲಿ ಫುಟ್‌ಪಾತ್ ಅತಿಕ್ರಮಣ ತೆರವು ಮಾಡುವಂತೆ ಸದಸ್ಯ ಶೇಖ್ ಕಲೀಮುಲ್ಲಾ ಒತ್ತಾಯಿಸಿದರು. ಇದಕ್ಕೆ ಕೆ.ಆರ್.ರೇಣುಕಾ, ವಿ.ಎಸ್. ಆನಂದಕುಮಾರ್ ಧ್ವನಿಗೂಡಿಸಿದರು.
ಉಪಾಧ್ಯಕ್ಷೆ ಪುಟ್ಟ ಲಕ್ಷ್ಮಿ, ಸದಸ್ಯರು ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.