ಮಂಡ್ಯ: ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುತ್ತಿರುವುದನ್ನು ಖಂಡಿಸಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಡೆಸುತ್ತಿರುವ ನಿರಂತರ ಧರಣಿ ೮೨ನೇ ದಿನಕ್ಕೆ ಕಾಲಿಟ್ಟಿದೆ. ಹೋರಾಟ ಮುಂದುವರೆಸುವ ನಿರ್ಧಾರ ಕೈಗೊಂಡಿರುವ ಸಮಿತಿ ಸದಸ್ಯರು ಶನಿವಾರದಿಂದ ಸರದಿ ಉಪವಾಸ ಆರಂಭಿಸಿದ್ದಾರೆ.
ರೈತ ಸಂಘದ ಮುಖಂಡ ಗುನ್ನ ನಾಯಕನಹಳ್ಳಿ ಮುದ್ದೇಗೌಡ, ಪಣಕನಹಳ್ಳಿ ಬೋರಲಿಂಗೇಗೌಡ, ದೊಡ್ಡ ಗರುಡನಹಳ್ಳಿ ಕೃಷ್ಣೇಗೌಡ, ಕಿರಂಗೂರು ಪಾಪು, ಪಣಕನಹಳ್ಳಿ ಪಿ.ಜಿ ನಾಗೇಂದ್ರ, ಸಿದ್ದಯ್ಯನಕೊಪ್ಪಲು ಎಸ್,ಕೆ ರಾಮಕೃಷ್ಣ ಮೊದಲ ದಿನ ಉಪವಾಸ ನಡೆಸಿ ಕಾವೇರಿ ವಿಚಾರದಲ್ಲಿ ನ್ಯಾಯಕ್ಕಾಗಿ ಒತ್ತಾಯಿಸಿದರು.
ರಾಜ್ಯದಲ್ಲಿ ಬರ ಪರಿಸ್ಥಿತಿ ತಲೆದೋರಿದೆ. ಕುಡಿಯುವ ನೀರಿಗೂ ಹಾಹಾಕಾರ ಎದುರಾಗಿದೆ. ಆದರೂ ಪ್ರಾಧಿಕಾರ ಮತ್ತು ನೀರು ನಿಯಂತ್ರಣ ಸಮಿತಿ ವಸ್ತುಸ್ಥಿತಿಯನ್ನೇ ಅವಲೋಕನ ಮಾಡುತ್ತಿಲ್ಲ. ೧೫ ದಿನ, ಒಂದು ತಿಂಗಳವರೆಗೆ ನೀರು ಹರಿಸಿ ಎಂದು ಅವೈಜ್ಞಾನಿಕ ಆದೇಶ ಮಾಡುತ್ತಲೇ ಇವೆ. ರಾಜ್ಯಕ್ಕೆ ಭೇಟಿ ನೀಡಿ ನೀರು ಸಂಗ್ರಹದ ಬಗ್ಗೆ ಮಾಹಿತಿಯನ್ನೇ ಪಡೆಯದೆ ಏಕಪಕ್ಷೀಯವಾಗಿ ತಮಿಳುನಾಡಿನ ಹಿತ ಕಾಯುವ ಮೂಲಕ ಕರ್ನಾಟಕ ರಾಜ್ಯಕ್ಕೆ ದೊಡ್ಡ ಅನ್ಯಾಯ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸಮಿತಿಯ ಸಂಘಟನಾ ಕಾರ್ಯದರ್ಶಿ ಸುನಂದ ಜಯರಾಂ ಮಾತನಾಡಿ. ಬರಗಾಲದಿಂದ ಕರ್ನಾಟಕಕ್ಕೆ ಜಲಸಂಕಷ್ಟ ಎದುರಾಗಿದೆ. ಜಲಾಶಯಗಳಲ್ಲಿ ನೀರಿನ ಮಟ್ಟ ತಳ ಸೇರಿದೆ. ಈ ವರ್ಷ ಯಾವ ಅಣೆಕಟ್ಟೆಗಳೂ ತುಂಬಲೇ ಇಲ್ಲ. ಬರಗಾಲದಿಂದ ಬೆಳೆ ಬೆಳೆಯಲು ಸಾಧ್ಯವಾಗದೆ ತತ್ತರಿಸಿಹೋಗಿದ್ದಾರೆ. ಕುಡಿಯುವ ನೀರಿಗೂ ಹಾಹಾಕಾರವಿದೆ. ಇಂತಹ ಕಠೋರ ಪರಿಸ್ಥಿತಿಯಲ್ಲೂ ನೀರು ಬಿಡುವಂತೆ ಆದೇಶಿಸುತ್ತಿರುವುದು ಅಮಾನವೀಯ ಎಂದು ದೂಷಿಸಿದರು.
ಚಳವಳಿಯನ್ನು ಕೈ ಬಿಡಿ ಎನ್ನುವ ಜಿಲ್ಲಾ ಉಸ್ತುವಾರಿ ಸಚಿವರು ಮುಖ್ಯಮಂತ್ರಿ ಮತ್ತು ನೀರಾವರಿ ಸಚಿವರ ಜೊತೆ ಮಾತುಕತೆ ನಡೆಸಿ ಕರ್ನಾಟಕದ ಹಿತ ಕಾಪಾಡಲು ಒತ್ತಾಯಿಸಲಿ, ಹೋರಾಟ ರೂಪಿಸುವುದು ಸುಲಭದ ಮಾತಲ್ಲ, ನ್ಯಾಯ ಸಿಗುವವರೆಗೂ ಹೋರಾಟವನ್ನು ಮುಂದುವರಿಸುವ ಮೂಲಕ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಾಗುವುದು ಎಂದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಧರಣಿ ಸ್ಥಳಕ್ಕೆ ಬಂದರೂ ನೆರೆರಾಜ್ಯಕ್ಕೆ ನೀರು ಸ್ಥಗಿತ ಮಾಡುವುದಾಗಿ ದೃಢ ನಿಲುವು ಘೋಷಿಸಲಿಲ್ಲ, ಕಾನೂನಾತ್ಮಕವಾಗಿ ರಾಜ್ಯದ ಹಿತ ಕಾಪಾಡುವುದಾಗಿ ಹೇಳಿ ಹೋದರೂ ಆದರೆ ಇದುವರೆಗೂ ಯಾವುದೇ ಕ್ರಮ ವಹಿಸಿಲ್ಲ, ವಿಧಾನಮಂಡಲದ ಜಂಟಿ ಅಧಿವೇಶನ ಕರೆದು ಕಾವೇರಿ ವಿಚಾರವಾಗಿ ಸಮಗ್ರವಾಗಿ ಚರ್ಚೆ ದಿಟ್ಟ ನಿಲುವಿಗೆ ಒತ್ತಾಯ ಮಾಡಿದ್ದೆವು. ಅದಕ್ಕೂ ಸಹ ಮುಂದಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.