ಕನ್ನಡಪ್ರಭ ವಾರ್ತೆ ಅರಕಲಗೂಡು
ಈ ಬಾರಿ ಮುಂಗಾರು ಪೂರ್ವದಿಂದಲೂ ಸುರಿದ ಭಾರೀ ಮಳೆಯಿಂದಾಗಿ ತಂಬಾಕು ಬೆಳೆಗೆ ಹೆಚ್ಚು ಹಾನಿ ಉಂಟಾಗಿದೆ. ಇದೀಗ ಬಿದ್ದ ಮುಂಗಾರು ಮಳೆ ಅಬ್ಬರಕ್ಕೆ ಎರಡನೇ ಬಾರಿಗೆ ಕಾವೇರಿ ನದಿ ಉಕ್ಕಿ ತಗ್ಗು ಪ್ರದೇಶದಲ್ಲಿ ಬೆಳೆ ಮುಳುಗಡೆಯಾಗಿ ರೈತರ ಬದುಕು ಮೂರಾಬಟ್ಟೆಯಾಗಿದೆ.
ಹಾರಂಗಿ ಹಾಗೂ ಹೇಮಾವತಿ ಜಲಾಶಯ ಭರ್ತಿಯಾಗಿದ್ದು ನಿತ್ಯ ಹೆಚ್ಚುವರಿಯಾಗಿ ನೀರು ಹರಿಸಿದ್ದರಿಂದ ನದಿ ಉಕ್ಕಿ ಹರಿಯಲು ಕಾರಣವಾಗಿದೆ. ಪರಿಣಾಮವಾಗಿ ತಗ್ಗು ಪ್ರದೇಶದತ್ತ ನೀರು ನುಗ್ಗಿ ವಾರಗಟ್ಟಲೇ ಪ್ರವಾಹ ಪರಿಸ್ಥಿತಿ ತಲೆದೋರಿದೆ. ಮಳೆ ಅಬ್ಬರಕ್ಕೆ ಸಿಲುಕಿ ತಂಬಾಕು, ಶುಂಠಿ, ದ್ವಿದಳ ಧಾನ್ಯ ಹಾಗೂ ತೋಟದ ಬೆಳೆಗಳು ಹಾನಿಗೊಳಗಾಗಿದ್ದು, ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಕೊಣನೂರು ಹಾಗೂ ರಾಮನಾಥಪುರ ಹೋಬಳಿ ಭಾಗದ ತಗ್ಗು ಪ್ರದೇಶದಲ್ಲಿ ಹೊಗೆಸೊಪ್ಪು ಗಿಡಗಳು ಕಾವೇರಿ ನದಿ ಪ್ರವಾಹಕ್ಕೆ ಸಿಲುಕಿ ನಾಶವಾಗಿವೆ.ಕಳೆದ ಬಾರಿ ತಂಬಾಕಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ದೊರೆತ ಖುಷಿಯಲ್ಲಿ ರೈತರು ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಸಸಿಮಡಿ ಬೆಳೆಸಿ ನಾಟಿ ಮಾಡಿದ್ದರು. ನಾಟಿ ಸಮಯದಲ್ಲಿ ಉತ್ತಮವಾಗಿ ಬಿದ್ದ ಮಳೆಯಿಂದ ಬೆಳೆ ಬೆಳವಣಿಗೆ ಕಾಣಬೇಕೆನ್ನುವಷ್ಟರಲ್ಲಿ ಅತಿವೃಷ್ಟಿ ಹೊಡೆತಕ್ಕೆ ಸಿಲುಕಿ ಅಪಾರ ಪ್ರಮಾಣದಲ್ಲಿ ಇಳುವರಿ ಕುಂಠಿತಗೊಂಡಿದೆ. ತಂಬಾಕು ನಾಟಿ ಮಾಡಿದ ಆರಂಭದ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಕೃಷಿ ಇಲಾಖೆ ಮಾಹಿತಿ ಪ್ರಕಾರ 51.4 ಮಿ.ಮೀ. ಮತ್ತು 96.1 ಮಿ.ಮೀ. ವಾಡಿಕೆ ಮಳೆ ಬದಲಿಗೆ 68.3 ಮಿಮೀ ಹಾಗೂ 256.4 ಮಿಮೀ ಮಳೆಯಾಗಿದೆ. ಮೇ ತಿಂಗಳಲ್ಲಿ ವಾಡಿಕೆಗಿಂತ 167 ಮಿಮೀ ಅಧಿಕ ಮಳೆಯಾಗಿದ್ದರಿಂದ ನಾಟಿ ಮಾಡಿದ ಗಿಡಗಳು ಮೇಲೇಳದಂತಾಗಿವೆ.
ಬಿಳಿಸುಳಿಗೆ ಮುಸುಕಿನ ಜೋಳ ಬಲಿ:
-------------
ಅರೆಮಲೆನಾಡು ಪ್ರದೇಶವಾದ ಮಲ್ಲಿಪಟ್ಟಣ ಹೋಬಳಿ ಭಾಗದಲ್ಲಿ ಸತತ ಮಳೆ ಸುರಿಯುತ್ತಿರುವ ಪರಿಣಾಮ ಕಾಫಿ ಬೆಳೆ ಹಾನಿಯಾಗಿದೆ. ಕಾಳು ಮೆಣಸು ಕೊಳೆತು ಹಾನಿಗೀಡಾಗಿದೆ. ಗಿಡಗಳಲ್ಲಿ ಕಾಫಿ ಕಾಯಿಗಳು ಕೊಳೆತು ನೆಲಕ್ಕುದುರಿದ್ದು ಶೇ. 30ರಷ್ಟು ಫಸಲು ನಾಶವಾಗಿದೆ.
-ದೇವರಾಜೇಗೌಡ, ಕಾಫಿ ಬೆಳೆಗಾರ.
- ರೈತ, ರಂಗೇಗೌಡ,
ಮಳೆಯಿಂದಾಗಿ ತಂಬಾಕು ಬೆಳೆಗೆ ಹೆಚ್ಚು ಹಾನಿ ಉಂಟಾಗಿದೆ. ಕಾವೇರಿ ನದಿ ವ್ಯಾಪ್ತಿಯ ತಗ್ಗು ಪ್ರದೇಶದಲ್ಲಿ ಬೆಳೆ ಮುಳುಗಿದ್ದು, ಇಳುವರಿ ಕುಂಠಿತಗೊಂಡಿದೆ. ಮುಸುಕಿನ ಜೋಳಕ್ಕೆ ಬಿಳಿಸುಳಿ ರೋಗ ಕಾಣಿಸಿಕೊಂಡಿರುವ ಕುರಿತು ಸಮೀಕ್ಷಾ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ.
- ಕೆ.ಜೆ. ಕವಿತಾ, ತಾಲೂಕು ಸಹಾಯಕ ಕೃಷಿ ನಿರ್ದೇಶಕಿ, ಅರಕಲಗೂಡು.-------
ಅರಕಲಗೂಡು ತಾಲೂಕಿನಲ್ಲಿ ಮಳೆಯಿಂದಾಗಿ ಶುಂಠಿ ಬೆಳೆಗೆ ಹೆಚ್ಚಾಗಿ ಕೊಳೆ ರೋಗ ಬಾಧಿಸಿ ಹಾನಿಯಾಗಿದೆ. 750 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದ್ದ ಆಲೂಗಡ್ಡೆ ಹುಲುಸಾಗಿ ಬೆಳೆದಿದೆ.-ರಾಜೇಶ್, ತೋಟಗಾರಿಕೆ ಇಲಾಖೆ ನಿರ್ದೇಶಕ, ಅರಕಲಗೂಡು.