ಕರ್ನಾಟಕಕ್ಕೆ ಮತ್ತೊಮ್ಮೆ ಕಾವೇರಿ ನೀರು ಆಘಾತ

KannadaprabhaNewsNetwork |  
Published : Sep 09, 2026, 02:00 AM IST
ಕಾವೇರಿ | Kannada Prabha

ಸಾರಾಂಶ

ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ಆಘಾತವಾಗಿದೆ. ರಾಜ್ಯದ ಅಧಿಕಾರಿಗಳ ಪ್ರಬಲ ವಾದದ ಹೊರತಾಗಿಯೂ ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ನಿತ್ಯ 6 ಸಾವಿರ ಕ್ಯೂಸೆಕ್‌ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯುಎಂಎ) ನಿರ್ದೇಶನ ನೀಡಿದೆ.

ಕನ್ನಡಪ್ರಭ ವಾರ್ತೆ ನವದೆಹಲಿ:

ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ಆಘಾತವಾಗಿದೆ. ರಾಜ್ಯದ ಅಧಿಕಾರಿಗಳ ಪ್ರಬಲ ವಾದದ ಹೊರತಾಗಿಯೂ ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ನಿತ್ಯ 6 ಸಾವಿರ ಕ್ಯೂಸೆಕ್‌ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯುಎಂಎ) ನಿರ್ದೇಶನ ನೀಡಿದೆ. ಆ ಮೂಲಕ ತಮಿಳುನಾಡಿಗೆ ನಿತ್ಯ 6 ಸಾವಿರ ಕ್ಯೂಸೆಕ್ ನೀರು ಹರಿಸಬೇಕೆಂಬ ಕಾವೇರಿ ನೀರು ನಿಯಂತ್ರಣ ಸಮಿತಿಯ (ಸಿಡಬ್ಲ್ಯುಆರ್‌ಸಿ) ಶಿಫಾರಸ್ಸನ್ನು ಎತ್ತಿ ಹಿಡಿದಿದೆ.ದೆಹಲಿಯ ಪ್ರಾಧಿಕಾರದ ಕಚೇರಿಯಲ್ಲಿ ಸಭೆ ನಡೆಯಿತು. ಸಭೆಯಲ್ಲಿ ತಮಿಳುನಾಡಿನ ಅಧಿಕಾರಿಗಳು ವರ್ಚ್ಯುಯಲ್ ಮೂಲಕ ಭಾಗವಹಿಸಿದ್ದರು. ಕರ್ನಾಟಕದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಕೂಡ ವರ್ಚ್ಯುಯಲ್ ಮೂಲಕ ಸಭೆಯಲ್ಲಿ ಪಾಲ್ಗೊಂಡಿದ್ದರು.

ಬೆಳಗ್ಗೆ 11 ಗಂಟೆಗೆ ಸಿಡಬ್ಲ್ಯುಆರ್‌ಸಿ ಸಭೆ ನಡೆಯಿತು. ರಾಜ್ಯದ ಕುಡಿಯುವ ನೀರಿನ ಅಗತ್ಯತೆ ಮತ್ತು ರೈತರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕದ ಪರ ವಾದ ಮಂಡಿಸಿದ ಗೌರವ್‌ ಗುಪ್ತಾ, ಈ ಬಾರಿ ರಾಜ್ಯದಲ್ಲಿ ಮುಂಗಾರು ಮಳೆಯ ತೀವ್ರ ಕೊರತೆ ಎದುರಾಗಿದ್ದು, ಬರದ ವಾತಾವರಣ ನಿರ್ಮಾಣವಾಗಿದೆ. ಕಾವೇರಿ ಜಲಾಶಯದಲ್ಲಿ ನೀರಿನ ಸಂಗ್ರಹ ತೀವ್ರವಾಗಿ ಕುಸಿದಿದ್ದು, ಸದ್ಯ ಕುಡಿಯುವ ನೀರಿನ ಅಗತ್ಯಕ್ಕೆ ಮಾತ್ರ ನೀರು ಲಭ್ಯವಿದೆ. ಕೃಷಿ ಉದ್ದೇಶಕ್ಕೂ ನೀರನ್ನು ಬಳಸುತ್ತಿಲ್ಲ. ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳ ಜನರಿಗೆ ಕುಡಿಯುವ ನೀರು ಪೂರೈಸುವುದೇ ಮೊದಲ ಆದ್ಯತೆ. ತಮಿಳುನಾಡಿಗೆ ಹಿಂಗಾರು ಮಳೆಯಿಂದ ನೀರಿನ ಲಭ್ಯತೆ ಸಾಧ್ಯವಾಗಲಿದ್ದು, ಕರ್ನಾಟಕಕ್ಕೆ ಮುಂಗಾರು ಕೈಕೊಟ್ಟಿರುವುದರಿಂದ ಈಗಿನ ಪರಿಸ್ಥಿತಿಯಲ್ಲಿ ನೀರು ಬಿಡಲು ಸಾಧ್ಯವಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು. ಸಂಕಷ್ಟ ಸೂತ್ರ ಅನುಸರಿಸುವಂತೆ ಮನವಿ ಮಾಡಿದರು.ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ತಮಿಳುನಾಡು, ಮುಂದಿನ 15 ದಿನ ನಿತ್ಯ 20 ಸಾವಿರ ಕ್ಯೂಸೆಕ್‌ ನೀರು ಬಿಡುಗಡೆಗೆ ಒತ್ತಾಯಿಸಿತು. ವಾದ-ಪ್ರತಿವಾದ ಆಲಿಸಿದ ಸಿಡಬ್ಲ್ಯುಆರ್‌ಸಿ, ಕರ್ನಾಟಕದ ವಾದಕ್ಕೆ ಮನ್ನಣೆ ನೀಡಿ, ನೀರಿನ ಹರಿವನ್ನು 9 ಸಾವಿರ ಕ್ಯೂಸೆಕ್‌ನಿಂದ 6 ಸಾವಿರ ಕ್ಯೂಸೆಕ್‌ಗೆ ಇಳಿಸಿತು. ಮುಂದಿನ 15 ದಿನಗಳ ಕಾಲ ನಿತ್ಯ 6 ಸಾವಿರ ಕ್ಯೂಸೆಕ್‌ ನೀರು ಹರಿಸುವಂತೆ ಶಿಫಾರಸ್ಸು ಮಾಡಿತು.

ಬಳಿಕ, ಮಧ್ಯಾಹ್ನ 3 ಗಂಟೆಗೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆ ನಡೆಯಿತು. ಕರ್ನಾಟಕದ ಮೇಲ್ಮನವಿಯ ವಿಚಾರಣೆ ನಡೆಸಿದ ಪ್ರಾಧಿಕಾರ, ಸಿಡಬ್ಲ್ಯುಆರ್‌ಸಿಯ ಶಿಫಾರಸ್ಸನ್ನು ಎತ್ತಿ ಹಿಡಿಯಿತು. ಹೀಗಾಗಿ, ಮುಂದಿನ 15 ದಿನಗಳ ಕಾಲ ನಿತ್ಯ 6 ಸಾವಿರ ಕ್ಯೂಸೆಕ್‌ನಂತೆ ಒಟ್ಟು 7.8 ಟಿಎಂಸಿಯಷ್ಟು ನೀರನ್ನು ತಮಿಳುನಾಡಿಗೆ ಹರಿಸುವ ಅನಿವಾರ್ಯತೆ ಕರ್ನಾಟಕಕ್ಕೆ ಎದುರಾಗಿದೆ.ಕರ್ನಾಟಕದ ವಾದಕ್ಕೆ ಮನ್ನಣೆ:

ಈ ಹಿಂದೆ ಆಗಸ್ಟ್‌ 11ರಂದು ನಡೆದಿದ್ದ ಸಭೆಯಲ್ಲಿ ತಮಿಳುನಾಡಿಗೆ 15 ದಿನ ನಿತ್ಯ 12 ಸಾವಿರ ಕ್ಯೂಸೆಕ್‌ ನೀರು ಬಿಡುಗಡೆಗೆ ಪ್ರಾಧಿಕಾರ ಆದೇಶ ನೀಡಿತ್ತು. ಬಳಿಕ, ಆ.25ರಂದು ನಡೆದ ಪ್ರಾಧಿಕಾರದ ಸಭೆಯಲ್ಲಿ ತಮಿಳುನಾಡಿಗೆ 15 ದಿನ ನಿತ್ಯ 9 ಸಾವಿರ ಕ್ಯೂಸೆಕ್‌ ನೀರು ಬಿಡುಗಡೆಗೆ ಆದೇಶ ನೀಡಲಾಗಿತ್ತು. ಈಗ ಈ ಹರಿವನ್ನು ನಿತ್ಯ 6 ಸಾವಿರ ಕ್ಯೂಸೆಕ್‌ಗೆ ಇಳಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಾವಿತ್ರ್ಯತೆಯಿಂದ ಗಣೇಶೋತ್ಸವ ಆಚರಿಸಿ
72 ಸಾವಿರ ಹುದ್ದೆ ಭರ್ತಿ, ಕೆಪಿಎಸ್ಸಿ ಭ್ರಷ್ಟಾಚಾರ ತಡೆಗೆ ಆಗ್ರಹ