ಬಿಬಿಬಿಎಂಪಿ ವ್ಯಾಪ್ತಿಯ 110 ಹ‍ಳ್ಳಿಗಳಿಗೆ ವಿಜಯದಶಮಿಗೆ ಕಾವೇರಿ ನೀರು : ಡಿ.ಕೆ.ಶಿವಕುಮಾರ್

KannadaprabhaNewsNetwork |  
Published : Sep 24, 2024, 01:50 AM ISTUpdated : Sep 24, 2024, 07:48 AM IST
ಹಾರೋಹಳ್ಳಿ ಪಂಪಿಂಗ್ ಕೇಂದ್ರವನ್ನು ಪರಿಶೀಲನೆ ನಡೆಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್. | Kannada Prabha

ಸಾರಾಂಶ

ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಿಗೆ ಕಾವೇರಿ ನೀರು ಒದಗಿಸುವ 'ಕಾವೇರಿ 5ನೇ ಹಂತ' ಯೋಜನೆಯನ್ನು ವಿಜಯದಶಮಿ ಸಂದರ್ಭದಲ್ಲಿ ಲೋಕಾರ್ಪಣೆಗೊಳಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಘೋಷಿಸಿದ್ದಾರೆ.  

 ಬೆಂಗಳೂರು : ಬಿಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳ ಸುಮಾರು 4 ಲಕ್ಷ ಮನೆಗಳಿಗೆ ಕಾವೇರಿ ನೀರು ಒದಗಿಸುವ ಬೃಹತ್ ಯೋಜನೆ ‘ಕಾವೇರಿ 5ನೇ ಹಂತ’ವನ್ನು ವಿಜಯದಶಮಿ ಸಂದರ್ಭದಲ್ಲಿ ಲೋಕಾರ್ಪಣೆಗೊಳಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಘೋಷಿಸಿದ್ದಾರೆ.

ಸೋಮವಾರ ಮೈಸೂರು ರಸ್ತೆಯ ಕೃಷ್ಣಪ್ರಿಯ ಕಲ್ಯಾಣ ಮಂಟಪ ಮತ್ತು ಕೆಂಗೇರಿ ಬಳಿ ಬೃಹತ್ ಪೈಪ್‌ಲೈನ್‌ ಅಳವಡಿಕೆ ಕಾಮಗಾರಿ, ಕನಕಪುರದ ಹಾರೋಹಳ್ಳಿಯಲ್ಲಿ ನೂತನ ಪಂಪಿಂಗ್ ಸ್ಟೇಷನ್ ಮತ್ತು ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ತೊರೆಕಾಡನಹಳ್ಳಿಯಲ್ಲಿರುವ ನೀರು ಶುದ್ದೀಕರಣ ಘಟಕಕ್ಕೆ ಭೇಟಿ ನೀಡಿ ಕೊನೆ ಹಂತದ ಕಾಮಗಾರಿಗಳ ಪರಿಶೀಲನೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಕಾವೇರಿ 5ನೇ ಹಂತ ಯೋಜನೆಯು ಭಾರತ ದೇಶದ ಅತೀದೊಡ್ಡ ಕುಡಿಯುವ ನೀರು ಸರಬರಾಜು ಯೋಜನೆಗಳಲ್ಲಿ ಒಂದಾಗಿದೆ. ಒಂದೇ ಹಂತದಲ್ಲಿ 50 ಲಕ್ಷ ಜನರಿಗೆ ನೀರು ಒದಗಿಸಲು ಸಮರ್ಥವಾಗಿದೆ. ದೇಶದ ಮೆಟ್ರೋ ಸಿಟಿಗಳನ್ನು ಹೊರತುಪಡಿಸಿ ಬೇರೆ ಯಾವುದೇ ನಗರಗಳಲ್ಲೂ ಇಂತಹ ಯೋಜನೆ ಅನುಷ್ಠಾನಗೊಳಿಸಿಲ್ಲ. 775 ಎಂ.ಎಲ್‌.ಡಿ ಸಾಮರ್ಥ್ಯದ ಅತ್ಯಾಧುನಿಕ ನೀರು ಶುದ್ಧೀಕರಣ ಘಟಕವನ್ನು ಹೊಂದಿರುವುದು ಈ ಯೋಜನೆಯ ಪ್ರಮುಖ ಅಂಶವಾಗಿದೆ. ಸಣ್ಣ ಪುಟ್ಟ ಕಾಮಗಾರಿಗಳು 15 ದಿನಗಳಲ್ಲಿ ಮುಗಿಸಿ ಉದ್ಘಾಟನೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಕಾವೇರಿ 5ನೇ ಹಂತದ ಯೋಜನೆಯಲ್ಲಿ ಟಿ.ಕೆ.ಹಳ್ಳಿ, ಹಾರೋಹಳ್ಳಿ ಮತ್ತು ತಾತಗುಣಿಯಲ್ಲಿ ಮೂರು ಅತ್ಯಾಧುನಿಕ ತಂತ್ರಜ್ಞಾನದ ಸುಧಾರಿತ ಬೂಸ್ಟರ್ ಪಂಪಿಂಗ್ ಕೇಂದ್ರಗಳನ್ನು ನಿರ್ಮಿಸಲಾಗಿದೆ. ಈ ಪಂಪಿಂಗ್‌ ಕೇಂದ್ರಗಳ ಸಹಾಯದಿಂದ ಸುಮಾರು 110 ಕಿ.ಮೀ ದೂರದಿಂದ 500 ಹಾಗೂ 2,200 ಎಂ.ಎಂ.ನಷ್ಟು ವ್ಯಾಸದ ಉಕ್ಕಿನ ಪೈಪ್‌ಗಳ ಮೂಲಕ ಕಾವೇರಿ ನೀರನ್ನು 450 ಮೀಟರ್‌ ಎತ್ತರಕ್ಕೆ ಹರಿಸಿ ಬೆಂಗಳೂರು ನಗರಕ್ಕೆ ನೀರನ್ನು ಪೂರೈಸಲಾಗುತ್ತದೆ. ಈ ಯೋಜನೆಯ ಮೂಲಕ ಬೆಂಗಳೂರು ನಗರವು ವಾಟರ್ ಸರ್‌ಪ್ಲಸ್ ನಗರವಾಗಲಿದೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.

ಈ ವೇಳೆ ಶಾಸಕರಾದ ಎಸ್.ಟಿ.ಸೋಮಶೇಖರ್, ನರೇಂದ್ರ ಸ್ವಾಮಿ, ವಿಧಾನ ಪರಿಷತ್‌ ಸದಸ್ಯ ರವಿಕುಮಾರ್‌, ದಿನೇಶ್‌ ಗೂಳಿಗೌಡ, ಜಲಮಂಡಳಿ ಅಧ್ಯಕ್ಷ ಡಾ। ರಾಮಪ್ರಸಾತ್ ಮನೋಹರ್ ಉಪಸ್ಥಿತರಿದ್ದರು.ಸುಮಾರು 50 ಲಕ್ಷ ಜನರ ನೀರಿನ ಬೇಡಿಕೆ ಪೂರೈಸಬಲ್ಲ ‘ಮಾಡರ್ನ್ ಎಂಜಿನಿಯರಿಂಗ್ ಮಾರ್ವೇಲ್’ ಕಾವೇರಿ 5ನೇ ಹಂತ ಯೋಜನೆಯನ್ನು ವಿಜಯದಶಮಿಯ ಶುಭ ಮುಹೂರ್ತದಲ್ಲಿ ಉದ್ಘಾಟಿಸಲಾಗುತ್ತದೆ.

-ಡಿ.ಕೆ.ಶಿವಕುಮಾರ್, ಉಪಮುಖ್ಯಮಂತ್ರಿ 

ಬೆಂಗಳೂರಿಗೆ ಮಾಸಿಕ 2.4 ಟಿಎಂಸಿ ನೀರು:

ಪ್ರತಿ ತಿಂಗಳು ಬೆಂಗಳೂರಿಗೆ ಹಾಲಿ 1.58 ಟಿಎಂಸಿ ಕುಡಿಯುವ ನೀರು ಪೂರೈಕೆ ಆಗುತ್ತಿದೆ. ಈ ಯೋಜನೆಯ ಅನುಷ್ಠಾನದಿಂದ 2.4 ಟಿಎಂಸಿಗೆ ಏರಿಕೆಯಲಾಗಿದೆ. ನಗರದ ಅಗತ್ಯಕ್ಕಿಂತ ಹೆಚ್ಚು ನೀರು ಲಭ್ಯವಾಗಲಿದೆ.

50 ಅಂತಸ್ತಿನ ಕಟ್ಟಡದ ಎತ್ತರಕ್ಕೆ ನೀರು ಪಂಪ್:

ಕಾವೇರಿ ನದಿಗೆ ಶಿವನಸಮುದ್ರ ಬಳಿ ನಿರ್ಮಿಸಿರುವ ಶಿವ ಅಣೆಕಟ್ಟೆಯಿಂದ ಬೃಹತ್ ಪೈಪ್‌ಗಳ ಮೂಲಕ ನೆಟ್ಕಲ್ ಸಮನಾಂತರ ಜಲಾಶಯಕ್ಕೆ ಹರಿಸಿ, ಅಲ್ಲಿಂದ ಟಿ.ಕೆ.ಹಳ್ಳಿ ಜಲಮಂಡಳಿ ಘಟಕಕ್ಕೆ ಹರಿಸಲಾಗುತ್ತದೆ. ಅಲ್ಲಿ ನೀರನ್ನು ಶುದ್ಧೀಕರಿಸಿ ಹಾರೋಹಳ್ಳಿ ಮತ್ತು ತಾತಗುಣಿಯಲ್ಲಿ ಬೂಸ್ಟರ್ ಪಂಪಿಂಗ್ ಮೂಲಕ ನಗರಕ್ಕೆ ಹರಿಸಲಾಗುತ್ತದೆ. 110 ಕಿ.ಮೀ. ದೂರದಿಂದ ನಗರಕ್ಕೆ ನೀರು ಬರುವಷ್ಟರಲ್ಲಿ ಸುಮಾರು 450 ಮೀಟರ್ (50 ಅಂತಸ್ತಿನ ಕಟ್ಟಡದಷ್ಟು ಎತ್ತರ) ಎತ್ತರಕ್ಕೆ ಹರಿಸಿದಂತಾಗುತ್ತದೆ. ಈಗ ಇರುವ ಪೈಪ್‌ಲೈನ್ ಪಕ್ಕದಲ್ಲೇ ಹೊಸ ಪೈಪ್‌ಗಳನ್ನು ಅಳವಡಿಸಲಾಗಿದೆ. ಶುದ್ಧೀಕರಣ ಘಟಕಗಳು ಮತ್ತು ಪಂಪಿಂಗ್ ಕೇಂದ್ರಗಳನ್ನು ಹೊಸದಾಗಿ ಸ್ಥಾಪಿಸಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''