ರನ್ಯಾ ಚಿನ್ನ ಕಳ್ಳಸಾಗಣೆ ಪ್ರಕರಣ : ದಿಢೀರ್ ಮಹತ್ವದ ಬೆಳವಣಿಗೆ - ‘ಪ್ರಭಾವಿ’ ರಾಜಕಾರಣಿ ಹೆಸರು

KannadaprabhaNewsNetwork | Updated : Mar 09 2025, 04:50 AM IST

ಸಾರಾಂಶ

  ಕನ್ನಡ ಚಿತ್ರ ನಟಿ ರನ್ಯಾ ವಿರುದ್ಧದ ಚಿನ್ನ ಕಳ್ಳ ಸಾಗಣೆ ಪ್ರಕರಣ ಸಂಬಂಧ ದಿಢೀರ್ ಮಹತ್ವದ ಬೆಳವಣಿಗೆ ನಡೆದಿದೆ. ಕಂದಾಯ ಗುಪ್ತಚರ ಜಾರಿ ನಿರ್ದೇಶನಾಲಯ (ಡಿಆರ್‌ಐ) ಬಳಿಕ ಕೇಂದ್ರ ತನಿಖಾ ದಳ (ಸಿಬಿಐ) ರಂಗ ಪ್ರವೇಶ ಮಾಡಿದ್ದು, ಈ ಸಂಬಂಧ ಪ್ರತ್ಯೇಕವಾಗಿ ಸಿಬಿಐ ಎಫ್‌ಐಆರ್ ದಾಖಲಿಸಿಕೊಂಡಿದೆ.

 ಬೆಂಗಳೂರು : ರಾಜ್ಯ ಪೊಲೀಸ್ ಗೃಹ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಹಾಗೂ ಡಿಜಿಪಿ ರಾಮಚಂದ್ರ ರಾವ್‌ ಅವರ ಮಲಮಗಳು ಹಾಗೂ ಕನ್ನಡ ಚಿತ್ರ ನಟಿ ರನ್ಯಾ ವಿರುದ್ಧದ ಚಿನ್ನ ಕಳ್ಳ ಸಾಗಣೆ ಪ್ರಕರಣ ಸಂಬಂಧ ದಿಢೀರ್ ಮಹತ್ವದ ಬೆಳವಣಿಗೆ ನಡೆದಿದೆ. ರನ್ಯಾ ಚಿನ್ನ ಕಳ್ಳಸಾಗಣೆ ಪ್ರಕರಣದ ಕಂದಾಯ ಗುಪ್ತಚರ ಜಾರಿ ನಿರ್ದೇಶನಾಲಯ (ಡಿಆರ್‌ಐ) ಬಳಿಕ ನಟಿಯ ಅಕ್ರಮ ಬಂಗಾರ ಜಾಲದ ಶೋಧನೆಗೆ ಕೇಂದ್ರ ತನಿಖಾ ದಳ (ಸಿಬಿಐ) ರಂಗ ಪ್ರವೇಶ ಮಾಡಿದ್ದು, ಈ ಸಂಬಂಧ ಪ್ರತ್ಯೇಕವಾಗಿ ಸಿಬಿಐ ಎಫ್‌ಐಆರ್ ದಾಖಲಿಸಿಕೊಂಡಿದೆ.

ಈ ಬಂಗಾರದ ಜಾಲದಲ್ಲಿ ನಟಿ ಜತೆ ಉದ್ಯಮಿಗಳ ಮಕ್ಕಳು ಹಾಗೂ ರಾಜಕಾರಣಿಗಳು ಮಾತ್ರವಲ್ಲದೆ ಬೆಂಗಳೂರಿನ ಕೆಂಪೇಗೌಡ ಹಾಗೂ ಮುಂಬೈ ನಗರದ ಛತ್ರಪತಿ ಶಿವಾಜಿ ಮಹಾರಾಜ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ಕೆಲ ಕಸ್ಟಮ್ಸ್‌ ಅಧಿಕಾರಿಗಳೂ ಸೇರಿ ಕೆಲವರು ಸಾಥ್ ಕೊಟ್ಟಿದ್ದಾರೆಂದು ಡಿಆರ್‌ಐ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು.

ಕೇಂದ್ರ ಸರ್ಕಾರದ ಅಧಿಕಾರಿಗಳ ಪಾತ್ರದ ಕುರಿತು ಶಂಕೆ ಕಂಡು ಬಂದ ಕಾರಣಕ್ಕೆ ರಾಜ್ಯ ಸರ್ಕಾರದ ಪೂರ್ವಾನುಮತಿ ಪಡೆಯದೆ ನೇರವಾಗಿ ಸಿಬಿಐ ಎಫ್‌ಐಆರ್ ದಾಖಲಿಸಿಕೊಂಡಿದೆ. ಇದು ರಾಜ್ಯದ ಕೆಲ ಪ್ರಮುಖ ರಾಜಕಾರಣಿಗಳು ಹಾಗೂ ಚಿನ್ನಾಭರಣ ಉದ್ಯಮಿಗಳಿಗೆ ನಡುಕ ಮೂಡಿಸಿದೆ ಎಂದು ತಿಳಿದು ಬಂದಿದೆ.

ಏನಿದು ಪ್ರಕರಣ?: ದುಬೈನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಮಾ.3ರ ಸೋಮವಾರ ರಾತ್ರಿ 7ಗಂಟೆ ಸುಮಾರಿಗೆ ಬಂದಿಳಿದ ರನ್ಯಾರವರನ್ನು ಡಿಆರ್‌ಇ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಬಳಿಕ ಅವರನ್ನು ತಪಾಸಣೆಗೊಳಪಡಿಸಿದಾಗ 12 ಕೋಟಿ ರು. ಮೌಲ್ಯದ 14.8 ಕೆ.ಜಿ. ತೂಕದ ಚಿನ್ನದ ಬಿಸ್ಕತ್ತುಗಳು ಪತ್ತೆಯಾಗಿದ್ದವು. ತರುವಾಯ ರನ್ಯಾ ಮನೆ ಮೇಲೆ ದಾಳಿ ನಡೆಸಿ ಡಿಆರ್‌ಐ ಪರಿಶೀಲಿಸಿದಾಗ 2.06 ಕೋಟಿ ಮೌಲ್ಯದ ಚಿನ್ನ ಹಾಗೂ 2.16 ಕೋಟಿ ನಗದು ಪತ್ತೆಯಾಗಿತ್ತು. ಒಟ್ಟಾರೆ ನಟಿ ರನ್ಯಾ ಅವರಿಂದ 17.16 ಕೋಟಿ ಮೌಲ್ಯದ ವಸ್ತುಗಳು ಪತ್ತೆಯಾಗಿದ್ದವು. ಪ್ರಕರಣದ ತನಿಖೆಯನ್ನು ಡಿಆರ್‌ಐ ಅಧಿಕಾರಿಗಳು ಮುಂದುವರೆಸಿದ್ದಾರೆ.

ಪ್ರಕರಣದಲ್ಲಿ ಹಣ ವರ್ಗಾವಣೆ ಹಾಗೂ ಕೆಲ ಸರ್ಕಾರಿ ಅಧಿಕಾರಿಗಳ ಪಾತ್ರ ಕುರಿತು ಸಿಬಿಐ ಮತ್ತು ಇ.ಡಿ.ಗೆ ಡಿಆರ್‌ಐ ಅಧಿಕಾರಿಗಳು ಪತ್ರ ಬರೆದು ಮಾಹಿತಿ ನೀಡಿದ್ದರು. ಈ ಮಾಹಿತಿ ಮೇರೆಗೆ ಸ್ವಯಂ ಪ್ರೇರಿತ ಎಫ್‌ಐಆರ್ ದಾಖಲಿಸಿಕೊಂಡ ಸಿಬಿಐ, ಈಗ ಬಂಗಾರದ ಜಾಲದಲ್ಲಿ ಸಿಲುಕಿರುವ ಅಧಿಕಾರಿಗಳಿಗೆ ತೀವ್ರ ಶೋಧ ಕಾರ್ಯ ನಡೆಸಿದೆ.ಕೇರಳ ಮಾದರಿ ನಟಿ ಕೇಸ್

ಕೆಲ ವರ್ಷಗಳ ಹಿಂದೆ ಕೇರಳದಲ್ಲೂ ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಅಲ್ಲಿನ ಸರ್ಕಾರದ ಹಿರಿಯ ಐಎಎಸ್ ಅಧಿಕಾರಿ ಜತೆ ಸ್ನೇಹ ಹೊಂದಿದ್ದ ಐಟಿ ಅಧಿಕಾರಿ ಸ್ವಪ್ನ ಬಂಧನಕ್ಕೊಳಗಾಗಿದ್ದಳು. ಬಳಿಕ ಪ್ರಕರಣದಲ್ಲಿ ಆಕೆಯ ಜತೆ ನಂಟು ಹೊಂದಿದ್ದ ಕೇರಳದ ಮುಖ್ಯಮಂತ್ರಿ ಪ್ರಧಾನ ಕಾರ್ಯದರ್ಶಿ ಶಿವಶಂಕರ್‌ ಬಂಧಿತರಾಗಿದ್ದರು. ಈಗ ಕೇರಳ ಮಾದರಿಯಲ್ಲೇ ರನ್ಯಾ ಚಿನ್ನ ಕಳ್ಳಸಾಗಣೆ ಪ್ರಕರಣ ನಡೆದಿದೆ ಎಂಬ ಮಾತುಗಳು ಕೇಳಿ ಬಂದಿವೆ.

ನಟಿಗೆ ‘ವಿಶೇಷ ಶಿಷ್ಟಾಚಾರ’ ಕೊಟ್ಟ ರಾಜಕಾರಣಿಗೆ ಸಿಬಿಐ ತನಿಖೆ ಭೀತಿ

ದುಬೈನಿಂದ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದ ಬಳಿಕ ಯಾವುದೇ ತಪಾಸಣೆ ಇಲ್ಲದೆ ನಿರಾಂತಕವಾಗಿ ಹೊರ ಬರುವ ವಿಶೇಷ ಶಿಷ್ಟಾಚಾರ( ಪ್ರೊಟೋಕಾಲ್‌)ದ ಸೌಲಭ್ಯವನ್ನು ರನ್ಯಾ ಪಡೆದಿದ್ದರು. ಈ ವಿಶೇಷ ಸೌಲಭ್ಯ ನೀಡಿಕೆ ಹಿಂದಿರುವವರಿಗೆ ಈಗ ಸಿಐಬಿ ತನಿಖೆ ಆತಂಕ ಶುರುವಾಗಿದೆ.

ವಿಮಾನ ನಿಲ್ದಾಣದಲ್ಲಿ ಐಎಎಸ್‌ ಅಥವಾ ಐಪಿಎಸ್ ಅಧಿಕಾರಿಗಳ ಮಕ್ಕಳಿಗೆ ಯಾವುದೇ ವಿಶೇಷ ರಿಯಾಯಿತಿ ಇರುವುದಿಲ್ಲ. ಆದರೆ ಕೆಲ ಬಾರಿ ತಮ್ಮ ಮಲ ತಂದೆ ಡಿಜಿಪಿ ರಾಮಚಂದ್ರರಾವ್‌ ಅವರ ಹೆಸರು ಬಳಸಿದ್ದರೆ, ಕೆಲ ಸಲ ರಾಜ್ಯದ ‘ಪ್ರಭಾವಿ’ ರಾಜಕಾರಣಿಯೊಬ್ಬರ ಹೆಸರನ್ನು ರನ್ಯಾ ಬಳಸಿದ್ದಾರೆನ್ನಲಾಗಿದೆ. ಹೀಗಾಗಿಯೇ ರಾಜಕಾರಣಿ ಇರುವ ಕಾರಣಕ್ಕೆ ಚಿನ್ನ ಕಳ್ಳ ಸಾಗಣೆ ಕೃತ್ಯದ ತನಿಖಾ ಅಖಾಡಕ್ಕೆ ಸಿಬಿಐ ಪ್ರವೇಶ ಮಾಡಿದೆ ಎಂದು ತಿಳಿದು ಬಂದಿದೆ.

Share this article