ಚಿಕ್ಕಮಗಳೂರುಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಧರ್ಮಾಧಿಕಾರಿ ಶ್ರೀ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ನಡೆದಿರುವ ಷಡ್ಯಂತ್ರದ ಸಮಗ್ರ ತನಿಖೆಯನ್ನು ಸಿಬಿಐಗೆ ವಹಿಸುವಂತೆ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಒತ್ತಾಯಿಸಿ ಮುಖ್ಯಮಂತ್ರಿಗೆ ಬಹಿರಂಗ ಪತ್ರ ಬರೆದಿದ್ದಾರೆ.
ಮುಖ್ಯಮಂತ್ರಿಗಳಿಗೆ ಬರೆದ ಬಹಿರಂಗ ಪತ್ರದಲ್ಲಿ ಆಗ್ರಹ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಧರ್ಮಾಧಿಕಾರಿ ಶ್ರೀ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ನಡೆದಿರುವ ಷಡ್ಯಂತ್ರದ ಸಮಗ್ರ ತನಿಖೆಯನ್ನು ಸಿಬಿಐಗೆ ವಹಿಸುವಂತೆ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಒತ್ತಾಯಿಸಿ ಮುಖ್ಯಮಂತ್ರಿಗೆ ಬಹಿರಂಗ ಪತ್ರ ಬರೆದಿದ್ದಾರೆ.
ಧರ್ಮಸ್ಥಳದ ವಿಚಾರದಲ್ಲಿ ಇತ್ತೀಚೆಗೆ ಹೊರ ಬರುತ್ತಿರುವ ಬೆಳವಣಿಗೆಗಳು ನನ್ನನ್ನಷ್ಟೇ ಅಲ್ಲದೆ, ಕೋಟ್ಯಂತರ ಭಕ್ತರ ಮನಸ್ಸಿನಲ್ಲೂ ಆತಂಕ ಮತ್ತು ಅನುಮಾನ ಹುಟ್ಟುಹಾಕಿವೆ. ಈ ಕಾರಣದಿಂದಲೇ ಈ ಪತ್ರವನ್ನು ಬರೆಯುತ್ತಿದ್ದೇನೆ.ಶ್ರೀ ಕ್ಷೇತ್ರ ಧರ್ಮಸ್ಥಳ ನಾಡಿನ ಒಂದು ಸಾಮಾನ್ಯ ಧಾರ್ಮಿಕ ಕ್ಷೇತ್ರವಲ್ಲ. ಕೋಟ್ಯಂತರ ಜನರ ನಂಬಿಕೆ, ಭಕ್ತಿ ಮತ್ತು ಧಾರ್ಮಿಕ ಭಾವನೆಗಳ ಕೇಂದ್ರ. ಸಮಾಜಸೇವೆ, ಶಿಕ್ಷಣ, ಆರೋಗ್ಯ, ಅನ್ನದಾನ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಧರ್ಮಸ್ಥಳ ಸಲ್ಲಿಸಿರುವ ಸೇವೆ ದೇಶಕ್ಕೆ ಮಾದರಿ. ಇಂತಹ ಸಂಸ್ಥೆ ಮತ್ತು ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ಕಳೆದ ಕೆಲವು ವರ್ಷಗಳಿಂದ ನಿರಂತರ ಆರೋಪಗಳು, ಅಪಪ್ರಚಾರ ಮತ್ತು ಅನುಮಾನಗಳ ವಾತಾವರಣ ಸೃಷ್ಟಿ ಮಾಡುತ್ತಿದೆ.
ಹೈಕೋರ್ಟ್ ಮುಂದೆ ಸಲ್ಲಿಕೆಯಾಗಿರುವ ಅರ್ಜಿ ಈ ಪ್ರಕರಣಕ್ಕೆ ಮತ್ತೊಂದು ಗಂಭೀರ ಆಯಾಮ ನೀಡಿದ್ದು, ಮಾಧ್ಯಮ ವರದಿಗಳ ಪ್ರಕಾರ ಆ ಅರ್ಜಿಯಲ್ಲಿ ನಟ ಪ್ರಕಾಶ್ ರಾಜ್, ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ವಿಠಲ್‌ಗೌಡ, ಜಯಂತ್ ಹಾಗೂ ಯೂಟ್ಯೂಬರ್‌ಗಳಾದ ಎಂ.ಡಿ.ಸಮೀರ್, ಅಜಯ್, ದಿನೇಶ್ ಸೇರಿದಂತೆ ಹಲವರ ಹೆಸರು ಉಲ್ಲೇಖಿಸಲಾಗಿದೆ.
ಜೊತೆಗೆ ಧರ್ಮಸ್ಥಳ ಹಾಗೂ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ಸುಮಾರು ₹200 ಕೋಟಿ ವೆಚ್ಚದಲ್ಲಿ ಸಂಘಟಿತ ಮತ್ತು ವ್ಯವಸ್ಥಿತ ಷಡ್ಯಂತ್ರ ರೂಪಿಸಲಾಗಿತ್ತು ಎಂಬ ಅತ್ಯಂತ ಗಂಭೀರ ಆರೋಪ ಕೇಳಿ ಬಂದಿದೆ.
ಈ ಆರೋಪ ಸತ್ಯವೋ ಸುಳ್ಳೋ ಎಂಬುದನ್ನುತನಿಖೆಯೇ ನಿರ್ಧರಿಸಬೇಕು. ಆದರೆ, ಒಂದು ಪ್ರಶ್ನೆಗೆ ಉತ್ತರ ಸಿಗಲೇಬೇಕು. ಧರ್ಮಸ್ಥಳದಂತಹ ಪ್ರತಿಷ್ಠಿತ ಸಂಸ್ಥೆ ವಿರುದ್ಧ ಇಷ್ಟೊಂದು ದೊಡ್ಡ ಮಟ್ಟದ ಅಭಿಯಾನ ನಡೆಸಲು ಹಣ ಎಲ್ಲಿಂದ ಬಂತು? ಇದರ ಹಿಂದೆ ಯಾರು ಇದ್ದರು? ಇದು ಕೆಲವರ ವೈಯಕ್ತಿಕ ಕೃತ್ಯವೋ ಅಥವಾ ಇದರ ಹಿಂದೆ ದೊಡ್ಡ ಜಾಲವೇ ಕಾರ್ಯನಿರ್ವಹಿಸುತ್ತಿದೆಯೋ? ಎಂಬ ಸತ್ಯ ಹೊರಬರಬೇಕಾಗಿದೆ.ಈ ಹಿಂದೆಯೇ ಧರ್ಮಸ್ಥಳದ ವಿರುದ್ಧ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿರುವ ಅನುಮಾನ ವ್ಯಕ್ತಪಡಿಸಿದಾಗ ಹಲವರು ನನ್ನ ವಿರುದ್ಧ ಟೀಕೆ ಮಾಡಿದ್ದರು. ಆದರೆ, ಈಗ ಹೊರ ಬರುತ್ತಿರುವ ಮಾಹಿತಿ ನೋಡಿದಾಗ, ಆ ಅನುಮಾನಗಳನ್ನು ಗಂಭೀರವಾಗಿ ಪರಿಗಣಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಧರ್ಮಸ್ಥಳದ ವಿರುದ್ಧದ ಆರೋಪಗಳ ತನಿಖೆ ನಡೆದಂತೆಯೇ, ಧರ್ಮಸ್ಥಳದ ವಿರುದ್ಧವೇ ಯಾವುದೇ ಸಂಚು ನಡೆದಿದೆಯೇ ಎಂಬ ಬಗ್ಗೆಯೂ ತನಿಖೆ ನಡೆಯಬೇಕು.ಇತ್ತೀಚಿನ ದಿನಗಳಲ್ಲಿ ಹಿಂದೂ ಧರ್ಮದ ಶ್ರದ್ಧಾ ಕೇಂದ್ರಗಳು, ಪುರಾತನ ದೇವಾಲಯ ಮತ್ತು ಸಮಾಜದಲ್ಲಿ ಅಪಾರ ಗೌರವ ಹೊಂದಿರುವ ಧಾರ್ಮಿಕ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು ಅಪನಂಬಿಕೆ ಸೃಷ್ಟಿಸುವ ಯಾವುದೇ ದೊಡ್ಡ ಕಾರ್ಯತಂತ್ರದ ಭಾಗ ಇದಾಗಿತ್ತೇ? ಈ ಪ್ರಕ್ರಿಯೆಗೆ ಹೊರಗಿನಿಂದ ಹಣ ಹೂಡಿಕೆ ಯಾಗಿತ್ತೇ? ರಾಜ್ಯದ ಹೊರಗಿನ ಅಥವಾ ದೇಶದ ಹೊರಗಿನ ಯಾವುದೇ ಸಂಘಟಿತ ಶಕ್ತಿಗಳು ಇದರಲ್ಲಿ ಭಾಗಿಯಾಗಿದ್ದವೆಯೇ? ಎಂಬ ಅನುಮಾನ ಮೂಡುತ್ತಿದೆ. ಷಡ್ಯಂತ್ರದ ಆರೋಪ ಸಾಮಾನ್ಯ ವಿಷಯವಲ್ಲ. ಈ ಆರೋಪದಲ್ಲಿ ಯಾವುದೇ ಸತ್ಯಾಂಶವಿದ್ದರೆ ಅದು ರಾಜ್ಯದ ಜನತೆ ತಿಳಿದು ಕೊಳ್ಳಲೇಬೇಕಾದ ಸಂಗತಿ. ಹಣದ ಮೂಲ, ಹಣದ ಹರಿವು, ಈ ಪ್ರಕರಣದಲ್ಲಿ ಹೆಸರು ಕೇಳಿಬರುತ್ತಿರುವ ವ್ಯಕ್ತಿಗಳ ಪಾತ್ರ, ಡಿಜಿಟಲ್ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ನಡೆದಿರುವ ಪ್ರಚಾರ ಹಾಗೂ ಇದರ ಹಿಂದಿರುವ ಸಂಪೂರ್ಣಜಾಲ ಪತ್ತೆ ಹಚ್ಚಬೇಕಾಗಿದೆ.ಈ ಪ್ರಕರಣ ಕರ್ನಾಟಕ ಮಾತ್ರವಲ್ಲದೆ, ವಿವಿಧ ರಾಜ್ಯಗಳ ಜನರೂ ಸಂಚಿನ ಭಾಗವಾಗಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಹುನ್ನಾರವನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ. ಪ್ರಕರಣದ ವ್ಯಾಪ್ತಿ ಕರ್ನಾಟಕವನ್ನೂ ಮೀರಿ ಹಬ್ಬಿರುವುದರಿಂದ ರಾಜ್ಯ ಪೊಲೀಸ್ ಇಲಾಖೆಯಿಂದ ತನಿಖೆ ನಡೆಸಿದರೆ ಸಾಕಾಗುವುದಿಲ್ಲ. ಆದ್ದರಿಂದ, ಕೇಂದ್ರ ಮಟ್ಟದ ತನಿಖಾ ಸಂಸ್ಥೆಗಳಿಂದ ತನಿಖೆ ನಡೆಸಿದರೆ ಮಾತ್ರವೇ ವಿಸ್ತೃತ ವಿಚಾರಣೆ ನಡೆದು ಷಡ್ಯಂತ್ರದ ಹಿಂದಿರುವವರು ಯಾರು, ಅವರ ಉದ್ದೇಶವೇನು ಎನ್ನುವುದು ಬೆಳಕಿಗೆ ಬರಲು ಸಾಧ್ಯ. ಹೀಗಾಗಿ, ಪ್ರಕರಣವನ್ನು ಕೇಂದ್ರತನಿಖಾ ದಳ (ಸಿಬಿಐ) ಗೆ ವಹಿಸಿ ಸಮಗ್ರ ಮತ್ತು ನಿಷ್ಪಕ್ಷಪಾತತನಿಖೆ ನಡೆಸಬೇಕು ಎಂದು ಆಗ್ರಹಿಸುತ್ತೇನೆ. ಸತ್ಯ ಏನೇ ಇರಲಿ ಅದು ಹೊರಬರಬೇಕು. ಧರ್ಮಸ್ಥಳದ ವಿರುದ್ಧಷಡ್ಯಂತ್ರ ನಡೆದಿದ್ದರೆ ಅದರ ಹಿಂದಿರುವವರು ಬಯಲಾಗಬೇಕು. ಆರೋಪಗಳಲ್ಲಿ ಸತ್ಯವಿದ್ದರೆ ಅದೂ ಕಾನೂನಿನ ಮುಂದೆ ಸಾಬೀತಾಗಬೇಕು. ತಕ್ಷಣವೇ ಸಿಬಿಐ ತನಿಖೆಗೆ ಶಿಫಾರಸು ಮಾಡಬೇಕೆಂದು ಸಿ.ಟಿ.ರವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ. ಸಿ.ಟಿ.ರವಿ ಫೋಟೋ ಬಳಸಿ
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.