ಗಂಗಾವತಿ:
ನಗರದ ಶ್ರೀಚನ್ನಬಸವಸ್ವಾಮಿ ಸೌಹಾರ್ದ ಸಹಕಾರಿ ಬ್ಯಾಂಕ್ (ಸಿಬಿಎಸ್) ಪ್ರಗತಿಗೆ ಗ್ರಾಹಕರು ಮತ್ತು ಆಡಳಿತ ಮಂಡಳಿ ಸದಸ್ಯರು ಕಾರಣರಾಗಿದ್ದಾರೆ ಎಂದು ಅದ್ಯಕ್ಷ ಗಿರಿಯಪ್ಪ ಹೊಸಕೇರಿ ಹೇಳಿದರು.ಬ್ಯಾಂಕ್‌ನ 30ನೇ ವಾರ್ಷಿಕೋತ್ಸವದಲ್ಲಿ ಮಾತನಾಡಿ, 1995ರಲ್ಲಿ ಪ್ರಾರಂಭಿಸಿರುವ ಬ್ಯಾಂಕ್ ನಾಗರಿಕರಿಗೆ ಉತ್ತಮ ಬ್ಯಾಂಕಿಂಗ್ ಸೌಲಭ್ಯ, ಆರ್ಥಿಕ ನೆರವು ನೀಡಿದೆ. ಸಹಕಾರ ತತ್ವದನ್ವಯ ದುರ್ಬಲ ವರ್ಗ, ಮಹಿಳೆಯರಿಗೆ, ಸ್ವಯಂ ಉದ್ಯೋಗಿಗಳು ಮತ್ತು ವ್ಯಾಪಾರಸ್ಥರಿಗೆ, ಸಣ್ಣ ಪ್ರಮಾಣದ ಕೈಗಾರಿಕೆಗಳಿಗೆ ಸಾಲ ನೀಡುವುದು ಹಾಗೂ ಸಾರ್ವಜನಿಕರಿಂದ ಠೇವಣಿ ಸಂಗ್ರಹಿಸಿ ಉಳಿತಾಯಕ್ಕೆ ಪ್ರೇರೇಪಿಸಲಾಗಿದೆ ಎಂದರು.ಕೇವಲ ₹ 26 ಲಕ್ಷ ಶೇರು ಬಂಡವಾಳದೊಂದಿಗೆ ಆರಂಭವಾದ ಬ್ಯಾಂಕ್ ಇಂದು ₹ 92 ಲಕ್ಷ ಶೇರು ಬಂಡವಾಳ ಹೊಂದಿದೆ. ಆರಂಭದ ಮೊದಲ ವರ್ಷ ₹ 2 ಕೋಟಿ ಠೇವಣಿ ಸಂಗ್ರಹಿಸಿ ₹ 1.22 ಕೋಟಿ ಸಾಲ ವಿತರಿಸಿದೆ. ಪ್ರಸ್ತುತ ಮಾರ್ಚ್ ಅಂತ್ಯಕ್ಕೆ ₹ 2.09 ಕೋಟಿ ಶೇರು ಬಂಡವಾಳ, ₹ 20.31 ಕೋಟಿ ನಿಧಿ, ₹ 85.02 ಕೋಟಿ ಠೇವಣಿ, ₹ 47.26 ಕೋಟಿ ಸಾಲ ಮತ್ತು ಮುಂಗಡ, ₹ 1.46 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ವಿವರಿಸಿದರು.
ಕಾರಟಗಿ ಮತ್ತು ಬಳ್ಳಾರಿ ಜಿಲ್ಲೆಯ ಕಂಪ್ಲಿಯಲ್ಲಿ ಎರಡು ಶಾಖೆ ಆರಂಭಿಸಲಾಗಿದೆ ಎಂದ ಅವರು, ಈ ಹಿಂದೆ ಬ್ಯಾಂಕ್ ಸಂಸ್ಥಾಪಕ ಅಧ್ಯಕ್ಷರಾಗಿದ್ದ ಮಂಜುನಾಥ ಸಿದ್ದಾಪುರ ಅವರ ಕಾರ್ಯ ಶ್ಲಾಘನೀಯ ಎಂದರು.ಈ ವೇಳೆ ಬ್ಯಾಂಕ್‌ನ ಆಡಳಿತ ಮಂಡಳಿ ನಿರ್ದೇಶಕರಾದ ಕೆ. ಕಾಳಪ್ಪ, ರಮೇಶ ಗೌಳಿ, ವಿನಯಕುಮಾರ ಸಿ.ಎ, ಬಸವರಾಜ್ ವೀರಶೆಟ್ಟರ, ಲತಾ ಮಾಲೀಪಾಟೀಲ್, ಮಾಜಿ ನಿರ್ದೇಶಕ ಶೇಖರಪ್ಪ ಅರಳಿ, ಶರಣೇಗೌಡ ಮಾಲಿಪಾಟೀಲ್, ಬ್ಯಾಂಕ್ ಮುಖ್ಯ ನಿರ್ವಾಹಣಾಧಿಕಾರಿ ನಾಗೇಶಗೌಳಿ, ಲೆಕ್ಕಾಧಿಕಾರಿ ವೀರಭದ್ರಪ್ಪ ಸಿದ್ದಾಪುರ, ಬ್ಯಾಂಕ್ ಅಧಿಕಾರಿ ಮೀರಸಾ ಮೀಯಾ, ಸುಮಾ ಹಿರೇಮಠ, ಶೋಭಾ, ನಟರಾಜ್, ಕೃಷ್ಣ, ಗುರು, ಸಚಿನ್ ಇದ್ದರು.