ಸಿಬಿಎಸ್‌ಇ 10, 12ನೇ ಕ್ಲಾಸ್‌ ಫಲಿತಾಂಶ ಕುಸಿತ

KannadaprabhaNewsNetwork | Published : May 13, 2025 11:48 PM
Follow Us

ಸಾರಾಂಶ

ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಮಂಗಳವಾರ 2024-25ನೇ ಸಾಲಿನ 10 ಮತ್ತು 12ನೇ ತರಗತಿ ಫಲಿತಾಂಶ ಪ್ರಕಟಿಸಿದೆ.

ಕನ್ನಡಪ್ರಭ ವಾರ್ತೆ, ಬೆಂಗಳೂರು

ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಮಂಗಳವಾರ 2024-25ನೇ ಸಾಲಿನ 10 ಮತ್ತು 12ನೇ ತರಗತಿ ಫಲಿತಾಂಶ ಪ್ರಕಟಿಸಿದೆ. ಬೆಂಗಳೂರು ಪ್ರಾದೇಶಿಕ ವಿಭಾಗವು(ಕರ್ನಾಟಕ) 10ನೇ ತರಗತಿಯಲ್ಲಿ ಶೇ.98.90 ಫಲಿತಾಂಶದೊಂದಿಗೆ ರಾಷ್ಟ್ರಮಟ್ಟದಲ್ಲಿ 3ನೇ ಸ್ಥಾನ, 12ನೇ ತರಗತಿಯಲ್ಲಿ ಶೇ.95.95 ಫಲಿತಾಂಶದೊಂದಿಗೆ ನಾಲ್ಕನೇ ಸ್ಥಾನ ಪಡೆದಿದೆ. 10ನೇ ತರಗತಿ ಫಲಿತಾಂಶವು ಕಳೆದ ಸಾಲಿಗೆ (ಶೇ.99.26) ಹೋಲಿಸಿದರೆ ಈ ಬಾರಿ ಫಲಿತಾಂಶ ಶೇ.0.36 ರಷ್ಟು ಕಡಿಮೆಯಾಗಿದೆ. 12ನೇ ತರಗತಿಯ ಕಳೆದ ಬಾರಿ ಫಲಿತಾಂಶಕ್ಕೆ(ಶೇ.96.95) ಹೋಲಿಸಿದರೆ ಈ ಬಾರಿ ಶೇ.1ರಷ್ಟು ಕುಸಿತವಾಗಿದೆ. ಆದರೆ, 10ನೇ ತರಗತಿ ಫಲಿತಾಂಶದಲ್ಲಿ ಕಳೆದ ಬಾರಿ ರಾಷ್ಟ್ರಮಟ್ಟದಲ್ಲಿ 4ನೇ ಸ್ಥಾನದಲ್ಲಿದ್ದ ಬೆಂಗಳೂರು ವಿಭಾಗವು ಕೊಂಚ ಸುಧಾರಿಸಿ ಈ ಬಾರಿ 3ನೇ ಸ್ಥಾನಕ್ಕೇರಿದೆ. ಆದರೆ, 12ನೇ ತರಗತಿ ಫಲಿತಾಂಶದಲ್ಲಿ ನಾಲ್ಕಲೇ ಸ್ಥಾನ ಕಾಯ್ದುಕೊಂಡಿದೆ.

ಬಾಲಕಿಯರೇ ಮೇಲುಗೈ:

ಎಂದಿನಂತೆ ಎರಡೂ ಪರೀಕ್ಷೆಯಲ್ಲೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. 10ನೇ ತರಗತಿಯಲ್ಲಿ ಒಟ್ಟಾರೆ 93148 ಮಂದಿ ಪರೀಕ್ಷೆ ಬರೆದಿದ್ದರು. ಈ ಪೈಕಿ 50,236 ಬಾಲಕರಲ್ಲಿ ಶೇ.98.43 ಮಂದಿ, 43,912 ಬಾಲಕಿಯರಲ್ಲಿ ಶೇ.99.46 ಜನ ಉತ್ತೀರ್ಣರಾಗಿದ್ದಾರೆ.

12ನೇ ತರಗತಿಯಲ್ಲಿ ಒಟ್ಟಾರೆ 21,745 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಇದರಲ್ಲಿ 11,767 ಬಾಲಕರಲ್ಲಿ ಶೇ.95.14 ರಷ್ಟು ಮಂದಿ ಪಾಸಾಗಿದ್ದಾರೆ. 9,978 ಬಾಲಕಿಯರಲ್ಲಿ ಶೇ.96.90 ಮಂದಿ ಪಾಸಾಗಿದ್ದಾರೆ.

===

ಫಲಿತಾಂಶ ಕುಸಿತಕ್ಕೆ ಕಾರಣ:

ಕಳೆದ ವರ್ಷಕ್ಕೆ ಹೋಲಿಸಿದರೆ ಎರಡೂ ಫಲಿತಾಂಶಗಳು ಕುಸಿತವಾಗಿವೆ. ಇತ್ತೀಚಿನ ವರ್ಷಗಳಲ್ಲಿ ತರಗತಿ ಪಠ್ಯ ಬೋಧನೆಗಿಂತ ಸ್ಪರ್ಧಾತ್ಮಕ ಪರೀಕ್ಷೆಗೆ ಶಾಲೆ, ಕಾಲೇಜುಗಳು ಆದ್ಯತೆ ನೀಡುತ್ತಿರುವ ಹಿನ್ನೆಲೆಯಲ್ಲಿ 10 ಮತ್ತು 12ನೇ ತರಗತಿಯಲ್ಲಿ ವಿದ್ಯಾರ್ಥಿಗಳ ಸಾಧನೆ ಕಡಿಮೆಯಾಗಿದೆ ಎನ್ನುತ್ತಾರೆ ತಜ್ಞರು.

------ಬಾಕ್ಸ್‌

ಹಲವು ವಿದ್ಯಾರ್ಥಿಗಳ ಸಾಧನೆ

ಎರಡೂ ಪರೀಕ್ಷೆಯಲ್ಲಿ ರಾಜ್ಯದ ವಿವಿಧ ಶಾಲೆಗಳು ಹಾಗೂ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದಾರೆ. ಕೆಲ ಶಾಲೆಗಳು ಶೇ.100ರಷ್ಟು ಫಲಿತಾಂಶ ಸಾಧಿಸಿವೆ. ಹಲವು ವಿದ್ಯಾರ್ಥಿಗಳು ಶೇ.99 ಅಂಕ ಗಳಿಸಿದ್ದಾರೆ.

10ನೇ ತರಗತಿಯಲ್ಲಿ ಬೆಂಗಳೂರಿನ ಶ್ರೀ ಚೈತನ್ಯ ಟೆಕ್ನೋದ ವಿವಿಧ ಶಾಲೆಗಳ ಹರ್ಷಿತ್ ರೆಡ್ಡಿ ವಿ., ಡಿ.ಜೆ. ಚರಣ್, ಸನ್ಯಮ್‌ ಲಾಲ್ವಾಣಿ 500ಕ್ಕೆ 495 ಅಂಕ(ಶೇ.99) ಗಳಿಸಿದ್ದಾರೆ. ಇದೇ ಶಾಲೆಯ 12ನೇ ತರಗತಿ ವಿದ್ಯಾರ್ಥಿಗಳಾದ ನ್ಹರೇನ್‌ ಎಂ. 496 ಅಂಕ(ಶೇ.99.2), ದಿನೇಶ್‌ ಗೋಮತಿ, ಶಂಕರ್‌ ಅರುಣಾಚಲಮ್‌, ನಿಹಾಲ್‌ ಸಾಗರ್‌ ವಿಷ್ಣು ಹಾಗೂ ಸಾಯಿಶ್ರೀ ತಳೂರಿ ತಲಾ 494 ಅಂಕ(ಶೇ.98.8) ಪಡೆದಿದ್ದಾರೆ.

ಅದೇ ರೀತಿ ಸಹಕಾರ ನಗರದ ನಾರಾಯಣ ಒಲಿಂಪಿಯಾಡ್ ಶಾಲೆಯ ಅದ್ವಿಕಾ ಪೋತ್ಲೂರಿ ಮತ್ತು ಪ್ರಣವ್‌ ಎಸ್‌.ನಾಯರ್‌ 10ನೇ ತರಗತಿಯಲ್ಲಿ 493 ಅಂಕ (ಶೇ.98.6) ಗಳಿಸಿದ್ದಾರೆ. 12ನೇ ತರಗತಿಯಲ್ಲಿ ರೇಯಾನ್ಸ್ ದೇವ್ನಾನಿ, ವೈಖಿನ್ ಎಸ್. ಎಂಬ ವಿದ್ಯಾರ್ಥಿಗಳು 495 ಅಂಕ (ಶೇ.99) ಗಳನ್ನು ಪಡೆದು ಉನ್ನತ ಸಾಧನೆ ಮಾಡಿದ್ದಾರೆ.