ಕನ್ನಡಪ್ರಭ ವಾರ್ತೆ ಬೀದರ್
ಪ್ರಸಕ್ತ ಸಾಲಿನ 10ನೇ ತರಗತಿ ಪರೀಕ್ಷೆಗೆ ಜ್ಞಾನಸುಧಾ ವಿದ್ಯಾಲಯದ ಒಟ್ಟು 183 ವಿದ್ಯಾರ್ಥಿಗಳು ಹಾಜರಾಗಿದ್ದು, ಇವರಲ್ಲಿ 118 ವಿದ್ಯಾರ್ಥಿಗಳು ಅಗ್ರಶ್ರೇಣಿಯಲ್ಲಿ ಉತ್ತೀರ್ಣರಾಗಿ ಅಮೋಘ ಸಾಧನೆ ಮಾಡಿದ್ದಾರೆ. 59 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಹಾಗೂ 6 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ.
ಜ್ಞಾನಸುಧಾ ವಿದ್ಯಾಲಯದ ವಿದ್ಯಾರ್ಥಿನಿಯಾದ ಸೃಷ್ಟಿ ಶಿವಾನಂದ ಶೇ. 98ರಷ್ಟು ಫಲಿತಾಂಶ ಪಡೆದು ಜಿಲ್ಲೆಯಲ್ಲೇ ಟಾಪರ್ ಆಗಿ ಹೊರಹೊಮ್ಮಿದ್ದು, ಈ ವಿದ್ಯಾರ್ಥಿನಿ ಕನ್ನಡದಲ್ಲಿ 100ಕ್ಕೆ 100ರಷ್ಟು ಅಂಕ ಪಡೆದರೆ, ವಿಜ್ಞಾನ ಮತ್ತು ಸಮಾಜವಿಜ್ಞಾನದಲ್ಲಿ 99, ಗಣಿತ ಮತ್ತು ಇಂಗ್ಲಿಷ್ ವಿಷಯದಲ್ಲಿ 95 ಅಂಕ ಪಡೆದು ಶಾಲೆಗೆ ಅಷ್ಟೇ ಅಲ್ಲದೇ ಜಿಲ್ಲೆಗೆ ಪ್ರಥಮ ಸ್ಥಾನ ಬಂದು ಜಿಲ್ಲೆಯಾದ್ಯಂತ ಜ್ಞಾನಸುಧಾ ವಿದ್ಯಾಲಯದ ಕೀರ್ತಿ ಇನ್ನಷ್ಟು ಇಮ್ಮಡಿಗೊಳಿಸಿದ್ದಾರೆ.ವಿದ್ಯಾಲಯದ 30 ವಿದ್ಯಾರ್ಥಿಗಳು ಶೇ.90ಕ್ಕೂ ಅಧಿಕ ಫಲಿತಾಂಶ ಪಡೆದರೆ, 36 ವಿದ್ಯಾರ್ಥಿಗಳು ಶೇ.85 ರಿಂದ ಶೇ.89ರ ವರೆಗೆ, 52 ವಿದ್ಯಾರ್ಥಿಗಳು ಶೇ. 75 ರಿಂದ ಶೇ. 84 ರಷ್ಟು, 59 ವಿದ್ಯಾರ್ಥಿಗಳು ಶೇ 60 ರಿಂದ ಶೇ 74 ರಷ್ಟು ಫಲಿತಾಂಶ ಗಳಿಸಿ ಎಲ್ಲರ ಗಮನಸೆಳೆದಿದ್ದಾರೆ.
ಮಾಮನಕೇರಿಯಲ್ಲಿರುವ ಜ್ಞಾನಸುಧಾ ವಿದ್ಯಾಲಯದ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ ಸಮಾರಂಭದಲ್ಲಿ ಪ್ರಸಕ್ತ ಸಾಲಿನ 10ನೇ ತರಗತಿ ಪರೀಕ್ಷೆಯಲ್ಲಿ ಗಮನಾರ್ಹ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಜ್ಞಾನಸುಧಾ ವಿದ್ಯಾಲಯದ ನಿರ್ದೇಶಕರಾದ ಡಾ. ಮುನೇಶ್ವರ ಲಾಖಾ ಮಾತನಾಡಿ, 10ನೇ ತರಗತಿ ಪರೀಕ್ಷೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳು ಉತ್ತಮ ಶೈಕ್ಷಣಿಕ ವಾತಾವರಣ ಹೊಂದಿರುವ, ಒಳ್ಳೆಯ ರೀತಿಯಿಂದ ಮಾರ್ಗದರ್ಶನ ಕಲ್ಪಿಸುವ ಪದವಿಪೂರ್ವ ಕಾಲೇಜಿನಲ್ಲಿ ಮಾತ್ರ ಪ್ರವೇಶ ಪಡೆಯಬೇಕು. ಅಂದಾಗ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಜಿಲ್ಲೆಯ ಟಾಪರ್ ಆಗಿ ಹೊರಹೊಮ್ಮಿದ ವಿದ್ಯಾರ್ಥಿನಿ ಸೃಷ್ಟಿ ಶಿವಾನಂದ ತಮ್ಮ ಅನಿಸಿಕೆ ಹಂಚಿಕೊಂಡರು.ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ಶೈಕ್ಷಣಿಕ ನಿರ್ದೇಶಕರಾದ ಶ್ರೀಕಾಂತ ರೆಡ್ಡಿ, ಜ್ಞಾನಸುಧಾ ವಿದ್ಯಾಲಯದ ಪ್ರಾಚಾರ್ಯರಾದ ಸುನೀತಾ ಸ್ವಾಮಿ, ಮೇಲ್ವಿಚಾರಕರಾದ ರಜನಿ, ಸಾಯಿಗೀತಾ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪಾಲಕರು ಪಾಲ್ಗೊಂಡಿದ್ದರು.