ಕನ್ನಡಪ್ರಭ ವಾರ್ತೆ ಮಂಡ್ಯ
ಇದು ಬೇವಿನಹಳ್ಳಿ ಗ್ರಾಮ ಪಂಚಾಯ್ತಿಯವರು ನಗರಕ್ಕೆ ಹೊಂದಿಕೊಂಡಂತಿರುವ ಕ್ಯಾತುಂಗೆರೆ ರಸ್ತೆಯಿಂದ ಅನ್ನಪೂರ್ಣೇಶ್ವರಿ ನಗರ ಬಡಾವಣೆಗೆ ಸಂಪರ್ಕ ಕಲ್ಪಿಸುವ ರಸ್ತೆಯ ಬದಿ, ಅನ್ನಪೂರ್ಣೇಶ್ವರಿ ಬಡಾವಣೆಯ ಎರಡನೇ ತಿರುವು ಹಾಗೂ ಅದೇ ಬಡಾವಣೆಯ ಎಂಟನೇ ತಿರುವು ಸೇರಿ ಎರಡು ಕಡೆ ಕಸ ಬೀಳುತ್ತಿದ್ದ ಸ್ಥಳಗಳಲ್ಲಿ ಸೀಸಿ ಟೀವಿ ಕ್ಯಾಮೆರಾ ಅಳವಡಿಸಿದ್ದಾರೆ. ಈ ಪ್ರಯೋಗ ಯಶಸ್ವಿಯಾಗಿದೆ. ಹಿಂದೆ ಈ ಸ್ಥಳಗಳಲ್ಲಿ ಎಷ್ಟೇ ಬಾರಿ ಸ್ವಚ್ಛಗೊಳಿಸಿದರೂ ಮತ್ತೆ ಮರುದಿನ ಅಷ್ಟೇ ಪ್ರಮಾಣದ ಕಸ ಬಂದು ಬೀಳುತ್ತಿತ್ತು. ಇದರಿಂದ ಪಂಚಾಯ್ತಿಯವರೂ ರೋಸಿಹೋಗಿದ್ದರು.
ಗ್ರಾಮ ಪಂಚಾಯ್ತಿ ಆಡಳಿತಾಧಿಕಾರಿಯಾಗಿ ಆಗಮಿಸಿದ ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಲೋಕೇಶ್ ಅವರು ೧೦ ಸಾವಿರ ರು. ವೆಚ್ಚದಲ್ಲಿ ಎರಡೂ ಕಡೆ ಸೀಸಿ ಕ್ಯಾಮೆರಾ ಅಳವಡಿಸಿದ್ದಾರೆ. ಈ ಸೀಸಿ ಕ್ಯಾಮೆರಾಗಳ ವಿಶೇಷವೆಂದರೆ ಆ ಸ್ಥಳದಲ್ಲಿ ಕಸ ಹಾಕುವವರು ಬಂದರೆ ಸಾಕು ಸೈರನ್ ಮೊಳಗಿಸುತ್ತದೆ. ಫೋಟೋ ಸೆರೆಹಿಡಿದು ಬೇವಿನಹಳ್ಳಿ ಗ್ರಾಪಂ ಕಚೇರಿಗೆ ರವಾನಿಸುತ್ತದೆ. ವಿಶಿಷ್ಟ ರೀತಿಯಲ್ಲಿರುವ ಈ ಕ್ಯಾಮೆರಾ ಅಳವಡಿಸಿದಾಗಿನಿಂದ ಆ ಎರಡೂ ಸ್ಥಳಗಳಲ್ಲಿ ಕಸ ಹಾಕುವವರೇ ಇಲ್ಲವಾಗಿದ್ದಾರೆ.ಕಸ ಹಾಕುವ ವಾಹನಗಳ ಮೂಲಕ ಎಲ್ಲೆಂದರಲ್ಲಿ ಕಸ ಸುರಿಯದಂತೆ ಎಷ್ಟೇ ಜಾಗೃತಿ ಮೂಡಿಸಿದ್ದರೂ ಜನರು ಲೆಕ್ಕಿಸುತ್ತಿರಲಿಲ್ಲ. ನಿತ್ಯವೂ ಅದೇ ಜಾಗಗಳಲ್ಲಿ ಕಸವನ್ನು ತಂದು ಸುರಿಯುತ್ತಿದ್ದರು. ಕೆಲವೊಂದು ಹೋಟೆಲ್‌ಗಳ ತ್ಯಾಜ್ಯವೂ ಅಲ್ಲಿಯೇ ಬೀಳುತ್ತಿತ್ತು. ಕೊನೆಗೆ ಲೋಕೇಶ್ ಅವರು ಸೀಸಿ ಕ್ಯಾಮೆರಾ ಅಳವಡಿಸಿ ಇಲ್ಲಿ ಕಸ ಸುರಿಯುವವರಿಗೆ ೨ ಸಾವಿರ ರು. ದಂಡ ಮತ್ತು ಅವರ ವಿರುದ್ಧ ಪ್ರಕರಣ ದಾಖಲಿಸುವುದಾಗಿ ನಾಮಫಲಕ ಹಾಕಿಸಿದರು.
ಬೇವಿನಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ಎರಡು ಕಸ ಸಂಗ್ರಹ ವಾಹನಗಳಿವೆ. ಅನ್ನಪೂರ್ಣೇಶ್ವರಿ ಬಡಾವಣೆ, ಮಹಾಲಕ್ಷ್ಮೀ ಬಡಾವಣೆ, ಸಿದ್ದೇಶ್ವರ ಲೇಔಟ್, ವಿಕಸನ ಲೇಔಟ್‌ಗಳಲ್ಲಿ ಎರಡು ದಿನಗಳಿಗೊಮ್ಮೆ ಕಸ ಸಂಗ್ರಹಿಸಲಾಗುತ್ತಿದೆ. ಆದರೂ ಕಸ ಬೀಳುತ್ತಿದ್ದ ಜಾಗಗಳನ್ನು ಗುರುತಿಸಿ ಸೀಸಿ ಕ್ಯಾಮೆರಾ ಅಳವಡಿಸಲಾಗಿದೆ. ಇದೀಗ ಸೀಸಿ ಕ್ಯಾಮರಾಗಳಿಗೆ ಹೆದರಿ ಜನರು ಕಸ ಹಾಕುವುದನ್ನು ನಿಲ್ಲಿಸಿದ್ದಾರೆ. ಇನ್ನಾದರೂ ಐಸಾರ್ವಜನಿಕರಲ್ಲಿ ಸ್ವಯಂಪ್ರೇರಿತವಾಗಿ ಸ್ವಚ್ಛತೆಯ ಜಾಗೃತಿ ಮೂಡಬೇಕಿದೆ.
- ಲೋಕೇಶ್, ಆಡಳಿತಾಧಿಕಾರಿ, ಬೇವಿನಹಳ್ಳಿ ಗ್ರಾಪಂಎಷ್ಟೇ ಬಾರಿ ಸ್ವಚ್ಛಗೊಳಿಸಿದರೂ ಮೂರು ಸ್ಥಳಗಳಲ್ಲಿ ಮರುದಿನಕ್ಕೆ ಕಸ ಬೀಳುತ್ತಲೇ ಇತ್ತು. ಇದನ್ನು ತಪ್ಪಿಸಲು ಸೀಸಿ ಕ್ಯಾಮೆರಾ ಅಳವಡಿಸಲಾಗಿದೆ. ಕಸ ಎಸೆಯುವವರ ಫೋಟೋ, ವಾಹನ ಸಂಖ್ಯೆಯನ್ನು ಸೆರೆಹಿಡಿದು ಕಳುಹಿಸುತ್ತೆ. ಜೊತೆಗೆ ಸೈರನ್ ಕೂಡ ಮೊಳಗಿಸುತ್ತೆ. ಕ್ಯಾಮೆರಾ ಅಳವಡಿಸಿದ ಬಳಿಕ ಕಸ ಹಾಕುವವರು ಇಲ್ಲವಾಗಿದ್ದಾರೆ.