ರವಿ ಕಾಂಬಳೆ
ಸೂಕ್ಷ್ಮ ಪ್ರದೇಶ ಎಂದೇ ಗುರುತಿಸಲ್ಪಿಟ್ಟಿರುವ ಹುಕ್ಕೇರಿ ನಗರದಲ್ಲಿ ಸಿಸಿ ಕ್ಯಾಮೆರಾಗಳ ಹದ್ದಿನ ಕಣ್ಗಾವಲು ಹಾಕಲಾಗಿದೆ. ಇದರೊಂದಿಗೆ ಸೌಹಾರ್ದತೆಯ ಪ್ರತೀಕ ಮತ್ತು ಭಾವೈಕ್ಯತೆಗೆ ಹೆಸರುವಾಸಿಯಾದ ಹುಕ್ಕೇರಿ ಪಟ್ಟಣವನ್ನು ಇನ್ನು ಮುಂದೆ ಕ್ಯಾಮೆರಾ ಕಣ್ಣುಗಳು ಕಾಯಲಿವೆ.
ಅಪರಾಧ ಚಟುವಟಿಕೆಗಳ ನಿಯಂತ್ರಣ ಮತ್ತು ಪತ್ತೆಗೆ ಪೊಲೀಸರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನಗರದ ಸೂಕ್ಷ್ಮ, ಅತೀಸೂಕ್ಷ್ಮ, ಆಯ್ದ ಪ್ರದೇಶ ಮತ್ತು ಪ್ರಮುಖ ಮಾರ್ಗಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ತನ್ಮೂಲಕ ಪಟ್ಟಣದ ಅಲ್ಲಲ್ಲಿ ಅಳವಡಿಸಿದ ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ ಸಿಸಿ ಕ್ಯಾಮೆರಾಗಳು ಪೊಲೀಸ್ ಇಲಾಖೆಗೆ ಪೂರಕವಾಗಿ ಕೆಲಸ ನಿರ್ವಹಿಸಲಿವೆ.ಸಿಸಿ ಕ್ಯಾಮೆರಾ ಅಳವಡಿಕೆಯೊಂದಿಗೆ ಅಪರಾಧ ಮುಕ್ತ ಹುಕ್ಕೇರಿಯನ್ನಾಗಿ ಪರಿವರ್ತಿಸಲು ಹುಕ್ಕೇರಿ ಪೊಲೀಸ್ ಇಲಾಖೆ ಮಹತ್ವದ ಹೆಜ್ಜೆ ಇಟ್ಟಿದೆ. ಈ ಸಿಸಿ ಕ್ಯಾಮೆರಾಗಳು ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸಲಿವೆ. ಇದರಿಂದ ಅಪರಾಧ ಹತ್ತಿಕ್ಕುವ ಕೆಲಸಕ್ಕೆ ಸಾಕಷ್ಟು ಸಹಕಾರಿಯಾಗಲಿದೆ. ಜೊತೆಗೆ ಟ್ರಾಫಿಕ್ ಸಮಸ್ಯೆ ನಿವಾರಣೆಯೊಂದಿಗೆ ಜನ ಹಾಗೂ ವಾಹನಗಳ ಸುಗಮ ಸಂಚಾರಕ್ಕೂ ನೆರವಾಗಲಿದೆ.
ಕೋರ್ಟ್ ಸರ್ಕಲ್‌ನಲ್ಲಿ 2, ನಾಕಾದಲ್ಲಿ 1, ಹೊಸ ಬಸ್ ನಿಲ್ದಾಣ ಬಳಿ 3, ಕಾರಂಜಿ ಮಸೀದಿ ಹತ್ತಿರ 2, ಕಾಲಿ ಮಸೀದಿ ಬಳಿ 1, ಹೊಸ ಗ್ರಂಥಾಲಯ ಹತ್ತಿರ 2, ಅಡವಿಸಿದ್ದೇಶ್ವರ ಮಠದ ಪ್ರದೇಶದಲ್ಲಿ 3, ವಿಶ್ವರಾಜ ಭವನ ಕ್ರಾಸ್ ಬಳಿ 1, ಸಂಗೊಳ್ಳಿ ರಾಯಣ್ಣ ಸರ್ಕಲ್‌ನಲ್ಲಿ 2, ಬೆಲ್ಲದ ಬಾಗೇವಾಡಿ ಕ್ರಾಸ್ ಬಳಿ 2, ಅಟೋ ಸ್ಟ್ಯಾಂಡ್ ಹತ್ತಿರ 1, ಮಂಥನ ಬಾರ್ ಬಳಿ 1 ಹೀಗೆ ಪಟ್ಟಣದ ವಿವಿಧ ಕಡೆಗಳಲ್ಲಿ 21 ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಈ ಎಲ್ಲ ಸಿಸಿ ಕ್ಯಾಮೆರಾಗಳನ್ನು ನಿಯಂತ್ರಿಸಲು ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಸುಮಾರು 50 ಮೀಟರ್‌ವರೆಗಿನ ಸುತ್ತಮುತ್ತಲಿನ ಪ್ರದೇಶಗಳ ದೃಶ್ಯಗಳನ್ನು ಸೆರೆಹಿಡಿಯುವ ಸಾಮರ್ಥ್ಯ ಹೊಂದಿವೆ. ದಿನದಿಂದ ದಿನಕ್ಕೆ ಜನಸಂಖ್ಯೆ ಮತ್ತು ವಾಹನಗಳ ಸಂಖ್ಯೆಯೂ ಹೆಚ್ಚಳವಾಗುತ್ತಿದ್ದು ಮುಂಜಾಗೃತವಾಗಿ ಅಪರಾಧ ಚಟುವಟಿಕೆಗಳನ್ನು ತಡೆಯಲು ಪೊಲೀಸ್ ಇಲಾಖೆ ಈ ಕ್ರಮಕ್ಕೆ ಮುಂದಾಗಿದೆ.
- ನಿಖಿಲ್ ಕತ್ತಿ, ಶಾಸಕರುಪೊಲೀಸ್ ಇಲಾಖೆಗೆ ಅನುಕೂಲವಾಗುವ ನಿಟ್ಟಿನಲ್ಲಿ ನಗರದ ಸೂಕ್ಷ್ಮ, ಅತೀಸೂಕ್ಷ್ಮ, ಆಯ್ದ ಪ್ರದೇಶ ಮತ್ತು ಪ್ರಮುಖ ಮಾರ್ಗಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಸಿಸಿ ಟಿವಿ ಕ್ಯಾಮೆರಾದಿಂದ ಅಪರಾಧ ಪತ್ತೆಗೆ ಸುಲಭವಾಗಲಿದೆ.