ಸೌಹಾರ್ದಯುತವಾಗಿ ಗಣೇಶ ಚತುರ್ಥಿ, ಈದ್ ಮಿಲಾದ್ ಆಚರಿಸಿ: ಸಿಪಿಐ ಯಶವಂತ ಬಿಸನಳ್ಳಿ

KannadaprabhaNewsNetwork |  
Published : Sep 01, 2024, 01:57 AM IST
ಪೋಟೊ31ಕೆಎಸಟಿ2: ಕುಷ್ಟಗಿ ಪೋಲಿಸಠಾಣೆಯಲ್ಲಿ ನಡೆದ ಶಾಂತಿಸಭೆಯಲ್ಲಿ ಸಿಪಿಐ ಯಶವಂತ ಬಿಸನಳ್ಳಿ ಅವರು ಮಾತನಾಡಿದರು. | Kannada Prabha

ಸಾರಾಂಶ

ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕು ಎಂದು ಸಿಪಿಐ ಯಶವಂತ ಬಿಸನಳ್ಳಿ ಹೇಳಿದರು.

ಕುಷ್ಟಗಿ: ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬವನ್ನು ಸೌಹಾರ್ದಯುತವಾಗಿ ಆಚರಿಸಬೇಕು. ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡಬಾರದು ಎಂದು ಸಿಪಿಐ ಯಶವಂತ ಬಿಸನಳ್ಳಿ ಅವರು ಹೇಳಿದರು.

ಪಟ್ಟಣದ ಪೊಲೀಸ್‌ ಠಾಣೆಯಲ್ಲಿ ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಅಂಗವಾಗಿ ನಡೆದ ಶಾಂತಿ ಸಭೆಯಲ್ಲಿ ಮಾತನಾಡಿದರು.ಈ ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕು. ಅಂತಹ ಘಟನೆಗಳು ನಡೆದರೆ ಕಾನೂನೂ ಸೂಕ್ತವಾದ ಕ್ರಮ ಜರುಗಿಸಬೇಕಾಗುತ್ತದೆ ಎಂದರು.ಅನುಮತಿ ಪಡೆಯದೆ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವಂತಿಲ್ಲ. ತಾಲೂಕಿನಲ್ಲಿ 175ಕ್ಕೂ ಅಧಿಕ ಮೂರ್ತಿಗಳನ್ನು ಪ್ರತಿಷ್ಠಾಪನೆಯ ಮಾಹಿತಿಯಿದ್ದು, ಎಲ್ಲರೂ ಸಂಬಂದಪಟ್ಟ ಇಲಾಖೆಯಿಂದ ಗ್ರಾಪಂ, ಪುರಸಭೆ, ಜೆಸ್ಕಾಂ,ಅಗ್ನಿಶಾಮಕ ಸೇರಿದಂತೆ ವಿವಿಧ ಇಲಾಖೆಗಳ ವತಿಯಿಂದ ಪರವಾನಗಿ ಪಡೆದುಕೊಂಡು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವ ಮೂಲಕ ಹಬ್ಬ ಆಚರಿಸಬೇಕು. ಪಟಾಕಿ ಮಾರಾಟಗಾರರೂ ಪರವಾನಗಿ ಪಡೆದುಕೊಂಡು ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡಬೇಕು ಎಂದರು.

ಅಗ್ನಿಶಾಮಕ ಠಾಣಾಧಿಕಾರಿ ರಾಜು ನರಸಪ್ಪ ಮಾತನಾಡಿ, ಎಲ್ಲ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆ ಸ್ಥಳಗಳಲ್ಲಿ ಅಗ್ನಿ ನಂದಿಕೆಗಳನ್ನು ಬಳಸಿ. ಅವುಗಳು ಇಲ್ಲದಿದ್ದರೆ ಮರಳು ಮತ್ತು ನೀರು ಶೇಖರಿಸಬೇಕು. ಅವಘಡಗಳು ಉಂಟಾದರೆ ಕನಿಷ್ಟ ಪಕ್ಷ ಮುಂದಾಗುವ ಅನಾಹುತ ತಪ್ಪಿಸಬಹುದು. ಗಣೇಶ ಮೂರ್ತಿಯ ಮೆರವಣಿಗೆಯ ಹಾದಿ ಸುಗಮವಾಗಿರುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

ಪಿಎಸ್‌ಐ ಹನುಮಂತಪ್ಪ ತಳವಾರ ಮಾತನಾಡಿ, ಗಣೇಶ ಮೂರ್ತಿ ಪ್ರತಿಷ್ಠಾಪನೆಯ ಸಮಯದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕು. ಅಹಿತಕರ ಘಟನೆಗಳು ನಡೆದರೆ ಅವರ ವಿರುದ್ಧ ಕ್ರಮ ಕೈಗೊಳ್ಳುವ ಜೊತೆಗೆ ಮುಂದಿನ ಸಾರಿ ಅವರಿಗೆ ಪ್ರತಿಷ್ಠಾಪನೆಯ ಅವಕಾಶ ಕೊಡುವುದಿಲ್ಲ. ಮೆರವಣಿಗೆಯ ವೇಳೆ ಡಿಜೆ ಬಳಸುವಂತಿಲ್ಲ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಅನಗತ್ಯ ಗೊಂದಲ ಉಂಟಾಗುವ ಸಂದೇಶಗಳ ರವಾನೆ ಮಾಡಬಾರದು. ಅಂತಹ ಘಟನೆಗಳು ಜರುಗಿದರೆ ಸೂಕ್ತ ಕಾನೂನು ಕ್ರಮಕ್ಕೆ ಮುಂದಾಗುತ್ತೇವೆ. ಎಲ್ಲ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಯ ಸಮಯದಲ್ಲಿ ನಮ್ಮ ಇಲಾಖೆಯ ಸಿಬ್ಬಂದಿ ಇರುತ್ತಾರೆ ಎಂದರು.

ಈ ಸಂದರ್ಭದಲ್ಲಿ ಸಾರ್ವಜನಿಕರು ಅನೇಕ ಸಲಹೆ ಸೂಚನೆಗಳನ್ನು ನೀಡಿ ಶಾಂತಿ ಸೌಹಾರ್ದದಿಂದ ಗಣೇಶ ಹಬ್ಬ ಆಚರಿಸಲು ಒಪ್ಪಿದರು. ಈ ಶಾಂತಿ ಸಭೆಯಲ್ಲಿ ತಾಲೂಕಿನ ವಿವಿಧ ಪಿಡಿಒಗಳು. ಕೆಇಬಿ ಅಧಿಕಾರಿಗಳು ಸೇರಿದಂತೆ ಅನೇಕರು ಇದ್ದು, ಗಣೇಶ ಹಬ್ಬದ ಆಚರಣೆ ಬಗ್ಗೆ ಸೂಚನೆಗಳನ್ನು ನೀಡಿದರು.

PREV

Recommended Stories

ಬೆಳ್ತಂಗಡಿ: ಆಧಾರ್‌ ನೋಂದಣಿ, ತಿದ್ದುಪಡಿ ಶಿಬಿರ
ಲಾಯಿಲ ರಾಘವೇಂದ್ರ ಮಠ ಅಭಿವೃದ್ಧಿಗೆ 20 ಲಕ್ಷ ರು. ನೆರವು: ಶಾಸಕ ಗವಿಯಪ್ಪ ಭರವಸೆ