ಕನ್ನಡಪ್ರಭ ವಾರ್ತೆ ಆಲೂರು
ಪರಿಸರವನ್ನು ಕಾಪಾಡಿಕೊಳ್ಳುವ ಮೂಲಕ ಗೌರಿ, ಗಣೇಶ ಹಬ್ಬವನ್ನು ಎಲ್ಲರೂ ಒಗ್ಗಟ್ಟಾಗಿ ವಿಜೃಂಭಣೆಯಿಂದ ಆಚರಿಸಲು ಸಹಕರಿಸಬೇಕು ಎಂದು ತಹಸೀಲ್ದಾರ್ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಅಧ್ಯಕ್ಷ ಎಚ್. ಮಲ್ಲಿಕಾರ್ಜುನ ಮನವಿ ಮಾಡಿದರು.ಪಟ್ಟಣದ ಮಿನಿ ವಿದಾನಸೌಧ ಸಭಾಂಗಣದಲ್ಲಿ ಗೌರಿ ಗಣೇಶ ಹಬ್ಬದ ಸಲುವಾಗಿ ಪ್ಲಾಸ್ಟರ್ ಆಫ್ ಪ್ಯಾರಿಸ್(ಪಿಒಪಿ) ಹಾಗೂ ರಸಾಯನಿಕ ಮುಕ್ತ ಗುಣಗಳುಳ್ಳ ವಸ್ತುಗಳನ್ನು ಬಳಸಿ ತಯಾರಿಸುವ ಗಣೇಶ ವಿಗ್ರಹಗಳ ಉತ್ಪಾದನೆ, ಸಂಗ್ರಹಣೆ, ಮಾರಾಟ ಮತ್ತು ವಿಸರ್ಜನೆಯನ್ನು ನಿಷೇಧಿಸಿರುವ ಕುರಿತು ಏರ್ಪಡಿಸಲಾಗಿದ್ದ ಜಾಗೃತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಪುರಾತನ ಕಾಲದಿಂದಲೂ ಗೌರಿ ಗಣೇಶ ಮೂರ್ತಿಯನ್ನು ಜೆಡಿ ಮಣ್ಣಿನಿಂದ ತಯಾರಿಸಿ ಪೂಜಿಸಿ, ಆರಾಧಿಸಿ, ನದಿ, ಬಾವಿ, ಕೆರೆ, ಕಟ್ಟೆಗಳಾದ ಜಲಮೂಲಗಳಿಂದ ಪರಿಸರದಲ್ಲಿ ಲೀನವಾಗುವಂತೆ ವಿಸರ್ಜಿಸುವ ಮೂಲಕ ಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಪಿಒಪಿ ಯಿಂದ ತಯಾರಿಸುವ ಮತ್ತು ರಸಾಯನಿಕ ಮುಕ್ತ ಬಣ್ಣವನ್ನು ಬಳಸುವುದರಿಂದ ಪರಿಸರ ಮತ್ತು ನೀರು ಕಲ್ಮಶವಾಗಿ ಮನುಷ್ಯರು, ಪ್ರಾಣಿಗಳ ಮೇಲೆ ಆರೋಗ್ಯದ ದುಷ್ಪರಿಣಾಮ ಬೀರುತ್ತಿದೆ. ಈ ಕುರಿತು ಗೌರಿ, ಗಣೇಶ ಮೂರ್ತಿಗಳನ್ನು ತಯಾರಿಸುವ, ಮಾರಾಟ ಮಾಡುವ ಮತ್ತು ಪ್ರತಿಷ್ಠಾಪಿಸುವ ಸಮಿತಿಗಳ ಗಮನಕ್ಕೆ ತಂದು, ಪಿಒಪಿ ಮತ್ತು ರಸಾಯನಿಕ ಬಣ್ಣದಿಂದ ತಯಾರು ಮಾಡಿರುವ ಮೂರ್ತಿಗಳನ್ನು ಹೊರತುಪಡಿಸಿ, ಮಣ್ಣಿನಿಂದ ತಯಾರು ಮಾಡುವ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜಿಸಿ ವಿಜೃಂಭಣೆಯಿಂದ ಹಬ್ಬವನ್ನು ಆಚರಣೆ ಮಾಡೋಣ. ಮೂರ್ತಿಗಳನ್ನು ವಿಸರ್ಜನೆ ಮಾಡುವ ಸಂದರ್ಭದಲ್ಲಿ ಸಾಧ್ಯವಾದಷ್ಟು ಜಲಮಾಲಿನ್ಯ, ಶಬ್ಧಮಾಲಿನ್ಯವಾಗದಂತೆ ಸಹಕರಿಸಬೇಕು. ಜನ, ಜಾನುವಾರುಗಳು ಬಳಸುವ ನೀರಿನಲ್ಲಿ ವಿಸರ್ಜಿಸಬಾರದು.
ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಮುನ್ನ ಸ್ಥಳೀಯ ಪಂಚಾಯಿತಿ ಮತ್ತು ಪೊಲೀಸ್ ಅನುಮತಿ ಕೊಡುವ ಸಂದರ್ಭದಲ್ಲಿ ನಿಯಮಗಳ ಪಟ್ಟಿಯನ್ನು ಲಗತ್ತಿಸಬೇಕು. ರಾತ್ರಿ ೧೦ ರಿಂದ ಬೆಳಗ್ಗೆ ೬ರವರೆಗೆ ಧ್ವನಿವರ್ಧಕ ಬಳಸಬಾರದು. ನಿಯಮ ಮೀರಿದರೆ ಶಿಕ್ಷಾರ್ಹ ಅಪರಾಧವಾಗಿದ್ದು, ಗರಿಷ್ಠ ೧.೦೦ ಲಕ್ಷ ರು. ದಂಡದೊಂದಿಗೆ ಗರಿಷ್ಠ ೫ ವರ್ಷ ಕಾರಾಗೃಹ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.ತಾಲೂಕು, ಪ್ರತಿ ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ ಕೇಂದ್ರಗಳಲ್ಲಿ ಅಗತ್ಯವಿರುವ ಸ್ಥಳದಲ್ಲಿ ಬೃಹತ್ ಫ್ಲೆಕ್ಸ್ ಹಾಕುವ ಮೂಲಕ ಸಾರ್ವಜನಿಕರಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸಬೇಕು. ಗಣೇಶ ಮೂರ್ತಿ ತಯಾರು ಮಾಡುವವರನ್ನು ಸಂಪರ್ಕಿಸಿ ನಿಯಮಗಳನ್ನು ಪಾಲಿಸುವಂತೆ ಸೂಚನೆ ನೀಡಬೇಕು ಎಂದರು. ಸಭೆಯಲ್ಲಿ ರಾಜಸ್ವನಿರೀಕ್ಷಕ ಗೋವಿಂದರಾಜು, ತಾ.ಪಂ. ವ್ಯವಸ್ಥಾಪಕ ರಾಜೇಶ್, ಸಹಾಯಕ ಸಬ್ ಇನ್ಸ್‌ಪೆಕ್ಟರ್ ಚಂದ್ರಶೇಖರ್, ಲಲಿತಮ್ಮ, ಸಾಗರ್ ಇತರರು ಉಪಸ್ಥಿತರಿದ್ದರು.