ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸಮನ್ವಯತೆಯಿಂದ ಆಚರಿಸಿ: ಕೃಷಿ ಸಚಿವ ಚಲುವರಾಯಸ್ವಾಮಿ

KannadaprabhaNewsNetwork | Updated : Nov 02 2024, 01:34 AM IST

ಸಾರಾಂಶ

೮೭ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಆತಿಥ್ಯ ವಹಿಸುವ ಅವಕಾಶ ನಮ್ಮ ಮಂಡ್ಯ ಜಿಲ್ಲೆಗೆ ಸಿಕ್ಕಿರುವುದು ಹೆಮ್ಮೆಯ ವಿಷಯ. ಇದನ್ನು ನಾವು ಹಬ್ಬದಂತೆ ಆಚರಿಸಬೇಕಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲರೂ ಒಗ್ಗೂಡಿ ಸಹಕಾರ ಮತ್ತು ಸಮನ್ವಯತೆಯಿಂದ ಸಾಹಿತ್ಯ ಸಮ್ಮೇಳನದ ಯಶಸ್ವಿಗೆ ಶ್ರಮಿಸಬೇಕು

ಕನ್ನಡಪ್ರಭ ವಾರ್ತೆ ಮಂಡ್ಯ

ಮೂರನೇ ಬಾರಿಗೆ ಸಕ್ಕರೆ ನಾಡಿನಲ್ಲಿ ಆಯೋಜನೆಗೊಂಡಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸಮನ್ವಯತೆಯಿಂದ ಆಚರಿಸುವಂತೆ ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.

ನಗರದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಆಯೋಜನೆಗೊಂಡಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದ ಸಂದೇಶ ಭಾಷಣದಲ್ಲಿ ಮಾತನಾಡಿ, ೮೭ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಆತಿಥ್ಯ ವಹಿಸುವ ಅವಕಾಶ ನಮ್ಮ ಜಿಲ್ಲೆಗೆ ಸಿಕ್ಕಿರುವುದು ಹೆಮ್ಮೆಯ ವಿಷಯ. ಇದನ್ನು ನಾವು ಹಬ್ಬದಂತೆ ಆಚರಿಸಬೇಕಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲರೂ ಒಗ್ಗೂಡಿ ಸಹಕಾರ ಮತ್ತು ಸಮನ್ವಯತೆಯಿಂದ ಸಾಹಿತ್ಯ ಸಮ್ಮೇಳನದ ಯಶಸ್ವಿಗೆ ಶ್ರಮಿಸುವಂತೆ ಮನವಿ ಮಾಡಿದರು.

ರಾಜ್ಯೋತ್ಸವ ದಿನದ ಮಹತ್ವವನ್ನು ಅರಿತು ನಾವೆಲ್ಲರೂ ಅಂತಃಕರಣ ಶುದ್ಧಿಯಿಂದ ನಿಷ್ಠೆ, ಪ್ರಾಮಾಣಿಕಕತೆ, ಬದ್ಧತೆಯನ್ನು ಮೈಗೂಡಿಸಿಕೊಂಡು ನಾಡು-ನುಡಿಯ ಏಳಿಗೆಗೆ ನಮ್ಮನ್ನು ನಾವು ಸಮರ್ಪಿಸಿಕೊಳ್ಳಬೇಕು ಎಂದರು.

ಎಲ್ಲಾ ಕನ್ನಡಿಗರೂ ನಾಡು-ನುಡಿಯ ಬಗ್ಗೆ ಪ್ರೀತಿ-ಅಭಿಮಾನ ಬೆಳೆಸಿಕೊಂಡು ಭಾಷೆಗೆ ಶ್ರೀಮಂತಿಕೆ ತಂದುಕೊಟ್ಟ ಮಹನೀಯರು, ಕವಿಗಳನ್ನು ಸ್ಮರಿಸುತ್ತಾ ಇಂದಿನ ಯುವ ಪೀಳಿಗೆ ಅವರ ಆದರ್ಶಗಳನ್ನು ರೂಢಿಸಿಕೊಳ್ಳಬೇಕು. ಆ ಮೂಲಕ ನಾಡಿಗೆ ಕೀರ್ತಿ ತರುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು ಎಂದರು.

ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಹೆಚ್ಚಿಸಲು ಹಾಗೂ ಸರ್ಕಾರಿ ಶಾಲೆಗಳನ್ನು ಆಧುನೀಕರಣಗೊಳಿಸುವ ನಿಟ್ಟಿನಲ್ಲಿ ಜಿಲ್ಲೆಯ ೨೦ ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ ಸಿಎಸ್‌ಆರ್ ಅನುದಾನದಡಿ ಅಭಿವೃದ್ಧಿಗೆ ಯೋಜಿಸಲಾಗಿದೆ. ೪ ಶಾಲೆಗಳನ್ನು ಗ್ರೀನ್ ಫೀಲ್ಡ್ ಯೋಜನೆಯಡಿ ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿಪಡಿಸಲು ಯೋಜಿಸುವ ಮೂಲಕ ಶೈಕ್ಷಣಿಕ ಗುಣಮಟ್ಟ ಹೆಚ್ಚಳಕ್ಕೆ ಆದ್ಯತೆ ನೀಡಲಾಗಿದೆ ಎಂದರು.

ಒಂದೇ ಸೂರಿನಡಿ ಕೃಷಿ ಮತ್ತು ಕೃಷಿ ಸಂಬಂಧಿತ ಎಲ್ಲಾ ಯೋಜನೆಗಳನ್ನು ರೈತರಿಗೆ ತಲುಪಿಸಬೇಕೆಂಬ ಸದುದ್ದೇಶದಿಂದ ಜಿಲ್ಲೆಯಲ್ಲಿ ೧೩ ನಿವೇಶನಗಳನ್ನು ಗುರುತಿಸಲಾಗಿದ್ದು, ಅದರಲ್ಲಿ ೮ ರೈತ ಸಂಪರ್ಕ ಕೇಂದ್ರಗಳನ್ನು ಮಂಜೂರು ಮಾಡಲಾಗಿದೆ. ಮಂಡ್ಯ ಮತ್ತು ನಾಗಮಂಗಲದಲ್ಲಿ ಸೆಂಟರ್ ಆಫ್ ಎಕ್ಸಲೆನ್ಸ್ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದು ನುಡಿದರು.

ಕೃಷಿ ಜಮೀನುಗಳ ವ್ಯಾಜ್ಯಗಳನ್ನು ತಪ್ಪಿಸಲು ಕಂದಾಯ ದಾಖಲೆಗಳಲ್ಲಿ ನಿಖರತೆಯನ್ನು ತರಲು ಎಲ್ಲಾ ಪಹಣಿಗಳಿಗೆ ಆಧಾರ್ ಜೋಡಣೆ ಮಾಡಲಾಗುತ್ತಿದೆ. ಒಟ್ಟು ೨೨ ಲಕ್ಷ ಖಾತೆದಾರರ ಪೈಕಿ ಸುಮಾರು ೧೩ ಲಕ್ಷ ಖಾತೆದಾರರ ಆಧಾರ್ ಜೋಡಣೆ ಮಾಡಲಾಗಿದೆ.. ಕಂದಾಯ ಇಲಾಖೆಯಲ್ಲಿ ಹಲವಾರು ವರ್ಷಗಳಿಂದ ಬಾಕಿ ಇದ್ದ ೧೨ ಸಾವಿರಕ್ಕೂ ಹೆಚ್ಚು ಪ್ರಕರಣಗಳನ್ನು ಒಂದೇ ವರ್ಷದಲ್ಲಿ ಇತ್ಯರ್ಥಪಡಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಶಾಸಕರಾದ ಪಿ.ರವಿಕುಉಮಾರ, ವಿಧಾನಪರಿಷತ್ ಶಾಸಕ ದಿನೇಶ್ ಗೂಳಿಗೌಡ, ಜಿಲ್ಲಾಧಿಕಾರಿ ಡಾ.ಕುಮಾರ, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಅಪರ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ, ಕನ್ನಡ ಸಾಹಿತ್ಯ ಸಮ್ಮೇಳನದ ಸಮನ್ವಯ ಸಮಿತಿ ಸಂಚಾಲಕಿ ಮೀರಾ ಶಿವಲಿಂಗಯ್ಯ, ಮುಡಾ ಅಧ್ಯಕ್ಷ ನಹೀಂ, ನಗರಸಭೆ ಅಧ್ಯಕ್ಷ ಪ್ರಕಾಶ್, ಉಪಾಧ್ಯಕ್ಷ ಎಂ.ಪಿ.ಅರುಣ್‌ಕುಮಾರ್ ಇತರರಿದ್ದರು.

ಪಥ ಸಂಚಲನ ವಿಜೇತರ ಪಟ್ಟಿ

೬೯ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ನಡೆದ ಪಥ ಸಂಚಲನದ ವಿಜೇತರ ಪಟ್ಟಿ ಇಂತಿದೆ:

ಜಿಲ್ಲಾ ಸಶಸ್ತ್ರ ಮೀಸಲು ಪಡೆ -ಪ್ರಥಮ, ಅಗ್ನಿ ಶಾಮಕ ದಳ -ದ್ವಿತೀಯ ಹಾಗೂ ಗೃಹ ರಕ್ಷಕ ದಳ- ತೃತೀಯ. ಎನ್‌ಸಿಸಿ ವಿಭಾಗದಲ್ಲಿ ಪಿಇಎಸ್ ಕಾಲೇಜಿನ ಎನ್‌ಸಿಸಿ ಬಾಲಕರ ತಂಡ- ಪ್ರಥಮ, ಮಂಡ್ಯ ವಿಶ್ವವಿದ್ಯಾಲಯದ ಎನ್‌ಸಿಸಿ ಬಾಲಕರ ತಂಡ- ದ್ವಿತೀಯ, ಅನಿಕೇತನ ಕಾಲೇಜಿನ ಎನ್‌ಸಿಸಿ ಬಾಲಕಿಯರ ತಂಡ- ತೃತೀಯ. ಸ್ಕೌಟ್ಸ್ ಮತ್ತು ಗೈಡ್ಸ್ ವಿಭಾಗದಲ್ಲಿ ರೋಟರಿ ಪ್ರೌಢ ಶಾಲೆ (ಸ್ಕೌಟ್ಸ್) ಬಾಲಕರ ತಂಡ -ಪ್ರಥಮ, ರೋಟರಿ ಪ್ರೌಢಶಾಲೆ (ಗೈಡ್ಸ್) ಬಾಲಕಿಯರ ತಂಡ- ದ್ವಿತೀಯ, ಸೆಂಟ್ ಜೋಸೆಫ್ (ಗೈಡ್ಸ್) ಬಾಲಕಿಯರ ತಂಡವು ತೃತೀಯ. ಪ್ರೌಢ ಶಾಲಾ ವಿಭಾಗದಲ್ಲಿ ಆದರ್ಶ ಪ್ರೌಢ ಶಾಲೆ ಬಾಲಕಿಯರ ತಂಡ- ಪ್ರಥಮ, ಕೆಪಿಎಸ್ ಅರಕೇಶ್ವರ ನಗರ ಪ್ರೌಢಶಾಲೆ ಬಾಲಕಿಯರ ತಂಡ -ದ್ವಿತೀಯ, ಕಾರ್ಮೆಲ್ ಕಾನ್ವೆಂಟ್ ಪ್ರೌಢಶಾಲೆ ಬಾಲಕಿಯರ ತಂಡ ತೃತೀಯ. ಪ್ರಾಥಮಿಕ ಶಾಲಾ ವಿಭಾಗದಲ್ಲಿ ಕಾರ್ಮೆಲ್ ಕಾನ್ವೆಂಟ್ ಪ್ರಾಥಮಿಕ ಶಾಲೆ ಬಾಲಕಿಯರ (ಕನ್ನಡ ಮಾಧ್ಯಮ) ತಂಡ- ಪ್ರಥಮ. ಸೆಂಟ್ ಜೋಸೆಫ್ ಪ್ರಾಥಮಿಕ ಶಾಲೆ ಬಾಲಕಿಯರ ತಂಡ- ದ್ವಿತೀಯ, ಕಾರ್ಮೆಲ್ ಕಾನ್ವೆಂಟ್ ಪ್ರಾಥಮಿಕ ಶಾಲೆ ಬಾಲಕಿಯರ (ಇಂಗ್ಲೀಷ್ ಮಾಧ್ಯಮ) ತಂಡ ತೃತೀಯ.

ಸಾಹಿತ್ಯ ಸಮ್ಮೇಳನ ಪ್ರಚಾರ ರಥಕ್ಕೆ ಚಾಲನೆ

ಡಿ.೨೦ರಿಂದ ಮೂರು ದಿನಗಳ ಕಾಲ ಜಿಲ್ಲೆಯಲ್ಲಿ ಆಯೋಜನೆಗೊಂಡಿರುವ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಾರ್ವಜನಿಕರನ್ನು ಆಹ್ವಾನಿಸಲು ಸಿದ್ಧಪಡಿಸಿರುವ ಪ್ರಚಾರ ರಥಕ್ಕೆ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಹಸಿರು ಬಾವುಟ ತೋರುವ ಮೂಲಕ ಚಾಲನೆ ನೀಡಿದರು. ರಾಜ್ಯೋತ್ಸವ ದಿನದಿಂದಲೇ ರಥವು ಜಿಲ್ಲಾದ್ಯಂತ ಎಲ್ಲ ಪಂಚಾಯ್ತಿಗಳಲ್ಲೂ ಸಂಚರಿಸಿ ಎಲ್ಲ ಜನರನ್ನು ಸಮ್ಮೇಳನಕ್ಕೆ ಆಹ್ವಾನಿಸಲಿದೆ. ರಥವನ್ನು ಕಲಾತ್ಮಕವಾಗಿ ಸಿಂಗರಿಸಲಾಗಿದ್ದು, ಆಕರ್ಷಣೀಯವಾಗಿ ಮೂಡಿಬಂದು ಎಲ್ಲರ ಗಮನಸೆಳೆಯುತ್ತಿದೆ.

ಗೀತೆಯ ಮೂಲಕ ಆಹ್ವಾನ

ಸಾಹಿತ್ಯ ಸಮ್ಮೇಳನಕ್ಕೆ ಸಾರ್ವಜನಿಕರನ್ನು ಆಹ್ವಾನಿಸಲು ಗೀತೆಯೊಂದನ್ನು ಬಿಡುಗಡೆ ಮಾಡಲಾಗಿದೆ. ಡಾ.ಸುಮಾರಾಣಿ ಶಂಭು ರಚನೆಯಲ್ಲಿ ಸಕ್ಕರೆ ನಾಡಿನ ಮಾಂಡವ್ಯ ಬೀಡಿನ ಅಕ್ಷರ ಜಾತ್ರೆಯ ರಥಯಾತ್ರೆ... ಎಂಬ ಹಾಡು ಮೂಡಿಬಂದಿದೆ. ಈ ಗೀತೆಗೆ ಸುನೀತಾ ನಂದಕುಮಾರ್ ತಂಡ ಹಾಡುವುದರೊಂದಿಗೆ ಸ್ವರಸಂಯೋಜನೆ ಮಾಡಿದೆ. ರಾಜ್ಯೋತ್ಸವ ಸಮಾರಂಭದಲ್ಲಿ ಆಹ್ವಾನ ಗೀತೆಗೆ ಮಾಂಡವ್ಯ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ನೃತ್ಯ ಪ್ರದರ್ಶಿಸಿದ್ದು ವಿಶೇಷವಾಗಿತ್ತು.ಹಲ್ಮಿಡಿ ಶಾಸನದ ಪ್ರತಿಕೃತಿ ಅನಾವರಣ

ಕರ್ನಾಟಕ ಸುವರ್ಣ ಸಂಭ್ರಮದ ಅಂಗವಾಗಿ ಕನ್ನಡದ ಮೊದಲ ಶಾಸನವಾದ ಹಲ್ಮಿಡಿ ಶಾಸನದ ಪ್ರತಿಕೃತಿಯನ್ನು ಮಂಡ್ಯ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗವಿರುವ ಕಾವೇರಿ ಉದ್ಯಾನವನದಲ್ಲಿ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಅವರು ಅನಾವರಣಗೊಳಿಸಿದರು. ಹಲ್ಮಿಡಿ ಶಾಸನದ ಪ್ರತಿಕೃತಿಯನ್ನು ವಿಧಾನ ಪರಿಷತ್ ಶಾಸಕ ದಿನೇಶ್ ಗೂಳಿಗೌಡ ಅವರ ಪ್ರಾದೇಶಿಕ ಅಭಿವೃದ್ಧಿಯ ಅನುದಾನದ ೨ ಲಕ್ಷ ರು. ಹಣದಲ್ಲಿ ಸಿದ್ಧಪಡಿಸಲಾಗಿರುತ್ತದೆ.

ಕಾರ್ಯಕ್ರಮದಲ್ಲಿ ಮಂಡ್ಯ ಶಾಸಕ ಪಿ.ರವಿಕುಮಾರ್, ವಿಧಾನ ಪರಿಷತ್ ಶಾಸಕ ದಿನೇಶ್ ಗೂಳಿಗೌಡ, ಮುಡಾ ಅಧ್ಯಕ್ಷ ನಹೀಂ, ಜಿಲ್ಲಾಧಿಕಾರಿ ಡಾ.ಕುಮಾರ, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಕನ್ನಡ ಸಾಹಿತ್ಯ ಸಮ್ಮೇಳನದ ಸಮನ್ವಯ ಸಮಿತಿ ಅಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಇತರರು ಉಪಸ್ಥಿತರಿದ್ದರು.ಕನ್ನಡ ಪುಸ್ತಕಗಳನ್ನು ಓದಲು ಸಚಿವರ ಸಲಹೆ

ಕನ್ನಡ ರಾಜ್ಯೋತ್ಸವದ ಅಂಗವಾಗಿ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಅವರು ಕನ್ನಡ ಪುಸ್ತಕ ಖರೀದಿಸಿ ಪುಸ್ತಕ ಓದುವ ಹವ್ಯಾಸವನ್ನು ಕನ್ನಡ ನಾಡಿನ ಜನರು ರೂಢಿಸಿಕೊಳ್ಳುವಂತೆ ಸಲಹೆ ನೀಡಿದರು.

ನಗರದ ಕೆ.ಆರ್.ರಸ್ತೆಯಲ್ಲಿರುವ ಅರುಣ್ ಬುಕ್ ಸ್ಟೋರ್‌ನಲ್ಲಿ ಕನ್ನಡ ಪುಸ್ತಕಗಳನ್ನು ಬಿಡುಗಡೆ ಮಾಡಿದ ಸಚಿವರು, ಕನ್ನಡ ಸಾಹಿತ್ಯ ಲೋಕದ ದಿಗ್ಗಜ ಕವಿಗಳು, ಸಾಹಿತಿಗಳು ಬರೆದಿರುವ ಅಮೂಲ್ಯ ಕೃತಿಗಳನ್ನು ಓದಿ ಕನ್ನಡ ಭಾಷೆಯ ಬೆಳವಣಿಗೆಗೆ ನೆರವಾಗುವಂತೆ ತಿಳಿಸಿದರು. ಶಾಸಕ ಪಿ.ರವಿಕುಮಾರ್, ತಾಪಂ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು, ಡಿಸಿಸಿ ಬ್ಯಾಂಕ್ ಸದಸ್ಯ ಕಂಬದಹಳ್ಳಿ ಪುಟ್ಟಸ್ವಾಮಿ ಇದ್ದರು.

Share this article