ಕೊಪ್ಪಳ: ಜಿಲ್ಲಾ ಕೇಂದ್ರದಲ್ಲಿ ಜನವರಿ ತಿಂಗಳಲ್ಲಿ ಶಿವಯೋಗಿ ಸಿದ್ದರಾಮೇಶ್ವರ ಹಾಗೂ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ಸಂಬಂಧಿಸಿದ ಅಧಿಕಾರಿಗಳು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಸೂಚನೆ ನೀಡಿದರು.
ಅಂಬಿಗರ ಚೌಡಯ್ಯ ಜಯಂತಿ
ಜಿಲ್ಲಾಮಟ್ಟದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿಯನ್ನು ಜ. 21ರಂದು ಹಮ್ಮಿಕೊಳ್ಳಲಾಗುವುದು. ಅಂದು ಬೆಳಗ್ಗೆ 8.30ಕ್ಕೆ ಅಂಬಿಗರ ಚೌಡಯ್ಯನವರ ಭಾವಚಿತ್ರದ ಮೇರವಣಿಗೆಯು ನಗರದ ಸಿರಸಪ್ಪಯ್ಯನ ಮಠದ ಆವರಣದಿಂದ ಆರಂಭಗೊಂಡು ಸಾಹಿತ್ಯ ಭವನದ ವರೆಗೆ ಜರುಗಲಿದೆ. ನಂತರ 10.30ಕ್ಕೆ ನಗರದ ಸಾಹಿತ್ಯ ಭನವದಲ್ಲಿ ನಡೆಯಲಿರುವ ವೇದಿಕೆ ಸಮಾರಂಭದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಭಾವಚಿತ್ರಕ್ಕೆ ಪೂಜೆ, ವಿಶೇಷ ಉಪನ್ಯಾಸ ಸೇರಿದಂತೆ ಇತರೆ ಕಾರ್ಯಕ್ರಮಗಳು ಜರುಗಲಿವೆ ಎಂದು ಹೇಳಿದರು.ಶಿವಯೋಗಿ ಸಿದ್ದರಾಮೇಶ್ವರ ಮತ್ತು ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಸಮಾರಂಭಗಳ ದಿನದಂದು, ಸಾಹಿತ್ಯ ಭವನ ಮತ್ತು ರಸ್ತೆ ಸ್ವಚ್ಛತೆ, ಮೆರವಣಿಗೆಯಲ್ಲಿ ಹಾಗೂ ವೇದಿಕೆ ಸಮಾರಂಭದಲ್ಲಿ ಪಾಲ್ಗೊಳ್ಳುವ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಕೈಗೊಳ್ಳಬೇಕು. ಈ ಎರಡೂ ಜಯಂತಿಯನ್ನು ಜಿಲ್ಲೆಯ ಎಲ್ಲ ಶಾಲಾ-ಕಾಲೇಜುಗಳು, ಗ್ರಾಮ ಪಂಚಾಯಿತಿ ಮತ್ತು ಇತರೆ ಕಚೇರಿಗಳಲ್ಲಿ ಆಚರಿಸುವಂತಾಗಬೇಕು. ಜಿಲ್ಲಾ ಮಟ್ಟದ ಜಯಂತಿಗಾಗಿ ಅಗತ್ಯ ಸಿದ್ಧತೆ ಕೈಗೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿಗಳು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಾರ್ಯಕ್ರಮಗಳ ಯಶಸ್ವಿಗೆ ಎಲ್ಲ ಸಮಾಜದ ಮುಖಂಡರು, ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು.ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಳ್ಳಿ, ಕೊಪ್ಪಳ ನಗರಸಭೆ ಪೌರಾಯುಕ್ತ ಗಣಪತಿ ಪಾಟೀಲ್, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎ. ಬಸವರಾಜ, ಭೋವಿ ಸಮುದಾಯದ ಮುಖಂಡರಾದ ಸಂಕಪ್ಪ ಮಾಲಗಿತ್ತಿ, ಮಾಸ್ತೆಪ್ಪ ಕಟ್ಟಿಮನಿ, ರಾಮಣ್ಣ ಪೂಜಾರ, ಹುಚ್ಚಪ್ಪ ಭೋವಿ, ಬಸವರಾಜ ಇರಕಲ್ಲಗಡಾ, ಲಕ್ಷ್ಮಣ ಪೂಜಾರ, ನಾಗರಾಜ ವೀರಾಪೂರ, ನಿಂಗಪ್ಪ ಭೋವಿ, ರಾಮು ಪೂಜಾರ, ಗಂಗಾಮತ ಸಮುದಾಯದ ಮುಖಂಡರಾದ ಯಮನಪ್ಪ ಕಬ್ಬೇರ, ಸೋಮಣ್ಣ ಬಾರಕೇರ, ಹುಲಗಪ್ಪ, ರಾಜು ಕಲೆಗಾರ, ಗಂಗಾಧರ ಕಬ್ಬೇರ, ಎನ್. ಯಂಕಪ್ಪ, ಉದಯಕುಮಾರ ಕಬ್ಬೇರ, ಹನುಮಂತಪ್ಪ ಬಾರಕೇರ, ಶಿವಪ್ಪ ಕಬ್ಬೇರ ಇತರರಿದ್ದರು.