-ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಕುರಿತು ಪೂರ್ವಭಾವಿ ಸಭೆ
ಕನ್ನಡಪ್ರಭ ವಾರ್ತೆ ಯಾದಗಿರಿ
ಸೆಪ್ಟೆಂಬರ್ 17 ರಂದು ನಡೆಯುವ ಕಲ್ಯಾಣ ಕರ್ನಾಟಕ (ಹೈದ್ರಾಬಾದ್ ಕರ್ನಾಟಕ) ಉತ್ಸವ ದಿನಾಚರಣೆಯನ್ನು ಜಿಲ್ಲಾಡಳಿತ ವತಿಯಿಂದ ಅರ್ಥಪೂರ್ಣವಾಗಿ ವಿಜೃಂಭಣೆಯಿಂದ ಆಚರಿಸಿ ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಸುಶೀಲಾ ಸೂಚಿಸಿದರು.ತಮ್ಮ ಕಚೇರಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ನಡೆಸಿದ ಅವರು, ಜಿಲ್ಲಾ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಅಚ್ಚುಕಟ್ಟಾಗಿ ಹಮ್ಮಿಕೊಳ್ಳಬೇಕು. ಮೈದಾನದ ಸ್ವಚ್ಛತೆ, ಕುಡಿವ ನೀರು, ಅಲ್ಪೋಪಹಾರ, ವೇದಿಕೆ ಸಿದ್ದತೆಗಳನ್ನು ಸಂಬಂಧಿಸಿದ ಅಧಿಕಾರಿಗಳು ಮಾಡಿಕೊಳ್ಳಬೇಕು ಎಂದರು.
ಅಂದು ಬೆಳಗ್ಗೆ 9 ಗಂಟೆಗೆ ಜಿಲ್ಲಾಡಳಿತ ವತಿಯಿಂದ ನಡೆಯುವ ಧ್ವಜಾರೋಹಣ ಕಾರ್ಯಕ್ರಮಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ಜಿಲ್ಲಾ ಮಟ್ಟದ ಅಧಿಕಾರಿಗಳು, ಸಿಬ್ಬಂದಿ ತಪ್ಪದೇ ಭಾಗವಹಿಸಬೇಕು. ಪೊಲೀಸ್ ಇಲಾಖೆ, ಅಬಕಾರಿ ಇಲಾಖೆ, ಅಗ್ನಿ ಶಾಮಕದಳ ಸೇರಿದಂತೆ ಕವಾಯತು ತಂಡಗಳನ್ನು ರಚಿಸಬೇಕು. ಶಿಷ್ಟಾಚಾರದಂತೆ ಅತಿಥಿಗಣ್ಯರನ್ನು ಆಹ್ವಾನಿಸಬೇಕು ಎಂದು ಸೂಚಿಸಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ಸಂಗೀತಾ, ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ, ಡಿವೈಎಸ್ಪಿ ಅರುಣಕುಮಾರ, ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವೀರನಗೌಡ, ಜೆಸ್ಕಾಂ ಕಾರ್ಯನಿರ್ವಹಣಾಧಿಕಾರಿ ರಾಘವೇಂದ್ರ, ಸಹಕಾರ ಇಲಾಖೆ ಉಪನಿರ್ದೇಶಕ ಪವನ, ಮುಖಂಡರಾದ ಶಂಕರ ಸೋನಾರ್, ಭೀಮು ಪೂಜಾರಿ, ಶ್ರೀದೇವಿ ಕಟ್ಟಿಮನಿ ಇದ್ದರು.
-----ಫೋಟೊ: 3ವೈಡಿಆರ್2:
ಯಾದಗಿರಿ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಕುರಿತು ಪೂರ್ವಭಾವಿ ಸಭೆ ಜರುಗಿತು.