ಕಾರ್ಗಿಲ್ ವಿಜಯಕ್ಕೆ 25ರ ಸಂಭ್ರಮ

KannadaprabhaNewsNetwork | Published : Jul 27, 2024 12:47 AM

ಸಾರಾಂಶ

ಚಾಮರಾಜನಗರ ತಾಲೂಕಿನ ಗ್ರಾಮದಲ್ಲಿ ಅಮಚವಾಡಿ ಯುವಕರ ಸಂಘ ಕಾರ್ಗಿಲ್ ವಿಜಯೋತ್ಸವವನ್ನು ರಾಷ್ಟ್ರಧ್ವಜ ಪ್ರದರ್ಶಿಸುವ ಮೂಲಕ ಆಚರಿಸಿದರು.

ಕನ್ನಡಪ್ರಭವಾರ್ತೆ ಚಾಮರಾಜನಗರ

ಕಾರ್ಗಿಲ್ ವಿಜಯಕ್ಕೆ 25ರ ಸಂಭ್ರಮ ಆಗಿದ್ದು ಕಾರ್ಗಿಲ್ ವಿಜಯ ಭಾರತೀಯ ಸೈನ್ಯದ ಸೈನಿಕರ ಶೌರ್ಯ, ಸಾಹಸ ಮತ್ತು ತ್ಯಾಗವನ್ನು ಎಂದು ಮರೆಯಲಾಗದು ಎಂದು ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತ, ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷ ಸುರೇಶ್ ಎನ್ ಋಗ್ವೇದಿ ತಿಳಿಸಿದರು.

ತಾಲೂಕಿನ ಗ್ರಾಮದಲ್ಲಿ ಅಮಚವಾಡಿ ಯುವಕರ ಸಂಘ ಹಮ್ಮಿಕೊಂಡಿದ್ದ ಕಾರ್ಗಿಲ್ ವಿಜಯೋತ್ಸವವನ್ನು ರಾಷ್ಟ್ರಧ್ವಜ ಪ್ರದರ್ಶಿಸುವ ಮೂಲಕ ಆಚರಿಸಿ ಅವರು ಮಾತನಾಡಿದರು. ಕಾರ್ಗಿಲ್ ಸಮರ ಭಾರತೀಯರ ದೇಶಭಕ್ತಿಯನ್ನು ಇಮ್ಮಡಿಗೊಳಿಸಿದ್ದು, ಪ್ರತಿಯೊಬ್ಬ ಭಾರತೀಯನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ.

ಕಾರ್ಗಿಲ್ ಪ್ರದೇಶದಲ್ಲಿ ಭಾರತೀಯ ಧ್ವಜದ ಪತಾಕೆಯನ್ನು ಹಾರಿಸುವ ಮೂಲಕ ಭಾರತೀಯ ಸೈನಿಕರ ತ್ಯಾಗ ಬಲಿದಾನವನ್ನು ನೆನೆಯುವ ಮೂಲಕ ಭಾರತೀಯ ಸೈನಿಕರ ಧೈರ್ಯವನ್ನು ಸದಾ ಕಾಲ ಸ್ಮರಿಸುವ ಹಾಗೂ ಯುವಕರಲ್ಲಿ ರಾಷ್ಟ್ರೀಯ ಪ್ರಜ್ಞೆ ಬೆಳೆಸುತ್ತದೆ ಎಂದರು. ಕಾರ್ಗಿಲ್ ಯುದ್ಧದಲ್ಲಿ ಸುಮಾರು 527 ಭಾರತೀಯ ವೀರ ಸೈನಿಕರು ತಮ್ಮ ಪ್ರಾಣವನ್ನು ರಾಷ್ಟಕ್ಕೆ ಅರ್ಪಿಸಿದ್ದಾರೆ. ರಾಷ್ಟ್ರವೇ ಮೊದಲು ರಾಷ್ಟ್ರವೇ ಅಂತಿಮ ಎಂಬ ಗುರಿ ವೀರ ಸೈನಿಕರಲ್ಲಿತ್ತು. ಯುವಕರಲ್ಲಿ ರಾಷ್ಟ್ರೀಯತೆ, ರಾಷ್ಟ್ರಭಕ್ತಿ, ರಾಷ್ಟ್ರ ಚಿಂತನೆ ಬೆಳೆಯಬೇಕು ಎಂದರು.

25 ವರ್ಷಗಳ ಹಿಂದೆ ನಡೆದ ಕಾರ್ಗಿಲ್ ವಿಜಯೋತ್ಸವವನ್ನು ಬಾಲಕರಿಂದ ಹಿಡಿದು ವೃದ್ಧರವರೆಗೆ ವಿಜಯಪತಾಕೆ ಹಾರಿಸಿ ಆಚರಿಸಿದ್ದರು. ಗಡಿಯನ್ನು ಕಾಯುವ ಯೋಧರನ್ನು ಗೌರವಿಸುವ ಮತ್ತು ಅವರಿಗೆ ದಿವ್ಯಶಕ್ತಿ ನೀಡುವ ಕಾರ್ಯವನ್ನು ಯುವಶಕ್ತಿ ಮಾಡುತ್ತಿರುವುದು ಮತ್ತಷ್ಟು ಹೆಮ್ಮೆ ಎಂದು ತಿಳಿಸಿದರು. ರಾಷ್ಟಕ್ಕೆ ತಮ್ಮ ತ್ಯಾಗ ಬಲಿದಾನ ಮಾಡಿದ ಸೈನಿಕರ ಪುಣ್ಯ ಸ್ಮರಣೆ ಮೂಲಕ ಗೌರವಿಸೋಣ. ಪ್ರತಿ ಹಳ್ಳಿಯಲ್ಲೂ ಯುವಕರ ಸಂಘ ಕಟ್ಟುವ ಮೂಲಕ ಸಮಾಜಕ್ಕೆ ಯುವಶಕ್ತಿಯ ಸದ್ಬಳಕೆ ಮಾಡಿಕೊಳ್ಳುವ ದಿಕ್ಕಿನಲ್ಲಿ ಪ್ರತಿಯೊಬ್ಬರು ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಅಮಚವಾಡಿ ಯುವಕ ಸಂಘದ ರಘು, ಕಸಾಪ ಪವನ್, ಶಂಕರ್, ರಾಜು, ರಮೇಶ್, ಮಾದೇವಸ್ವಾಮಿ ಜೆ, ಸುರೇಶ್, ಮಹದೇವಸ್ವಾಮಿ ಭಾಗವಹಿಸಿದ್ದರು.

Share this article