ಜನರ ಸಂತಸ ಇಮ್ಮಡಿಗೊಳಿಸಿದ ದೀಪಾವಳಿ

KannadaprabhaNewsNetwork |  
Published : Oct 24, 2025, 01:00 AM IST
23ಡಿಡಬ್ಲೂಡಿ2ಧಾರವಾಡ ತಾಲೂಕಿನ ದೇವರ ಹುಬ್ಬಳ್ಳಿಯಲ್ಲಿ ದೀಪಾವಳಿ ನಿಮಿತ್ತ ಎತ್ತುಗಳಿಗೆ ರೈತರಿಂದ ಶೃಂಗಾರ. | Kannada Prabha

ಸಾರಾಂಶ

ಧಾರವಾಡದ ಮಲೆನಾಡು ಪ್ರದೇಶದ ಗ್ರಾಮಗಳಲ್ಲಿ ದೀಪಾವಳಿ ಹಬ್ಬವನ್ನು ವಿಶೇಷವಾಗಿ ಎತ್ತು-ದನಕರುಗಳಿಗೆ ಪೂಜೆ ಸಲ್ಲಿಸುವ ಮೂಲಕ ಆಚರಿಸಲಾಗುತ್ತದೆ. ಪಾಡ್ಯೆ ದಿನ ಬುಧವಾರ ಎತ್ತುಗಳನ್ನು ತೊಳೆದು, ಅವುಗಳ ಕೊಂಬುಗಳಿಗೆ ಬಣ್ಣ ಹಚ್ಚಿ, ಹೂವು, ಬಲೂನ್‌, ರಿಬ್ಬನ್‌ ಕಟ್ಟಿ ಊರಿನಲ್ಲಿ ಮೆರವಣಿಗೆ ಮಾಡಲಾಯಿತು.

ಧಾರವಾಡ:

ಹಿಂದೂಗಳಿಗೆ ದೀಪಾವಳಿ ಭಾಗ್ಯದ ಬೆಳಕು ನೀಡುವ ಹಬ್ಬ. ಇಂತಹ ಬೆಳಕಿನ ಹಬ್ಬವನ್ನು ಧಾರವಾಡದ ಜನರು ಮೂರು ದಿನಗಳ ಕಾಲ ಸಂಭ್ರಮ ಹಾಗೂ ಅರ್ಥಪೂರ್ಣವಾಗಿ ಆಚರಿಸಿದರು.

ಇನ್ನೇನು ದಸರಾ ಮುಗಿಯಿತು ಎನ್ನುವಷ್ಟರಲ್ಲಿ ಬಂದ ದೀಪಾವಳಿಯನ್ನು ಅಷ್ಟೇ ಸಂಭ್ರಮದಿಂದ ಬರಮಾಡಿಕೊಂಡ ಧಾರವಾಡಿಗರು, ಕಳೆದ ಸೋಮವಾರ ನರಕ ಚತುದರ್ಶಿ, ಮಂಗಳವಾರ ಅಮವಾಸ್ಯೆ ಹಾಗೂ ಬುಧವಾರ ಪಾಡ್ಯೆ ಹಬ್ಬದಲ್ಲಿ ವರ್ಷದ ಸಂಭ್ರಮ ಕಂಡರು.

ಮಲೆನಾಡಿನಲ್ಲಿ ವಿಶೇಷ...

ಲಕ್ಷ್ಮೀ ಪೂಜೆ, ಅಂಗಡಿ-ಮುಂಗಟ್ಟುಗಳ ಪೂಜೆ, ವಾಹನ ಪೂಜೆ ದೀಪಾವಳಿ ಸಮಯದಲ್ಲಿ ಸಾಮಾನ್ಯವಾಗಿ ಮಾಡಲಾಗುತ್ತದೆ. ಅಂತೆಯೇ, ಧಾರವಾಡದ ಮಲೆನಾಡು ಪ್ರದೇಶದ ಗ್ರಾಮಗಳಲ್ಲಿ ಈ ಹಬ್ಬವನ್ನು ವಿಶೇಷವಾಗಿ ಎತ್ತು-ದನಕರುಗಳಿಗೆ ಪೂಜೆ ಸಲ್ಲಿಸುವ ಮೂಲಕ ಆಚರಿಸಲಾಗುತ್ತದೆ. ನಿಗದಿ, ದೇವರ ಹುಬ್ಬಳ್ಳಿ, ಮುಗದ, ಕಲಕೇರಿ, ಮನಸೂರು, ಮನಗುಂಡಿ, ಬೆಳ್ಳಿಗಟ್ಟಿ ಅಂತಹ ಊರುಗಳಲ್ಲಿ ಪಾಡ್ಯೆ ದಿನ ಬುಧವಾರ ಎತ್ತುಗಳನ್ನು ತೊಳೆದು, ಅವುಗಳ ಕೊಂಬುಗಳಿಗೆ ಬಣ್ಣ ಹಚ್ಚಿ, ಹೂವು, ಬಲೂನ್‌, ರಿಬ್ಬನ್‌ ಕಟ್ಟಿ ಊರಿನಲ್ಲಿ ಮೆರವಣಿಗೆ ಮಾಡಲಾಯಿತು. ಜೊತೆಗೆ ದನಕರುಗಳ ಕಾದಾಟವೂ ನೋಡುವಂತಿತ್ತು. ಈ ಆಚರಣೆಗೆ ಊರಿನ ಎಲ್ಲರೂ ಪಾಲ್ಗೊಂಡು ಸಂಭ್ರಮಿಸಿದರು.

ಅದೇ ರೀತಿ ಧಾರವಾಡದ ಗೌಳಿ ಗಲ್ಲಿಯಲ್ಲಿ ಎಮ್ಮೆಗಳ ಓಟ ನಡೆಸಲಾಯಿತು. ಈ ಕಾರ್ಯಕ್ರಮಕ್ಕೆ ಹು-ಧಾ ಪೊಲೀಸ ಆಯುಕ್ತ ಎನ್‌. ಶಶಿಕುಮಾರ ಚಾಲನೆ ನೀಡಿದರು. ಈ ಸಮಯದಲ್ಲಿ ಎಮ್ಮೆಗಳ ಕೋಡುಗಳಿಗೆ ಬಣ್ಣ, ರಿಬನ್‌ ಹಚ್ಚಿ ಧಾರವಾಡದ ಹಲವು ಓಣಿಗಳಲ್ಲಿ ಅವುಗಳನ್ನು ಓಡಿಸಲಾಯಿತು.

ವ್ಯಾಪಾರಸ್ಥರು ಖುಷ್:

ದೀಪಾವಳಿ ವ್ಯಾಪಾರಸ್ಥರಿಗೆ ತೀವ್ರ ಸಂತಸ ಪಡುವ ಹಬ್ಬ. ಧಾರವಾಡದ ಕೃಷಿ ಉತ್ಪನ್ನ ಮಾರುಕಟ್ಟೆಯ ದಲಾಲ್‌ ಅಂಗಡಿಗಳು ಸೇರಿದಂತೆ ನಗರದ ಎಲ್ಲ ರೀತಿಯ ಮಾರುಕಟ್ಟೆಗಳ ವ್ಯಾಪಾರಸ್ಥರು ತಮ್ಮ ಹಳೆ ಖಾತೆಗಳಿಗೆ ಮುಕ್ತಿ ನೀಡಿ ದೀಪಾವಳಿ ಪಾಡ್ಯೆ ಪೂಜೆ ಮಾಡಿ ಹೊಸ ಖಾತೆಗೆ ಚಾಲನೆ ನೀಡಿದರು. ಧನ ದೇವತೆ `ಲಕ್ಷ್ಮೀ''''ಯನ್ನು ಅವಾಹನೆ ಮಾಡಿ ಪೂಜಿಸಲಾಯಿತು. ಸಂಬಂಧಿಕರು, ಸ್ನೇಹಿತರನ್ನು ತಮ್ಮ ತಮ್ಮ ಅಂಗಡಿಗಳಿಗೆ ಕರೆಯಿಸಿ ಸಿಹಿ ನೀಡಿ ಸಂತಸಪಟ್ಟರು.

ಹಬ್ಬದ ಅಂಗವಾಗಿ ಕಳೆದೊಂದು ವಾರದಿಂದ ಮಾರುಕಟ್ಟೆ ಗಿಜಿಗುಡುತ್ತಿದೆ. ಹಬ್ಬ ಮುಗಿದ ಗುರುವಾರವೂ ಮಾರುಕಟ್ಟೆ ಜನರಿಂದ ತುಂಬಿತ್ತು. ಬಟ್ಟೆ ಅಂಗಡಿ, ಹೂ-ಹಣ್ಣು, ಸಿಹಿ ತಿಂಡಿಗಳ ಅಂಗಡಿ, ಪಟಾಕಿ ವ್ಯಾಪಾರಸ್ಥರು ಅತ್ಯಧಿಕ ಲಾಭ ಪಡೆದರು. ನಗರದ ಸುಭಾಷ ರಸ್ತೆ, ಸೂಪರ್ ಮಾರುಕಟ್ಟೆ, ಟಿಕಾರೆ ರಸ್ತೆ, ಅಕ್ಕಿ ಪೇಟೆ ಸೇರಿ ಎಲ್ಲ ಮಾರುಕಟ್ಟೆಗಳನ್ನು ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ದೀಪಾವಳಿ ಎಂದಾಕ್ಷಣ ಬೆಳಕಿನ ಹಣತೆ ಮಾತ್ರವಲ್ಲದೇ ಮಕ್ಕಳಾದಿಯಾಗಿ ಎಲ್ಲರೂ ಮೂರು ದಿನ ನಿರಂತರವಾಗಿ ಪಟಾಕಿ ಹೊಡೆದು ಸಂತಸ ಪಟ್ಟರು. ತವರಿಗೆ ಬಂದ ಜನರವರ್ಷದಲ್ಲಿ ಹಲವು ಹಬ್ಬಗಳಿದ್ದರೂ ದೀಪಾವಳಿ ಮಾತ್ರ ಹಿಂದೂಗಳಿಗೆ ವಿಶೇಷ. ಹೀಗಾಗಿ ದೇಶ-ಹೊರದೇಶದಲ್ಲಿದ್ದರೂ ಈ ಹಬ್ಬಕ್ಕೆ ತವರೂರಿಗೆ ಬರುವುದು ವಾಡಿಕೆ. ಅಂತೆಯೇ, ಉದ್ಯೋಗ, ಶಿಕ್ಷಣ ಸೇರಿದಂತೆ ಹಲವು ಕಾರ್ಯಗಳಿಗಾಗಿ ಬೆಂಗಳೂರು, ಪೂನೆ, ದೆಹಲಿ, ಆಂಧ್ರ ಸೇರಿದಂತೆ ಬೇರೆ ಬೇರೆ ಊರುಗಳಲ್ಲಿದ್ದವರು ಧಾರವಾಡಕ್ಕೆ ಆಗಮಿಸಿ ಕುಟುಂಬದ ಜೊತೆಗೆ ಹಬ್ಬವನ್ನು ಸಂಭ್ರಮಿಸಿದರು. ಸಾಫ್ಟ್‌ವೇರ್‌ ಸೇರಿದಂತೆ ವಿವಿಧ ನೌಕರಿಯಲ್ಲಿರುವರು ಹಬ್ಬಕ್ಕೆ ಮೂರು ದಿನ ರಜೆ ಇದ್ದರೂ ಹಿಂದಿನ ಶನಿವಾರ ಹಾಗೂ ಭಾನುವಾರ ಸಹ ಸೇರ್ಪಡೆಯಾಗಿ ಐದು ದಿನಗಳ ಕಾಲ ಹಬ್ಬದ ರಜೆ ಅನುಭವಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!