ಯಳಂದೂರು: ಸಮೀಪದ ಸಂತೆಮರಹಳ್ಳಿ ಹಾಗೂ ತಾಲೂಕಿನ ಸುತ್ತಮುತ್ತಲ ಗ್ರಾಮಗಳಲ್ಲಿ ಬುಧವಾರ ಕ್ರೈಸ್ತರ ಪವಿತ್ರ ಹಬ್ಬವಾಗಿರುವ ಕ್ರಿಸ್‌ಮಸ್ ಹಬ್ಬವನ್ನು ಬುಧವಾರ ಕ್ರಿಶ್ಚಿಯನ್ನರು ಸಂಭ್ರಮ ಸಡಗರಗಳಿಂದ ಆಚರಿಸಿದರು.
ಕ್ರಿಸ್‌ಮಸ್ ಹಬ್ಬದ ನಿಮಿತ್ತ ಪಟ್ಟಣ ಸೇರಿದಂತೆ ಅನೇಕ ಕಡೆ ಕೇಕ್‌ಗಳ ಮಾರಾಟವೂ ಜೋರಾಗಿತ್ತು. ಕ್ರಿಶ್ಚಿಯನ್ನರು ತಮ್ಮ ಮನೆಗಳ ಮುಂದೆ ಕ್ರಿಸ್‌ಮಸ್ ಟ್ರೀ, ನಿರ್ಮಿಸಿ ಅದಕ್ಕೆ ಸ್ಟಾರ್, ಗಂಟೆಗಳನ್ನು ಕಟ್ಟಿ ವಿಶೇಷ ಅಲಂಕಾರ ಮಾಡಿದ್ದರು. ಕೆಲವರು ಸಾಂತಾಕ್ಲಾಸ್‌ನ ವೇಷಭೂಷಣಗಳೊಂದಿಗೆ ಮಕ್ಕಳಿಗೆ ಉಡುಗೊರೆಗಳು, ಚಾಕ್ಲೆಟ್ ಹಾಗೂ ಇತರೆ ಸಿಹಿ ತಿನಿಸುಗಳನ್ನು ನೀಡಿ ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದರು. ಇದಕ್ಕಾಗಿ ಚರ್ಚ್‌ಗಳನ್ನು ವಿಶೇಷ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.
ಸಮೀಪದ ದೇಶವಳ್ಳಿ ಗ್ರಾಮದ ಸಿಎಸ್‌ಐ ಸುಶಾಂತಿ ಚರ್ಚ್‌ನಲ್ಲಿ ಫಾದರ್ ರೆವೆರಂಡ್‌ಪುಟ್ಟರಾಜು ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಲಾಯಿತು. ಅಲ್ಲದೆ ಮಕ್ಕಳಿಗೆ ಹಬ್ಬದ ಸಂಭ್ರಮವನ್ನು ಹೆಚ್ಚಿಸುವ ನಿಟ್ಟಿನಲ್ಲಿ ವಿವಿಧ ಆಟೋಟಗಳ ಸ್ಪರ್ಧೆಯನ್ನು ಆಯೋಜಿಸಿ ಗೆದ್ದವರಿಗೆ ಬಹುಮಾನಗಳನ್ನು ವಿತರಣೆ ಮಾಡಲಾಯಿತು. ಗ್ರಾಪಂ ಸದಸ್ಯ ಎಚ್.ಎನ್. ಶಿವಕುಮಾರ್, ಡಿ.ಸಿ. ಸುರೇಂದ್ರ, ಶಿವಮಲ್ಲು, ಡಿ.ಸಿ. ಆನಂದ, ಜೇಮ್ಸ್, ಸುರೇಶ್, ಡಾ. ಸುಪ್ರಿಯಾ, ರಾಣಿ ಸತ್ಯಪ್ರಕಾಶ್ ಸೇರಿದಂತೆ ಅನೇಕರು ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ಭಕ್ತಿ ಮೆರೆದರು.