ಕನ್ನಡಪ್ರಭ ವಾರ್ತೆ ಪೊನ್ನಂಪೇಟೆ
ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆಎಂಎ) ವತಿಯಿಂದ ಪುತ್ತರಿ ಹಬ್ಬದ ಪ್ರಯುಕ್ತ ಸಾಂಪ್ರದಾಯಿಕ ಕದಿರು ತೆಗೆಯುವ ಕಾರ್ಯಕ್ರಮವನ್ನು ಶನಿವಾರ ರಾತ್ರಿ ನೂರಾರು ಕೊಡವ ಮುಸ್ಲಿಂ ಸಮುದಾಯದವರು ದ. ಕೊಡಗಿನ ಕಂಡಂಗಾಲದಲ್ಲಿ ಅಲ್ಲಿನ ಮಂದಮಾಡ ಕುಟುಂಬಸ್ಥರ ಆತಿಥ್ಯದಲ್ಲಿ ಅದ್ದೂರಿಯಾಗಿ ಆಚರಿಸಿದರು.ರಾತ್ರಿ 8:40 ಗಂಟೆಗೆ ಸರಿಯಾಗಿ ಕಂಡಂಗಾಲ ಗ್ರಾಮದ ಮಂದಮಾಡ ಎ. ಮುನೀರ್ ಅವರ ಜಮ್ಮ ಗದ್ದೆಯಲ್ಲಿ ಈ ಸಾಂಪ್ರದಾಯಿಕ ಕದಿರು ತೆಗೆಯುವ ಕಾರ್ಯಕ್ರಮವನ್ನು ಕೆಎಂಎ ವತಿಯಿಂದ ಹಮ್ಮಿಕೊಳ್ಳಲಾಗಿತ್ತು. ಕೆ.ಎಂ.ಎ. ಅಧ್ಯಕ್ಷರಾದ ದುದ್ದಿಯಂಡ ಎಚ್. ಸೂಫಿ ಹಾಜಿ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮಂದಮಾಡ ಕುಟುಂಬದ ತಲೆಮೂಪರಾಗಿರುವ ಹಸನ್ ಅವರು ಬತ್ತದ ತೆನೆಯನ್ನು ಕುಯ್ದು ನೆರೆದಿದ್ದವರಿಗೆಲ್ಲ ಹಂಚಿದರು.
ಕಾರ್ಯಕ್ರಮದಲ್ಲಿ ಕೆ.ಎಂ.ಎ. ಹಿರಿಯ ಉಪಾಧ್ಯಕ್ಷರಾದ ಡಾ. ಜೋಯಿಪೆರ ಎ. ಕುಂಜ್ಹಬ್ದುಲ್ಲಾ, ಕೋಶಾಧಿಕಾರಿ ಹರಿಶ್ಚಂದ್ರ ಎ. ಹಂಸ, ಪ್ರಧಾನ ಕಾರ್ಯದರ್ಶಿ ಈತಲತಂಡ ರಫೀಕ್ ತೂಚಮಕೇರಿ, ಸಂಘಟನಾ ಕಾರ್ಯದರ್ಶಿ ಮೀತಲತಂಡ ಎಂ. ಇಸ್ಮಾಯಿಲ್, ಸೇರಿದಂತೆ ಸಂಸ್ಥೆಯ ಆಡಳಿತ ಮಂಡಳಿ ಪದಾಧಿಕಾರಿಗಳು, ಕೊಟ್ಟಮುಡಿ, ಕುಂಜಿಲ, ಎಡಪಾಲ, ಕಿಕ್ಕರೆ (ಕೊಕೇರಿ) ಕೊಂಡಂಗೇರಿ, ಗುಂಡಿಕೆರೆ, ಚಿಟ್ಟಡೆ, ಕೊಮ್ಮೆತೋಡು, ನಲ್ವತ್ತೋಕ್ಲು, ಅಂಬಟ್ಟಿ, ಚಿಮ್ಮಿಚ್ಚಿಕುಂಡ್ (ಹಳ್ಳಿಗಟ್ಟು), ಬೇಗೂರು, ಕಾಟ್ರಕೊಲ್ಲಿ ಮೊದಲಾದ ಪ್ರದೇಶಗಳ ಸದಸ್ಯರು, ಕಂಡಂಗಾಲದ ಹಲವಾರು ಗ್ರಾಮಸ್ಥರು ಮತ್ತು ಮಕ್ಕಳು ಪಾಲ್ಗೊಂಡಿದ್ದರು.ಇದಕ್ಕೂ ಮೊದಲು ನಡೆದ ಸಭಾ ಕಾರ್ಯಕ್ರಮದಲ್ಲಿ ಕೆ.ಎಂ.ಎ. ಅಧ್ಯಕ್ಷರಾದ ದುದ್ದಿಯಂಡ ಹೆಚ್. ಸೂಫಿ ಹಾಜಿ
ಮತ್ತು ಹಿರಿಯ ಉಪಾಧ್ಯಕ್ಷರಾದ ಡಾ. ಜೋಯಿಪೆರ ಎ. ಕುಂಜ್ಹಬ್ದುಲ್ಲಾ ಅವರು ಮಾತನಾಡಿ, ಕೊಡವ ಮುಸ್ಲಿಮರ ಸಾಂಪ್ರದಾಯಿಕ ಆಚರಣೆಯನ್ನು ಮತ್ತು ಪದ್ಧತಿ ಪರಂಪರೆಯನ್ನು ಸಂರಕ್ಷಿಸಬೇಕಾದ ಅನಿವಾರ್ಯತೆ ಬಗ್ಗೆ ಒತ್ತಿ ಹೇಳಿದರು. ಕೆ.ಎಂ.ಎ. ನಿರ್ದೇಶಕರಾದ ಮಂದಮಾಡ ಎ. ಮುನೀರ್ ಕಾರ್ಯಕ್ರಮ ನಿರ್ವಹಿಸಿದರು.ಕದಿರು ತೆಗೆದ ಬಳಿಕ ಮಂದಮಾಡ ಐನ್ ಮನೆ ಆವರಣದಲ್ಲಿ ಸಾಂಪ್ರದಾಯಿಕ ತಂಬಿಟ್ಟು- ಪುತ್ತರಿ ಗೆಣಸು ಉಪಹಾರ ಮತ್ತು ಊಟೋಪಚಾರವನ್ನು ವ್ಯವಸ್ಥೆಗೊಳಿಸಲಾಗಿತ್ತು. ಊಟದ ನಂತರ ಗದ್ದೆಯಿಂದ ತರಲಾದ ಕದಿರನ್ನು ತಮ್ಮ ತಮ್ಮ ಮನೆಗಳಿಗೆ ಕೊಂಡೊಯ್ಯಲಾಯಿತು.