ಹಾವೇರಿ: ಹಾವೇರಿ ಲೋಕಸಭಾ ಕ್ಷೇತ್ರದ ಮತಎಣಿಕೆ ನಡೆದು ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಗೆಲುವು ಸಾಧಿಸುತ್ತಿದ್ದಂತೆ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿತ್ತು. ನಗರದಲ್ಲಿ ಡಿಜೆ ಹಾಕಿ ನಡೆಸಿದ ಭರ್ಜರಿ ಮೆರವಣಿಯಲ್ಲಿ ಕೇಸರಿ ಬಾವುಟ ರಾರಾಜಿಸಿತು. ಪರಸ್ಪರ ಗುಲಾಲು ಎರಚಿ ಸಂಭ್ರಮಿಸಿದ ಕಾರ್ಯಕರ್ತರು ಕುಣಿದು ಕುಪ್ಪಳಿಸಿದರು.
ಗೆಲುವು ಸ್ಪಷ್ಟವಾಗುತ್ತಿದ್ದಂತೆ ದೇವಗಿರಿ ಎಂಜಿನಿಯರಿಂಗ್ ಕಾಲೇಜಿನ ಮತ ಎಣಿಕೆ ಕೇಂದ್ರಕ್ಕೆಆಗಮಿಸಿದ ಬಸವರಾಜ ಬೊಮ್ಮಾಯಿ ಅವರಿಗೆ ಪಕ್ಷದ ಮುಖಂಡರು ಸಾಥ್ ನೀಡಿದರು. ಫಲಿತಾಂಶ ಘೋಷಣೆಯಾಗುತ್ತಿದ್ದಂತೆ ಅಲ್ಲಿಂದ ಕಾರ್ಯಕರ್ತರೊಂದಿಗೆ ವಿಜಯೋತ್ಸವಕ್ಕೆ ತೆರಳಿದರು. ನಗರದ ವಾಲ್ಮೀಕಿ ವೃತ್ತದ ಬಳಿಯಿಂದ ಶುರುವಾದ ಮೆರವಣಿಗೆ ಹಳೆ ಪಿ.ಬಿ.ರಸ್ತೆಯಲ್ಲಿ ಸಾಗಿತು. ನೂರಾರು ಕಾರ್ಯಕರ್ತರು, ಅಭಿಮಾನಿಗಳು ಹೆಜ್ಜೆ ಹಾಕುತ್ತ, ಬಿಜೆಪಿ, ಮೋದಿ ಪರ ಘೋಷಣೆ ಹಾಕಿದರು. ಮಹಿಳಾ ಕಾರ್ಯಕರ್ತೆಯರು ಕೂಡ ಕೇಸರಿ ಬಣ್ಣ ಎರಚಿ ಸಂಭ್ರಮಿಸಿದರು.ಮಾದರಿ ಕ್ಷೇತ್ರ ಮಾಡುವೆ: ಈ ಸಂದರ್ಭದಲ್ಲಿ ಮಾತನಾಡಿದ ಬಸವರಾಜ ಬೊಮ್ಮಾಯಿ, ಹಾವೇರಿ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಅಭಿವೃದ್ಧಿ ಮಾಡಲಾಗುವುದು. ಜನರ ನಂಬಿಕೆಗೆ ತಕ್ಕ ಹಾಗೆ ಕೆಲಸ ಮಾಡುತ್ತೇನೆ. ನನ್ನ ಗೆಲುವಿಗೆ ಕಾರಣರಾದ ಹಾವೇರಿ ಗದಗ ಜಿಲ್ಲೆಗಳ ಜನರಿಗೆ ಕೋಟಿ ಕೋಟಿ ನಮನ ಸಲ್ಲಿಸುತ್ತೇನೆ. ಮಹಾಜನತೆಯ ಆಶೀರ್ವಾದದಿಂದ ಈ ಗೆಲುವು ಸಾಧಿಸಿದ್ದೇನೆ ಎಂದು ಹೇಳಿದರು.
ಈಗಾಗಲೇ ಸಂದೇಶ ಬಂದಿದೆ. ಮತ್ತೊಮ್ಮೆ ಮೋದಿಯವರನ್ನು ಪ್ರಧಾನಿ ಮಾಡಲಾಗುವುದು. ದೆಹಲಿಯಿಂದ ಬಂದ ಮೇಲೆ ದೊಡ್ಡ ಪ್ರಮಾಣದಲ್ಲಿ ಮೆರವಣಿಗೆ ಮಾಡೋಣ. ನೀವು ಇಟ್ಟಿರುವ ನಂಬಿಕೆಗೆ ತಕ್ಕಹಾಗೆ ಕೆಲಸ ಮಾಡುತ್ತೇನೆ. ಮಹಿಳೆಯರ ರಕ್ಷಣೆ ಮಾಡುವ ಕೆಲಸ ಮಾಡುತ್ತೇನೆ ಎಂದು ಹೇಳಿದರು.ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಇರಬಹುದು. ನಮ್ಮ ಬಳಿ ಜನ ಶಕ್ತಿ ಇದೆ. ಜನಶಕ್ತಿ ರಾಜಶಕ್ತಿ ನಡುವೆ ಸಂಘರ್ಷ ಬಂದಾಗ ಜನಶಕ್ತಿ ಗೆಲ್ಲುತ್ತದೆ. ಅಧಿಕಾರಿಗಳು ಕಾನೂನು ಪ್ರಕಾರ ಕೆಲಸ ಮಾಡದಿದ್ದರೆ ಸುಮ್ಮನೆ ಬಿಡುವುದಿಲ್ಲ ನಮ್ಮ ಕಾರ್ಯಕರ್ತರಿಗೆ ವಿನಾಕಾರಣ ತೊದರೆ ಕೊಟ್ಟರೆ ಸುಮ್ಮನಿರುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ನನ್ನ ಮೇಲೆ ನಂಬಿಕೆ ಇಟ್ಡು ಟಿಕೆಟ್ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವರಾದ ಅಮಿತ್ ಶಾ, ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ ನಡ್ಡಾ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ತುಂಬು ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಹೇಳಿದರು.