ಅಂತಾರಾಷ್ಟ್ರೀಯ ಮೆಣಸಿನಕಾಯಿ ಮಾರುಕಟ್ಟೆಯಲ್ಲೂ ಮೊಳಗಿದ ಜೈಶ್ರೀರಾಮ್
ಕನ್ನಡಪ್ರಭ ವಾರ್ತೆ ಬ್ಯಾಡಗಿಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಹಾಗೂ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆ ಸೋಮವಾರ ತಾಲೂಕಿನಾದ್ಯಂತ ಸಡಗರ, ಸಂಭ್ರಮ ಮತ್ತು ಶ್ರದ್ಧಾಭಕ್ತಿಯಿಂದ ರಾಮೋತ್ಸವ ಕಾರ್ಯಕ್ರಮ ಜರುಗಿತು. ಎಲ್ಲೆಡೆ ಜೈಶ್ರೀರಾಮ್ ಜಯ ಘೋಷಗಳು ಮೊಳಗಿದವು.
ಪಟ್ಟಣ ಸೇರಿದಂತೆ ಪ್ರತಿಯೊಂದು ಗ್ರಾಮದಲ್ಲಿಯೂ ಹಿಂದೂ ಸಮುದಾಯಕ್ಕೆ ಸೇರಿದ ಯುವಕರು ದ್ವಿಚಕ್ರ, ಕಾರು, ಇತರ ವಾಹನಗಳಿಗೆ ಜೈಶ್ರೀರಾಂ ಎಂಬ ಕೇಸರಿ ಧ್ವಜಗಳನ್ನು ಕಟ್ಟಿಕೊಂಡು ತಿರುಗಾಡುತ್ತಿದ್ದ ದೃಶ್ಯ ಸಾಮಾನ್ಯ ವಾಗಿದ್ದವು.ಸಿಂಗಾರಗೊಂಡ ಬ್ಯಾಡಗಿ ಪಟ್ಟಣ:
ರಾಮಮಂದಿರ ಉದ್ಘಾಟನೆ ಹಿನ್ನೆಲೆ ಭಾನುವಾರದಿಂದಲೇ ಸಕಲ ಸಿದ್ಧತೆಗಳು ನಡೆದಿದ್ದವು. ಪಟ್ಟಣದೆಲ್ಲೆಡೆ ಬ್ಯಾನರ್, ಬಂಟಿಂಗ್ಸ್ ತಳಿರು-ತೋರಣ ಮತ್ತು ರಂಗೋಲಿಗಳಿಂದ ಸಿಂಗರಿಸಿ ಮನೆಯ ಮೇಲ್ಭಾಗದಲ್ಲಿ ಕೇಸರಿ ಧ್ವಜ ಹಾರಿಸಲಾಗಿತ್ತು.ಪಟ್ಟಣದ ಚಾವಡಿ ರಸ್ತೆಯಲ್ಲಿರುವ ಸೀತಾರಾಮ ದೇವಸ್ಥಾನ ಸೇರಿದಂತೆ ಗ್ರಾಮೀಣ ಪ್ರದೇಶದ ಬಹುತೇಕ ದೇವಾಲಯಗಳಲ್ಲಿ ವಿಶೇಷ ಪೂಜೆ ಜರುಗಿದವು. ಬೆಳಗ್ಗೆಯಿಂದಲೇ ಹವನ, ಹೋಮ, ಅಭಿಷೇಕ ಸೇರಿದಂತೆ ಇತರ ಪೂಜಾ ಕೈಂಕರ್ಯಗಳು ನಡೆದವು.
ರಾಮ ಮೂರ್ತಿ ಮೆರವಣಿಗೆ:ತಾಲೂಕಿನ ಗ್ರಾಮೀಣ ಭಾಗದಲ್ಲಿಯೂ ಸಹ ಜನರು ಸ್ವಯಂ ಪ್ರೇರಿತರಾಗಿ ರಾಮೋತ್ಸವವನ್ನ ದೇವಸ್ಥಾನಗಳಲ್ಲಿ ಬಹು ವಿಜೃಂಭಣೆಯಿಂದ ಆಚರಿಸಿದರು. ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಶ್ರೀರಾಮನಮೂರ್ತಿ ವಿಜೃಂಭಣೆಯಿಂದ ಮೆರವಣಿಗೆ ಮಾಡಿದರು.
ತಾಲೂಕಿನ ಕದರಮಂಡಲಗಿ ಗ್ರಾಮದ ಕಾಂತೇಶಸ್ವಾಮಿ (ಆಂಜನೇಯ) ದೇವಸ್ಥಾನ ಸೇರಿದಂತೆ ಪಟ್ಟಣದ ಎಪಿಎಂಸಿ ಯಾರ್ಡ್‌ನಲ್ಲಿರುವ ಸಿದ್ದೇಶ್ವರ ದೇವಸ್ಥಾನ ಪಟ್ಟಣದ ಚಾವಡಿ ರಸ್ತೆಯಲ್ಲಿನ ಮಾರುತಿ ಮಂದಿರ, ಸಣ್ಣ ಆಂಜನೇಯ ದೇವಸ್ಥಾನ, ಮೋಟೆಬೆನ್ನೂರಿನ ಕೋಟೆ ಆಂಜನೇಯ ಇತರ ಕಡೆಗಳಲ್ಲಿ ಅನ್ನ ಸಂತರ್ಪಣೆ ನಡೆಯಿತು.ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮೊಳಗಿದ ಜೈಶ್ರೀರಾಮ್:
ವ್ಯಾಪಾರದ ಅವಸರದ ನಡುವೆಯೂ ಸ್ಥಳೀಯ ವರ್ತಕರ ಸಂಘದ ಸದಸ್ಯರು ಕೇಸರಿ ಶಾಲುಗಳನ್ನು ಧರಿಸಿ ಟೆಂಡರ್ ಹಾಕುತ್ತಿದ್ದ ದೃಶ್ಯಗಳು ಕಂಡು ಬಂದವು. ರಾಮಮಂದಿರ ಉದ್ಘಾಟನೆ ಅಂಗವಾಗಿ ಮಾರುಕಟ್ಟೆಯಲ್ಲಿ ಎನ್.ವಿ. ಪಾಟೀಲರ ಅಂಗಡಿ ಮುಂಭಾಗದಲ್ಲಿ ಭವ್ಯ ವೇದಿಕೆ ನಿರ್ಮಿಸಿ ಶ್ರೀರಾಮನ ಮೂರ್ತಿಗೆ ಪೂಜೆ ಸಲ್ಲಿಸಲಾಯಿತು. ಬಳಿಕ ಮೆಣಸಿನಕಾಯಿ ಮಾರಾಟಕ್ಕೆಂದು ಬಂದಿದ್ದ ಸುಮಾರು 20 ಸಾವಿರಕ್ಕೂ ಅಧಿಕ ರೈತರು ಮತ್ತು ಕೂಲಿ ಕಾರ್ಮಿಕರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.ವಿಮಲನಾಥ್ ಜೈನ್ ಸಮುದಾಯದವರು ಪಟ್ಟಣದ ಮುಖ್ಯರಸ್ತೆಯಲ್ಲಿನ ಜೈನ್ ಮಂದಿರ ಬಳಿಯಲ್ಲಿ ಶ್ರೀರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಬೆಳಗ್ಗೆಯಿಂದಲೇ ಸಾವಿರಾರು ಸಂಖ್ಯೆಯ ಜನರಿಗೆ ಉಪಾಹಾರ ನೀಡುವ ಮೂಲಕ ರಾಮಭಕ್ತಿ ಪ್ರದರ್ಶಿಸಿದರು.