ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ಸಂಭ್ರಮಾಚರಣೆ

KannadaprabhaNewsNetwork | Published : Jun 5, 2024 12:31 AM

ಸಾರಾಂಶ

ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ.ಸಿ.ಎನ್ .ಮಂಜುನಾಥ್ ಗೆಲುವು ಸಾಧಿಸುತ್ತಿದ್ದಂತೆ ಉಭಯ ಪಕ್ಷಗಳ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು.

ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ.ಸಿ.ಎನ್ .ಮಂಜುನಾಥ್ ಗೆಲುವು ಸಾಧಿಸುತ್ತಿದ್ದಂತೆ ಉಭಯ ಪಕ್ಷಗಳ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು.

ಮತ ಎಣಿಕೆ ನಡೆದ ನಗರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಬಳಿಗೆ ಕಾಂಗ್ರೆಸ್ ಹಾಗೂ ಬಿಜೆಪಿ - ಜೆಡಿಎಸ್ ಮುಖಂಡರು, ಕಾರ್ಯಕರ್ತರು ಬೆಳಗ್ಗೆಯಿಂದಲೇ ಬಂದು ಜಮಾಯಿಸಿದರು.

ಮೊದಲ ಸುತ್ತಿನಲ್ಲಿ ಮತಗಳ ಮುನ್ನಡೆ ಸಾಧಿಸಿದ ಮಂಜುನಾಥ್ 13ನೇ ಸುತ್ತಿನ ವೇಳೆಗೆ ಮತಗಳ ಅಂತರ 1 ಲಕ್ಷದ ಗಡಿ ದಾಟುತ್ತಿದ್ದಂತೆ ಉಭಯ ಪಕ್ಷಗಳ ಕಾರ್ಯಕರ್ತರು ವಿಜಯೋತ್ಸವ ಆಚರಿಸಲು ಮುಂದಾದರು. ಮತ್ತೊಂದೆಡೆ ಡಿ.ಕೆ.ಸುರೇಶ್ ಸೋಲಿನ ಸುಳಿವು ಅರಿತು ಕಾಂಗ್ರೆಸ್ ಏಜೆಂಟರು, ಮುಖಂಡರು ಹಾಗೂ ಕಾರ್ಯಕರ್ತರು ಬೇಸರದಿಂದ ಹೆಜ್ಜೆ ಹಾಕಿದರು.

ಮತ ಎಣಿಕೆ ಕೇಂದ್ರ ಬಳಿಯ ಹಳೇಯ ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿ ಮಂಜುನಾಥ್ ಭಾವಚಿತ್ರವಿರುವ ಬ್ಯಾನರ್ ಹಿಡಿದು ಸಾರ್ವಜನಿಕರಿಗೆ ಸಿಹಿ ವಿತರಿಸಿ ಸಂಭ್ರಮಿಸಿದರು. ಅಲ್ಲದೆ, ಪುಡಿ ಪುಡಿ, ಪುಡಿ ಪುಡಿ, ಬಂಡೆ ಪುಡಿ ಪುಡಿ, ಭಾರತ್ ಮಾತಾ ಕೀ ಜಯ್ ... ಎಂದೆಲ್ಲಾ ಘೋಷಣೆಗಳು ಮೊಳಗಿದವು.

ಗೆಲುವು ಖಚಿತಗೊಂಡ ಬಳಿಕ ಮಂಜುನಾಥ್ ರವರು ಮಾಜಿ ಸಚಿವರಾದ ಸಿ.ಪಿ.ಯೋಗೇಶ್ವರ್ , ಮುನಿರತ್ನ, ಶಾಸಕ ಎಂ.ಕೃಷ್ಣಪ್ಪ ಸೇರಿದಂತೆ ಇತರೆ ನಾಯಕರೊಂದಿಗೆ ಎಣಿಕಾ ಕೇಂದ್ರದ ಬಳಿ ಆಗಮಿಸಿ ಕಾರ್ಯಕರ್ತರೊಂದಿಗೆ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡರು. ಆನಂತರ ಮಂಜುನಾಥ್ ರವರು ಪತ್ನಿ ಅನುಸೂಯ ಅವರೊಂದಿಗೆ ಚುನಾವಣಾಧಿಕಾರಿ ಅವಿನಾಶ್ ಅವರಿಂದ ಪ್ರಮಾಣ ಪತ್ರ ಸ್ವೀಕರಿಸಿದರು. ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್, ಇತರೆ ಪಕ್ಷಗಳ ಅಭ್ಯರ್ಥಿಗಳು, ಪಕ್ಷೇತರರು ಎಣಿಕೆ ಕೇಂದ್ರದತ್ತ ತಲೆ ಹಾಕಲೇ ಇಲ್ಲ.4ಕೆಆರ್ ಎಂಎನ್ 2.ಜೆಪಿಜಿ

ಮತ ಎಣಿಕೆ ಕೇಂದ್ರದ ಬಳಿ ಬಿಜೆಪಿ - ಜೆಡಿಎಸ್ ಕಾರ್ಯಕರ್ತರು ವಿಜಯೋತ್ಸವ.

Share this article