ಕನ್ನಡಪ್ರಭ ವಾರ್ತೆ ಮಂಡ್ಯ ಕ್ರೈಸ್ತರು ಪವಿತ್ರ ಹಬ್ಬವಾದ ಕ್ರಿಸ್‌ಮಸ್‌ನ್ನು ಸಂಭ್ರಮ- ಸಡಗರದಿಂದ ಸೋಮವಾರ ಆಚರಿಸಿದರು.
ಕ್ರಿಸ್‌ಮಸ್ ಮುನ್ನಾ ದಿನವಾದ ಭಾನುವಾರ ಮಧ್ಯರಾತ್ರಿ ೧೨ ಗಂಟೆವರೆಗೆ ಕ್ರೈಸ್ತರು ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಯೇಸುವಿನ ಕುರಿತ ಭಕ್ತಿಗೀತೆಗಳನ್ನು ಹಾಡುವುದರೊಂದಿಗೆ ಪ್ರಾರ್ಥಿಸಿದರು. ಸೋಮವಾರ ಬೆಳಗ್ಗೆ ೮ ಗಂಟೆಯಿಂದಲೇ ಚರ್ಚ್‌ಗಳಲ್ಲಿ ಪ್ರಾರ್ಥನಾ ಕಾರ್ಯಕ್ರಮ ಆರಂಭವಾಗಿ ೧೦-೩೦ರವರೆವಿಗೂ ವಿಶೇಷ ಪ್ರಾರ್ಥನೆ ನಡೆಯಿತು.
ಪಾದ್ರಿಗಳಿಂದ ಆಶೀರ್ವಚನ:ಸೆಂಟ್‌ಜೋಸೆಫ್ ಚರ್ಚ್‌ನ ಪಾದ್ರಿ ಲೂರ್ದ್‌ಪ್ರಸಾದ್ ಅವರು ಕ್ರಿಸ್‌ಮಸ್ ಸಂದೇಶ ಬೋಧಿಸಿದರು. ಜಗತ್ತಿನ ಎಲ್ಲ ಜನರೂ ಸಂಯಮ, ಸುಖ-ಸಮೃದ್ಧಿಯಿಂದ ಬದುಕುವಂತಾಲಿ. ಜನರು ಆರೋಗ್ಯವಂತರಾಗಿ ಶಾಂತಿ, ಸಹಬಾಳ್ವೆಯಿಂದ ಇರುವಂತಾಗಲಿ ಎಂದು ಶುಭ ಸಂದೇಶ ನೀಡಿದರು.
ರಾಜ್ಯದಲ್ಲೇ ಎರಡನೇ ದೊಡ್ಡ ಚರ್ಚ್ ಎನಿಸಿರುವ ಸಂತ ಜೋಸೆಫರ ದೇವಾಲಯದಲ್ಲಿ ಯೇಸು ಸ್ವಾಮಿಯ ‘ಬೆತ್ಲೇಯೇಮ್ ಗೋದಲಿ (ಧರ್ಮ ಕೊಟ್ಟಿಗೆ)ಯನ್ನು ಗುಡಿಸಲಿನ ಆಕಾರದಲ್ಲಿ ಅತ್ಯಾಕರ್ಷಕ ವಿದ್ಯುತ್ ದೀಪಗಳಿಂದ ನಿರ್ಮಿಸಲಾಗಿತ್ತು. ಅದರೊಳಗೆ ಬಾಲ ಯೇಸುವನ್ನುವ ಪ್ರತಿಷ್ಠಾಪಿಸಿ ಹೂವುಗಳಿಂದ ಅಲಂಕರಿಸಲಾಗಿತ್ತು.
‘ಬೆತ್ಲೇಯೇಮ್ ಗೋದಲಿಯ ಗುಡಿಸಲಿಗೆ ಸ್ಟಾರ್‌ಗಳನ್ನು ಕಟ್ಟಿ ಅದಕ್ಕೆ ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಪುಟ್ಟ ಪುಟ್ಟ ವಿದ್ಯುತ್ ದೀಪಗಳಲ್ಲಿ ಮಿನುಗುತ್ತಿದ್ದ ಗೋದಲಿ ವಿಶೇಷ ಆಕರ್ಷಣೆಯಾಗಿತ್ತು.
ಸಾಡೆ ಸ್ಮಾರಕ ದೇವಾಲಯದಲ್ಲೂ ವಿಶೇಷ ಪೂಜೆ:
ನೂರಾರು ಸಂಖ್ಯೆಯಲ್ಲಿ ಕ್ರೈಸ್ತ ಸಮುದಾಯದವರು ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು. ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಚರ್ಚ್ ಆವರಣವನ್ನು ವಿಶೇಷ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಬೃಹತ್ ವಿದ್ಯುತ್ ದೀಪಗಳನ್ನು ಅಳವಡಿಸಿದ್ದ ನಕ್ಷತ್ರವನ್ನು ಅಳವಡಿಸಿ ಅದರಲ್ಲಿ ಏಸುವಿನ ಸಂದೇಶಗಳನ್ನು ಚಿತ್ರಿಸಲಾಗಿತ್ತು.
ಕ್ರಿಸ್‌ಮಸ್ ಹಬ್ಬದ ಅಂಗವಾಗಿ ಕಳೆದ ಮೂರ್ನಾಲ್ಕು ದಿನಗಳಿಂದಲೂ ಮನೆ ಮನೆಗೆ ತೆರಳಿ ಏಸು ಕ್ರಿಸ್ತನ ಭಕ್ತಿಗೀತೆಗಳನ್ನು ಹಾಡುವುದರೊಂದಿಗೆ ಎಲ್ಲರೂ ಕ್ರಿಸ್‌ಮಸ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಪ್ರೇರೇಪಿಸುತ್ತಿದ್ದುದು ಕಂಡುಬಂದಿತ್ತು. ಒಟ್ಟಾರೆ ಈ ಬಾರಿ ಕ್ರಿಸ್‌ಮಸ್ ಹಬ್ಬ ಕಳೆಕಟ್ಟಿತ್ತು.