ಎಲ್ಲೆಡೆ ಸಂಭ್ರಮದ ದೀಪಾವಳಿ ಆಚರಣೆ

KannadaprabhaNewsNetwork | Published : Nov 4, 2024 12:47 AM

ಸಾರಾಂಶ

ಮೂರು ದಿನಗಳ ಕಾಲ ನಗರದಲ್ಲಿ ಅದ್ಧೂರಿ ದೀಪಾವಳಿ ಹಬ್ಬ ಆಚರಿಸಲಾಯಿತು. ದೀಪಾವಳಿ ಮಾರನೇ ದಿನವಾದ ಶನಿವಾರ ನಗರದಾದ್ಯಂತ ಬಲಿಪಾಡ್ಯದ ಸಂಭ್ರಮ ಮನೆಮಾಡಿತು.

ಹುಬ್ಬಳ್ಳಿ: ಮೂರು ದಿನಗಳ ಕಾಲ ನಗರದಲ್ಲಿ ಅದ್ಧೂರಿ ದೀಪಾವಳಿ ಹಬ್ಬ ಆಚರಿಸಲಾಯಿತು. ದೀಪಾವಳಿ ಮಾರನೇ ದಿನವಾದ ಶನಿವಾರ ನಗರದಾದ್ಯಂತ ಬಲಿಪಾಡ್ಯದ ಸಂಭ್ರಮ ಮನೆಮಾಡಿತು. ಹೊಸ ವಾಹನ, ಹೊಸ ವಸ್ತುಗಳ ಖರೀದಿಗೆ ದೀಪಾವಳಿ ಪಾಡ್ಯ ಶುಭ ದಿನ. ಈ ಹಿನ್ನೆಲೆಯಲ್ಲಿ ಶನಿವಾರವೂ ಜನರು ವಾಹನ, ಗ್ರಹಬಳಖೆಯ ವಸ್ತುಗಳನ್ನು ಖರೀದಿಸಿದರು.

ಹೊಸ ವಾಹನ ಖರೀದಿಸಿದ್ದವರು ಇಲ್ಲಿನ ಸಿದ್ಧಾರೂಢ ಮಠ, ಮೂರುಸಾವಿರ ಮಠ, ಸಾಯಿ ಮಂದಿರ ಸೇರಿದಂತೆ ಅನೇಕ ದೇವಸ್ಥಾನಗಳ ಎದುರು ವಾಹನಗಳನ್ನು ಸಾಲಾಗಿ ನಿಲ್ಲಿಸಿ ಪೂಜೆ ಸಲ್ಲಿಸಿದರು. ಮಾರುಕಟ್ಟೆ ಪ್ರದೇಶಗಳು, ವಾಣಿಜ್ಯ ಮಳಿಗೆಗಳು, ಬಡಾವಣೆ ಹಾಗೂ ಪ್ರಮುಖ ರಸ್ತೆಗಳಲ್ಲಿ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸಿದವು. ವ್ಯಾಪಾರಸ್ಥ ಕುಟುಂಬದವರೆಲ್ಲ ಸೇರಿ ಅಂಗಡಿಗಳಿಗೆ ಪೂಜೆ ಸಲ್ಲಿಸಿ ಸಿಹಿ ಹಂಚಿ ಸಂಭ್ರಮಿಸಿದರು.

ಶನಿವಾರ ಮನೆಗಳಲ್ಲಿ ಸಾಂಪ್ರದಾಯಿಕವಾಗಿ ಸಗಣಿಯಿಂದ ತಯಾರಿಸಿದ ಪಾಂಡವರನ್ನು ಇಟ್ಟು ಹೂವಿನಿಂದ ಅಲಂಕರಿಸಿ ಪೂಜೆ ಸಲ್ಲಿಸಿದರು. ಮೂರು ದಿನಗಳ ಕಾಲ ಮಾರುಕಟ್ಟೆ ಪ್ರದೇಶಗಳು ಜನಜಂಗುಳಿಯಿಂದ ಕೂಡಿದ್ದವು. ರಾತ್ರಿಯ ವರೆಗೂ ಪಟಾಕಿಗಳ ಅಬ್ಬರ ಜೋರಾಗಿತ್ತು. ಮಕ್ಕಳು, ಯುವಕರು ಸೇರಿದಂತೆ ಮನೆಯ ಬಹುತೇಕರು ಪಟಾಕಿ ಸಿಡಿಸಿ, ದೀಪದ ಹಣತೆ ಹಚ್ಚಿ ಸಂಭ್ರಮಿಸಿದರು. ಮನೆಗಳಲ್ಲಿ ಸಿಹಿ ಅಡುಗೆ ತಯಾರಿಸಿ ಕುಟುಂಬದವರೆಲ್ಲ ಸೇರಿ ಸವಿದು ಸಂಭ್ರಮಿಸಿದರು.

ಎಮ್ಮೆಗಳಿಗೆ ಪೂಜೆ:

ಬಲಿಪಾಡ್ಯದ ಅಂಗವಾಗಿ ಶನಿವಾರ ನಗರದ ಗವಳಿ ಗಲ್ಲಿಯ ಎಲ್ಲ ಕುಟುಂಬದವರು ಎಮ್ಮೆಗಳನ್ನು ತೊಳೆದು, ಅವುಗಳನ್ನು ಶೃಂಗರಿಸಿ ಪೂಜೆ ಸಲ್ಲಿಸಿದರು. ಸಿಂಗರಿಸಿದ ಎಮ್ಮೆಗಳನ್ನು ಇಲ್ಲಿನ ಮೂರುಸಾವಿರ ಮಠದ ವರೆಗೆ ಅದ್ಧೂರಿ ಮೆರವಣಿಗೆ ನಡೆಸಿ, ನೆಹರು ಮೈದಾನಕ್ಕೆ ಕರೆತಂದರು. ಮಾಲೀಕ ಬಾರುಕೋಲು ಹಿಡಿದು, ಹಲಗೆ, ಜಾಗಟೆ ಬಾರಿಸುತ್ತ ಮುಂದೆ ನಡೆದಾಗ ಎಮ್ಮೆಗಳು ಹಿಂದೆ ಓಡುತ್ತ ಸಾಗಿದವು. ಯುವಕರು ವೇಗವಾಗಿ ಬೈಕ್‌ ಓಡಿಸಿದರೆ, ಎಮ್ಮೆಗಳೂ ಅಷ್ಟೇ ವೇಗವಾಗಿ ಅವರ ಹಿಂದೆ ಓಡಿಹೋಗುತ್ತಿದ್ದ ದೃಶ್ಯ ಗಮನಸೆಳೆಯಿತು.

Share this article