ಪೊಲೀಸ್‌ ನಾಗಪ್ಪ ಅಂತ್ಯಕ್ರಿಯೆಗೆ ಸ್ಮಶಾನ ಸಮಸ್ಯೆ: ತಹಸೀಲ್ದಾರ್‌ ಭೇಟಿ

KannadaprabhaNewsNetwork |  
Published : Aug 17, 2025, 01:34 AM IST
ಹೊನ್ನಾಳಿ ಫೋಟೋ 16ಎಚ್.ಎಲ್.ಐ2ಎ ಮೃತ ನಿವೃತ್ತ  ಪೊಲೀಸ್ ನಾಗಪ್ಪ ಎಂ. (71) | Kannada Prabha

ಸಾರಾಂಶ

ಹೊನ್ನಾಳಿ ತಾಲೂಕಿನ ಕೊನಾಯಕನಹಳ್ಳಿ ಗ್ರಾಮದ ನಿವೃತ್ತ ಪೊಲೀಸ್ ನಾಗಪ್ಪ ಎಂ. (71) ಹೊನ್ನಾಳಿಯ ದುರ್ಗಿಗುಡಿ ಉತ್ತರ ಭಾಗದಲ್ಲಿ ವಾಸವಾಗಿದ್ದು, ಶನಿವಾರ ಬೆಳಗ್ಗೆ ನಿಧನರಾಗಿದ್ದಾರೆ. ಆದರೆ, ಅವರ ಅಂತ್ಯಕ್ರಿಯೆ ವೇಳೆ ಸ್ಮಶಾನ ಗೊಂದಲ ಉಂಟಾದ ಘಟನೆಯೂ ನಡೆದಿದೆ.

- ಮೂಲತಃ ಕೊನಾಯಕನಹಳ್ಳಿ ಗ್ರಾಮದ ನಾಗಪ್ಪ

- ಹೊನ್ನಾಳಿ ಪಟ್ಟಣ ದುರ್ಗಿಗುಡಿ ವ್ಯಾಪ್ತಿಯಲ್ಲಿ ವಾಸ

- ಹುಟ್ಟೂರು ಕೊನಾಯಕನಹಳ್ಳಿ ಸ್ಮಶಾನ ಜಾಗದಲ್ಲಿ ಖಾಸಗಿ ವ್ಯಕ್ತಿಯಿಂದ ಅಡಕೆ ಕೃಷಿ

- ತಹಸೀಲ್ದಾರ್ ಕಚೇರಿ ಬಳಿಗೆ ಶವ ಸಾಗಿಸಿ ಪ್ರತಿಭಟನೆ ವಿಷಯ ತಿಳಿದು ನಿವಾಸಕ್ಕೆ ತಹಸೀಲ್ದಾರ್‌ ಭೇಟಿ

- ಶೀಘ್ರ ಸಮಸ್ಯೆ ಪರಿಹಾರ ಭರವಸೆ, ಸಂಬಂಧಿಗಳ ಜಮೀನಿನಲ್ಲಿ ಅಂತ್ಯಸಂಸ್ಕಾರಕ್ಕೆ ಒಪ್ಪಿಗೆ

- - -

ಕನ್ನಡಪ್ರಭ ವಾರ್ತೆ ಹೊನ್ನಾಳಿ

ತಾಲೂಕಿನ ಕೊನಾಯಕನಹಳ್ಳಿ ಗ್ರಾಮದ ನಿವೃತ್ತ ಪೊಲೀಸ್ ನಾಗಪ್ಪ ಎಂ. (71) ಹೊನ್ನಾಳಿಯ ದುರ್ಗಿಗುಡಿ ಉತ್ತರ ಭಾಗದಲ್ಲಿ ವಾಸವಾಗಿದ್ದು, ಶನಿವಾರ ಬೆಳಗ್ಗೆ ನಿಧನರಾಗಿದ್ದಾರೆ. ಆದರೆ, ಅವರ ಅಂತ್ಯಕ್ರಿಯೆ ವೇಳೆ ಸ್ಮಶಾನ ಗೊಂದಲ ಉಂಟಾದ ಘಟನೆಯೂ ನಡೆದಿದೆ.

ನಾಗಪ್ಪ ಎಂ. ಪತ್ನಿ, ಪುತ್ರ, ಇಬ್ಬರು ಪುತ್ರಿಯರು ಇದ್ದಾರೆ. ಮೂಲತಃ ಕೋನಾಯಕನಹಳ್ಳಿಯವರಾಗಿದ್ದಾರೆ. ಆದಕಾರಣ ಗ್ರಾಮದಲ್ಲಿ ಅಂತ್ಯಕ್ರಿಯೆ ಮಾಡಲು ಬಂಧುಗಳು ಮುಂದಾಗಿದ್ದರು. ಈ ವೇಳೆ ಹತ್ತಾರು ವರ್ಷಗಳಿಂದ ಗ್ರಾಮದ ಸರ್ವೆ ನಂ.83ರಲ್ಲಿ 1 ಎಕರೆ ಹಿಂದೂ ರುದ್ರ ಭೂಮಿ ಎಂದು ಪಹಣಿಯಲ್ಲಿ ದಾಖಲಾಗಿದ್ದರೂ ಖಾಸಗಿ ವ್ಯಕ್ತಿಯೊಬ್ಬರು ಆ ಜಾಗದಲ್ಲಿ ಉಳುಮೆ ಮಾಡಿ, ಅಡಕೆ ಗಿಡಗಳನ್ನು ಹಾಕಿದ್ದಾರೆ. ಪರಿಣಾಮ ಗ್ರಾಮದಲ್ಲಿ ಯಾರಾದರೂ ಮರಣ ಹೊಂದಿದರೆ ಅವರ ಅಂತ್ಯಕ್ರಿಯೆ ಮಾಡಲು ಸಮಸ್ಯೆಯಾಗುತ್ತಿದೆ. ಈ ಬಗ್ಗೆ ಗ್ರಾಮದ ಮುಖಂಡರು ತಹಸೀಲ್ದಾರ್ ಕಚೇರಿಗೆ ಅನೇಕ ಬಾರಿ ಮನವಿ ಸಲ್ಲಿಸಿದ್ದಾರೆ. ಆದರೆ, ಸಮಸ್ಯೆ ಮಾತ್ರ ಪರಿಹಾರ ಕಂಡಿಲ್ಲ. ಈ ಸ್ಮಶಾನದ ಸಮಸ್ಯೆ ಭಾನುವಾರ ಸಹ ಮುಂದುವರಿಯಿತು.

ಶನಿವಾರ ನಿವೃತ್ತ ಪೊಲೀಸ್ ನಾಗಪ್ಪ ಎಂ. ಅವರ ಅಂತ್ಯಕ್ರಿಯೆ ಹುಟ್ಟೂರು ಕೋನಾಯಕನಹಳ್ಳಿಯಲ್ಲಿ ನೆರವೇರಿಸಲು ತೀರ್ಮಾನಿಸಿದರು. ಆಗ ಅಂತ್ಯಕ್ರಿಯೆಗೆ ಅಲ್ಲಿ ಜಾಗವೇ ಇಲ್ಲದ ಕಾರಣದಿಂದ ಗ್ರಾಮಸ್ಥರು ಬೇಸರಗೊಂಡರು. ಬಳಿಕ ಸಮಸ್ಯೆ ಬಗ್ಗೆ ಸರ್ಕಾರದ ಗಮನ ಸೆಳೆಯಲು ತಾಲೂಕು ಕಚೇರಿಗೇ ನಾಗಪ್ಪ ಅವರ ಶವ ತೆಗೆದುಕೊಂಡು ಹೋಗಲು ಹಾಗೂ ಪ್ರತಿಭಟನೆ ಮಾಡಲು ತೀರ್ಮಾನಿಸಿದರು.

ಶವದೊಂದಿಗೆ ಕಚೇರಿ ಬಳಿ ಪ್ರತಿಭಟನೆ ನಡೆಸಲಿರುವ ವಿಷಯ ತಹಸೀಲ್ದಾರ್ ರಾಜೇಶ್ ಕುಮಾರ್ ಅವರಿಗೆ ತಲುಪಿತು. ಕೂಡಲೇ ತಹಸೀಲ್ದಾರರು ರಾಜಸ್ವ ನಿರೀಕ್ಷಕ ರಮೇಶ್ ಅವರೊಂದಿಗೆ ನಾಗಪ್ಪ ಅವರ ಪಾರ್ಥಿವ ಇರಿಸಲಾಗಿದ್ದ ಹೊನ್ನಾಳಿಯ ನಿವಾಸಕ್ಕೆ ಭೇಟಿ ನೀಡಿ, ಗ್ರಾಮಸ್ಥರು, ನಾಗಪ್ಪ ಕುಟುಂಬದವರೊಂದಿಗೆ ಸಮಾಲೋಚಿಸಿದರು. ಸ್ಮಶಾನದ ಜಾಗಕ್ಕೆ ಸಂಬಂದಿಸಿ ಎಲ್ಲ ದಾಖಲೆಗಳನ್ನು ಗ್ರಾಮಸ್ಥರಿಂದ ಪಡೆದು, ಈ ಬಗ್ಗೆ ತಮ್ಮ ಕಚೇರಿಯ ದಾಖಲೆಗಳನ್ನು ಕೂಲಂಕಶವಾಗಿ ಪರಿಶೀಲಿಸಿ, ಗ್ರಾಮದ ಸ್ಮಶಾನ ಜಾಗ ಅಳತೆ ಮಾಡಿ, ಗಡಿ ಗುರುತಿಸಿ ತಂತಿಬೇಲಿ ಹಾಕಿಸಿ ಹದ್ದುಬಸ್ತು ಮಾಡಿಕೊಡುವುದಾಗಿ ಭರವಸೆ ನೀಡಿದರು.

ತಹಸೀಲ್ದಾರ್ ರಾಜೇಶ್ ಕುಮಾರ್ ಭರವಸೆ ಮೇರೆಗೆ ಗ್ರಾಮದ ಮುಖಂಡರು, ಮೃತ ನಾಗಪ್ಪ ಅವರ ಕುಟುಂಬದ ಬಂಧುಗಳು ಪರಸ್ಪರ ಚರ್ಚಿಸಿ, ಮೃತರ ಸಂಬಂಧಿಕರ ಜಮೀನಿನಲ್ಲಿ ಅಂತ್ಯ ಸಂಸ್ಕಾರ ನಡೆಸಲು ನಿರ್ಧರಿಸಿ, ಹೊನ್ನಾಳಿಯಿಂದ ಕೋನಾಯಕನಹಳ್ಳಿಗೆ ಶವ ಸಾಗಿಸಿ, ಅಂತ್ಯ ಸಂಸ್ಕಾರ ನಡೆಸಿದರು. ಆ ಮೂಲಕ ಸ್ಮಶಾನ ಸಮಸ್ಯೆ ಸಧ್ಯಕ್ಕೆ ಸುಖಾಂತಗೊಂಡಿತು.

- - -

-16ಎಚ್.ಎಲ್.ಐ2ಎ: ನಾಗಪ್ಪ ಎಂ.

-16ಎಚ್.ಎಲ್.ಐ2.ಜೆಪಿಜಿ: ಹೊನ್ನಾಳಿ ತಾಲೂಕಿನ ಕೋನಾಯಕನಹಳ್ಳಿಯ ನಿವೃತ್ತ ಪೊಲೀಸ್ ನಾಗಪ್ಪ ಎಂ. ನಿಧನರಾಗಿದ್ದು, ಅಂತ್ಯ ಸಂಸ್ಕಾರಕ್ಕೆ ಸ್ಮಶಾನ ಜಾಗದ ಸಮಸ್ಯೆ ಎದುರಾದ ಹಿನ್ನೆಲೆ ತಹಶೀಲ್ದಾರ್ ಮೃತರ ನಿವಾಸಕ್ಕೆ ಆಗಮಿಸಿ, ಗ್ರಾಮದ ಮುಖಂಡರೊಂದಿಗೆ ಸಮಾಲೋಚಿಸಿ, ಶೀಘ್ರ ಪರಿಹಾರ ಭರವಸೆ ನೀಡಿದರು.

PREV

Recommended Stories

79 ವರ್ಷಗಳ ನಂತ್ರ ಅಥಣಿಗೆ ಸರ್ಕಾರಿ ಪ್ರೌಢಶಾಲೆ!
ಪ್ರಜಾಪ್ರಭುತ್ವ ಉಳಿವಿಗೆ ಹೋರಾಟ ಅನಿವಾರ್ಯ