ಬೀದರ್: ಜನಗಣತಿದಾರರಿಗೆ ಕಾನೂನಿನ ಕಣ್ಣಿಗೆ ಮಣ್ಣೆರಚಿ ರಾಜಾರೋಷವಾಗಿ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ಬರುವ ಕ್ರಮ ಸಂಖ್ಯೆ: 19ರ ಬೇಡಜಂಗಮ, ಕ್ರಮ ಸಂಖ್ಯೆ: 23ರ ಭೋವಿ ಮತ್ತು ಕ್ರಮ ಸಂಖ್ಯೆ: 68ರಲ್ಲಿ ಮಾಲಜಂಗಮ ಇವುಗಳ ಪದವನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದ್ದು, ಅದನ್ನು ತಡೆಯಬೇಕೆಂದು ಕರ್ನಾಟಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಸುಳ್ಳು ಜಾತಿ ಪ್ರಮಾಣ ಪತ್ರಗಳ ವಿರೋಧಿ ಹೋರಾಟ ಸಮಿತಿ ಆಗ್ರಹಿಸಿದೆ.ಈ ಕುರಿತು ಮುಖ್ಯಮಂತ್ರಿ, ಸಮಾಜ ಕಲ್ಯಾಣ ಸಚಿವರು ಹಾಗೂ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಅವರಿಗೆ ಬರೆದ ಮನವಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿ ಇವುಗಳ ಹೆಸರಿನಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರಗಳು ನೀಡುವಲ್ಲಿ ಸಂಬಂಧಪಟ್ಟ ಕಂದಾಯ ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಮರೆತು, ಕರ್ತವ್ಯದ ಅಧಿಕಾರ ದುರ್ಬಳಕೆ ಮಾಡಿಕೊಂಡು ಮೇಲ್ಜಾತಿ ಜನಾಂಗಕ್ಕೆ ಸೇರಿದರೂ ಸರಿಯಾದ ರೀತಿಯಲ್ಲಿ ಪರಿಶೀಲನೆ ಮಾಡದೇ ಉದ್ದೇಶಪೂರ್ವಕವಾಗಿ ಸುಳ್ಳು ಜಾತಿ ಪ್ರಮಾಣ ಪತ್ರಗಳೂ ರಾಜಾರೋಷವಾಗಿ ನೀಡಿರುವುದನ್ನು ರಾಜ್ಯದ ಜನತೆ ಯಾರೂ ಮರೆಯುವಂತಿಲ್ಲ ಮತ್ತು ಎಲ್ಲಾ ಎಷ್ಟೋ ಪ್ರಕರಣಗಳು ಮಾನ್ಯ ನ್ಯಾಯಾಲಯದಲ್ಲಿ ಬಾಕಿ ಉಳಿದಿರುತ್ತವೆ ಎಂದಿದ್ದಾರೆ.ಅಸ್ಪೃಶ್ಯ ಸಮುದಾಯಕ್ಕೆ ಮೀಸಲಾತಿಯನ್ನು ಭಾರತ ಸಂವಿಧಾನಬದ್ಧವಾಗಿ ಕಲ್ಪಿಸಿರುವುದರಿಂದ ಈ ಜನಾಂಗವು ಸ್ವಲ್ಪ ಮಟ್ಟಿಗೆ ಉನ್ನತ ಶಿಕ್ಷಣ, ವಿವಿಧ ಸರ್ಕಾರಿ ಹುದ್ದೆಗಳಲ್ಲಿ ರಾಜಕೀಯ ಕ್ಷೇತ್ರದಲ್ಲಿ ಸ್ಪಲ್ಪ ನಿಟ್ಟಿಸಿರು ಸಿಕ್ಕದಂತಾಗಿದ್ದು, ಅಂತಹ ಸಂದರ್ಭದಲ್ಲಿ ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ ಇವುಗಳಲ್ಲಿ ಕೆಲವು ಪಟ್ಟಭದ್ರ ಹಿತಾಸಕ್ತಿಗಳಿಂದ ಅಸ್ಪೃಶ್ಯರ ಜಾತಿಯ ಜನಾಂಗದವರ ಮೀಸಲಾತಿಯನ್ನು ನಶಿಸಿ ಹೋಗಲು ಬೀದರ್ ಮತ್ತು ರಾಜ್ಯದಲ್ಲಿ ಪ್ರಯತ್ನ ನಡೆಯುತ್ತಿದೆ.ಕರ್ನಾಟದಲ್ಲಿ ಈಗ ಕೈಗೊಂಡಿರುವ ಪರಿಶಿಷ್ಟ ಜಾತಿಗಳ ಸಮೀಕ್ಷೆಯ ಕಾರ್ಯದಲ್ಲಿ ತೊಡಗಿರುವ ಎಲ್ಲಾ ಗಣತಿದಾರರು ಮೇಲ್ವಿಚಾರಕರು ಹಾಗೂ ತಾಲೂಕು/ಜಿಲ್ಲಾ ಮಟ್ಟದ ಎಲ್ಲಾ ಹಿರಿಯ ಅಧಿಕಾರಿಗಳು ಈ ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡು ಬೇಡಜಂಗಮ / ಬುಡುಗ ಜಂಗಮ ಮತ್ತು ಮಾಲಜಂಗಮ ಸಮುದಾಯದವರೆಂದು ಹೇಳಿಕೊಳ್ಳುವ ಕುಟುಂಬಗಳನ್ನು ಪರಿಶಿಷ್ಟ ಜಾತಿಯವರೆಂದು ನೋಂದಾಯಿಸುವ ಸಂದರ್ಭದಲ್ಲಿ ಅವರ ಸಾಮಾಜಿಕ ಹಾಗೂ ಸಂಸ್ಕೃತಿಕ ಹಿನ್ನಲೆಯನ್ನು ಕುಲಂಕೂಷವಾಗಿ ಪರಿಶೀಲಿಸಿ ಸೂಕ್ತ ನಿರ್ಣಯವನ್ನು ತೆಗೆದುಕೊಳ್ಳಬೇಕೆಂದು ಸಮಿತಿ ಮನವಿ ಮಾಡಿದೆ.ಈ ಸಂದರ್ಭದಲ್ಲಿ ಕರ್ನಾಟಕ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡಗಳ ಸುಳ್ಳು ಜಾತಿ ವಿರೋಧಿ ಹೋರಾಟ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಕುಮಾರ ಮೂಲಭಾರತಿ, ಚಂದ್ರಕಾಂತ ಆರ್ ನಿರಾಟೆ, ಜಿಲ್ಲಾಧ್ಯಕ್ಷ ಅಭಿಕಾಳೆ, ರಾಜಕುಮಾರ ಗುನ್ನಳ್ಳಿ, ರಾಹುಲ್ ಡಾಂಗೆ, ಸಂತೋಷ ಏಣಕೂರೆ, ಜಗನ್ನಾಥ ಹೊನ್ನಾ, ರಾಘವೆಂದ್ರ ಮೀನಕೇರಾ, ಅಂಬೇಡ್ಕರ್ ಬೌದ್ಧೆ, ಮಹೇಶ ಘೋಲಾ, ದಯಾನಂದ ನೌಲೆ, ಬಸವರಾಜ ಮಿಠಾರೆ ಉಪಸ್ಥಿತರಿದ್ದರು.