ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಖಿಲ್ಲೆ ಮೊಹಲ್ಲಾದ ಶ್ರೀ ಶೃಂಗೇರಿ ಮಠ, ಅಭಿನವ ಶಂಕರಾಲಯದಲ್ಲಿ ಶ್ರೀ ಶಂಕರಾಚಾರ್ಯ ವಿಧುಶೇಖರ ಭಾರತಿ ಸನ್ನಿದಾನಂಗಳವರು ಮಾ. 30 ರಿಂದ ಏ. 6ರವರೆಗೆ ಅಭಿವನ ಶಂಕರಾಲಯದ ಶತಮಾನೋತ್ಸವ ಸಂಭ್ರಮಾಚರಣೆಗೆ ಆಗಮಿಸುವರು.ಮಾ. 30 ರಂದು ಬೆಳಗ್ಗೆ 9ಕ್ಕೆ ಶಂಕರಮಠದ ಆವರಣದಲ್ಲಿ ಸಹಸ್ರ ಮೋದಕ ಗಣಪತಿ ಹೋಮ ನಡೆಯಲಿದ್ದು, ಸಂಜೆ 6ಕ್ಕೆ ಮೈಸೂರು ಮಹಾನಗರಕ್ಕೆ ಆಗಮಿಸಲಿರುವ ಸ್ವಾಮೀಜಿಯವರು ಸಂಜೆ 6ಕ್ಕೆ ಸಚ್ಚಿದಾನಂದ ವಿಲಾಸ ಗುರುಭವನ ಹಾಗೂ ನೂತನ ಸಭಾಂಗಣ ಉದ್ಘಾಟಿಸುವರು. ಮಾ. 31ರಂದು ದೇವಸ್ಥಾನದ ಆವರಣದಲ್ಲಿ ಮಹಾರುದ್ರ ಜಪ ಮತ್ತು ಶತಚಂಡಿ ಪಾರಾಯಣ ಶುಭಾರಂಭ, ಸಾರ್ವಜನಿಕ ದರ್ಶನ, ಪಾದಪೂಜೆ ಮತ್ತು ಭಿಕ್ಷಾವಂದನೆ ಹಾಗೂ ಚಂದ್ರಮೌಳೇಶ್ವರ ಪೂಜೆಯಲ್ಲಿ ಭಾಗವಹಿಸುವರು.
ಏ. 2ರ ಬೆಳಗ್ಗೆ 9 ರಿಂದ 1ರವರೆಗೆ ಸಾರ್ವಜನಿಕ ದರ್ಶನ, ಪಾದಪೂಜೆ ಮತ್ತು ಭಿಕ್ಷಾವಂದನೆ ಹಾಗೂ ವಿಶೇಷ ಚಂದ್ರಮೌಳೇಶ್ವರ ಪೂಜೆ ನೆರವೇರುವುದು. ಏ. 4ರಂದು ಬೆಳಗ್ಗೆ 8.30 ರಿಂದ 1ರವರೆಗೆ ಮಹಾಗಣಪತಿ ಪೂಜೆ, ಸತ್ಯನಾರಾಯಣ ಪೂಜೆ, ಶ್ರೀ ಶಂಕರಾಚಾರ್ಯ ಸನ್ನಿಧಿಗಳಲ್ಲಿ ಕುಂಭಾಭಿಷೇಕ, ನವಗ್ರಹ ಮೂರ್ತಿಗಳ ಪುನರ್ ಪ್ರತಿಷ್ಠಾಪನೆ, ಸಾರ್ವಜನಿಕ ದರ್ಶನ, ಪಾದಪೂಜೆ ಏರ್ಪಡಿಸಿದೆ. ಏ. 5 ರಂದು ದೇವಸ್ಥಾನದ ಆವರಣದಲ್ಲಿ ಬೆಳಗ್ಗೆ 8.30 ರಿಂದ ಮಧ್ಯಾಹ್ನ 1ರವರೆಗೆ ಶ್ರೀ ಶಾರದಾಂಭ ಹಾಗೂ ಶ್ರೀ ಸಚ್ಚಿದಾನಂದ ಶಿವಾಭಿನವ ನೃಸಿಂಹ ಭಾರತೀ ಸ್ವಾಮೀಜಿ ಸನ್ನಿಧಿಯಲ್ಲಿ ಕುಂಭಾಭಿಷೇಕ ಮತ್ತು ಶಿಖರ ಕುಂಭಾಭಿಷೇಕ, ಚಂದ್ರಮೌಳೇಶ್ವರ ಪೂಜೆ ಏರ್ಪಡಿಸಿದೆ.ಸಂಜೆ 5.30ಕ್ಕೆ ಸಾರ್ವಜನಿಕವಾಗಿ ಗುರುವಂದನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಮುಖ್ಯ ಅತಿಥಿಗಳಾಗಿ ನವದೆಹಲಿಯ ಕೇಂದ್ರ ಸರ್ಕಾರದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎನ್. ವೆಂಕಟರಾಮನ್ ಭಾಗವಹಿಸಲಿದ್ದಾರೆ. ಏ. 6ರಂದು ದೇವಸ್ಥಾನದ ಆವರಣದಲ್ಲಿ ಸಾರ್ವಜನಿಕ ದರ್ಶನ, ಪಾದಪೂಜೆ, ಭಿಕ್ಷಾವಂದನೆ, ಮಂತ್ರಾಕ್ಷತೆ ವಿತರಣೆ ನಂತರ ಕೆ.ಆರ್. ನಗರಕ್ಕೆ ನಿರ್ಗಮಿಸುವರು.