ಮುಂಡರಗಿ: ಶ್ರೀ ಜಗದ್ಗುರು ಅನ್ನದಾನೀಶ್ವರ ವಿದ್ಯಾ ಸಮಿತಿಯ ಶತಮಾನೋತ್ವವನ್ನು ಬರುವ ಜೂನ್ 16ರಿಂದ ಜೂನ್ 31 ರೊಳಗಾಗಿ ಒಂದು ವಾರದ ವಿಶಿಷ್ಟ ಮತ್ತು ಅರ್ಥಪೂರ್ಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳವರು ಹೇಳಿದರು. ಮಂಗಳವಾರ ನಡೆದ ಶತಮಾನೋತ್ಸವ ಸಮಿತಿಯ ಪೂರ್ವಭಾವಿ ಸಭೆಯಲ್ಲಿ ಚರ್ಚಿಸಿ ನಿರ್ಣಯವನ್ನು ಪ್ರಕಟಿಸಲಾಯಿತು. ಒಂದು ವಾರದ ಕಾರ್ಯಕ್ರಮದಲ್ಲಿ ತಾಲೂಕಿನ ಎಲ್ಲ ಶೈಕ್ಷಣಿಕ ಸಂಸ್ಥೆಗಳನ್ನು ಒಗ್ಗೂಡಿಸಿ ಶೈಕ್ಷಣಿಕ ಹಬ್ಬದ ಮಾದರಿಯಲ್ಲಿ ಶೈಕ್ಷಣಿಕ ಚಿಂತನೆ, ಪರಿಸರ ಮತ್ತು ಅರಣ್ಯ ಕಾಪಾಡುವ ದೃಷ್ಠಿಯಲ್ಲಿ ಪರಿಸರ ತಿಳುವಳಿಕೆಯ ಹಬ್ಬ ,ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಂದ ವಿಜ್ಞಾನದ ವಸ್ತು ಪ್ರದರ್ಶನಗಳ ಜೊತೆಗೆ ವಿಜ್ಞಾನದ ಅವಿಷ್ಕಾರಗಳ ಕುರಿತು ಉಪನ್ಯಾಸವನ್ನೊಳಗೊಂಡ ವಿಜ್ಞಾನಹಬ್ಬ, ರೈತರ ಮುಂದಿರುವ ಸವಾಲುಗಳು ಮತ್ತು ಸಾವಯವ ಕೃಷಿ ಕುರಿತಾದ ಕೃಷಿ ಹಬ್ಬ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮುಂಡರಗಿ ತಾಲೂಕಿನ ಕೊಡುಗೆ ಕುರಿತಾದ ಕಾರ್ಯಕ್ರಮ, ಸಾಹಿತ್ಯ ಸಮ್ಮೇಳನ ಮತ್ತು ಸಮಿತಿಯ ಹಿರಿಯ ವಿದ್ಯಾರ್ಥಿಗಳ ಮತ್ತು ಸಿಬ್ಬಂದಿಯ ಸಮಾವೇಶ ಹೀಗೆ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಕುರಿತು ಚೆರ್ಚಿಸಲಾಯಿತು. ಶತಮಾನೋತ್ಸವ ಕಾರ್ಯಕ್ರಮದ ಮೂರು ದಿನಗಳ ಮುಂಚೆ ಮುಂಡರಗಿ ಭಕ್ತರ ಮ್ಯಾರಾಥಾನ ಓಟ ನಡೆಯುವುದು. ಕಾರ್ಯಕ್ರಮಕ್ಕೆ ಸುತ್ತೂರ ಶ್ರೀಗಳನ್ನು, ಸಿದ್ದಗಂಗಾ ಶ್ರೀಗಳನ್ನು, ಕನ್ನೇರಿಮಠದ ಶ್ರೀಗಳು, ರಾಜ್ಯಪಾಲರು, ಮುಖ್ಯಮಂತ್ರಿಗಳನ್ನು, ವಿರೋಧಪಕ್ಷದ ನಾಯಕರನ್ನು, ಜಿಲ್ಲಾ ಉಸ್ತುವಾರಿ ಸಚಿವರನ್ನು, ಶಿಕ್ಷಣ ಮಂತ್ರಿಗಳನ್ನು, ಶಾಸಕ ಮಹೋದಯರನ್ನು, ಸಂಸದರನ್ನು ಮತ್ತು ತೇಜಸ್ವಿ ಸೂರ್ಯ, ಯದವೀರ ಒಡೆಯರ್, ಸುಧಾಮೂರ್ತಿ, ಮೋಹನ ಆಳ್ವಾ, ಗುರುರಾಜ ಖರ್ಜಗಿ, ರಮೇಶ ಅರವಿಂದ, ಪಬ್ಲಿಕ್ ಟಿವಿಯ ರಂಗನಾಥ, ಸುವರ್ಣಾ ಟಿವಿಯ ಹನುಮಕ್ಕನವರ, ಸುನೀಲ ಜೋಶಿ, ಕ್ರಿಕೆಟಿಗ ಕೆ.ಎಲ್.ರಾಹುಲ್ ಮುಂತಾದ ಗಣ್ಯಮಾನ್ಯರನ್ನು ಆಹ್ವಾನಿಸಲು ತೀರ್ಮಾನಿಸಲಾಯಿತು. ಪ್ರತಿದಿನ ಸಂಜೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ವಿವಿಧ ಮನೋರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು. ಶತಮಾನೋತ್ಸವದ ಈ ಸಂದರ್ಭದಲ್ಲಿ ಸಮಿತಿಯ ಮೂರು ಅಂತಸ್ಸಿನ ಬೃಹತ್ ಪದವಿ ಪೂರ್ವ ಕಾಲೇಜಿನ ನೂತನ ಕಟ್ಟಡವನ್ನು, ತಾಲೂಕು ಸಾಹಿತ್ಯ ಭವನ ಮತ್ತು ವಿಜ್ಞಾನ ಭವನವನ್ನು ಲೋಕಾರ್ಪಣೆಗೊಳಿಸಲಾಗುವುದು. ಶತಮಾನೋತ್ಸವ ಸಮಿನೆನಪಿಗಾಗಿ ಸಮಿತಿಯ ಸಿಬ್ಬಂದಿಗೆ ವಿವಿಧ ಕ್ರೀಡಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಪೂಜ್ಯರು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಆರ್.ಎಲ್.ಪೋಲೀಸಪಾಟೀಲ ಸಂಪಾದಕತ್ವದಲ್ಲಿ 500 ಪುಟಗಳ 100 ಲೇಖನಗಳ ಸಂಸ್ಮರಣ ಗ್ರಂಥ ಮತ್ತು ಸ್ಮರಣ ಸಂಚಿಕೆ ಬಿಡುಗಡೆಯಾಗಲಿವೆ. ಈ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆಮಾಡಿರುವ 100 ಸಾಧಕರನ್ನು ಸನ್ಮಾನಿಸಲಾಗುವುದು. ಪೂರ್ವಭಾವಿ ಸಭೆಯಲ್ಲಿ ಸಮಿತಿಯ ಗೌರವ ಕಾರ್ಯದರ್ಶಿ ರಾಮಸ್ವಾಮಿ ಹೆಗ್ಗಡಾಳ, ಆಡಳಿತಾಧಿಕಾರಿ ಡಾ.ಬಿ.ಜಿ. ಜವಳಿ, ಎಂ.ಎಸ್.ಶಿವಶೆಟ್ಟಿ, ಡಾ. ಎಸ್.ಬಿ. ಹಿರೇಮಠ, ನಾಗೇಶ ಹುಬ್ಬಳ್ಳಿ, ಡಿ.ಡಿ. ಮೋರನಾಳ, ಆರ್.ಎಲ್. ಪೋಲೀಸಪಾಟೀಲ, ಎಂ.ಜಿ. ಗಚ್ಚಣ್ಣವರ, ಸಿ.ಎಸ್. ಅರಸನಾಳ, ಡಾ.ಡಿ.ಸಿ. ಮಠ, ಎಸ್.ಸಿ. ಚಕ್ಕಡಿಮಠ, ಶಿವಯೋಗಿ ಕೊಪ್ಪಳ, ಪಿ.ಎಂ. ಕಲ್ಲನಗೌಡ್ರ, ಎಸ್.ಬಿ.ಕೆ. ಗೌಡರ, ಎ.ಟಿ. ಕಲ್ಮಠ, ಎಸ್.ಆರ್. ರಿತ್ತಿ ಮುಂತಾದವರಿದ್ದರು.