ಹಾವೇರಿ: ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕ-ಶಿಕ್ಷಕಿಯರ ಪತ್ತಿನ ಸಹಕಾರಿ ಸಂಘದ ಶತಮಾನೋತ್ಸವ ಸಮಾರಂಭ, ಶತಮಾನೋತ್ಸವ ಕಟ್ಟಡದ ಶಂಕುಸ್ಥಾಪನೆ ಹಾಗೂ ಪ್ರಸಕ್ತ ಸಾಲಿನ ವಾರ್ಷಿಕ ಸರ್ವಸಾಧಾರಣ ಸಭೆ ಜು. 20ರಂದು ಬೆಳಗ್ಗೆ 10ಕ್ಕೆ ನಗರದ ಜಿಲ್ಲಾ ಗುರುಭವನದಲ್ಲಿ ನಡೆಯಲಿದೆ ಎಂದು ಸಂಘದ ತಾಲೂಕಾಧ್ಯಕ್ಷ ಸತೀಶ ಶಂಕಿನದಾಸರ ತಿಳಿಸಿದರು.ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1924ರಲ್ಲಿ ಆರಂಭವಾದ ಸಂಘ ನೂರು ವರ್ಷ ಪೂರೈಸಿಕೊಂಡಿದ್ದು, ಶತಮಾನೋತ್ಸವ ಆಚರಿಸಿಕೊಳ್ಳುತ್ತಿದೆ. ಭಾನುವಾರ ನಡೆಯುವ ಕಾರ್ಯಕ್ರಮದಲ್ಲಿ ಹುಕ್ಕೇರಿಮಠದ ಸದಾಶಿವ ಮಹಾಸ್ವಾಮಿಗಳು, ಹೂವಿನಹಡಗಲಿಯ ಹಾಫಿಝ್ ಮುಹಮ್ಮದ ಸುಫ್ಯಾನ್ ಸಖಾಫಿ ಅಲ್‌ಹಿಕಮಿ ಸಾನ್ನಿಧ್ಯ ವಹಿಸಲಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಗೌರವ ಉಪಸ್ಥಿತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಉದ್ಘಾಟನೆ ಹಾಗೂ ಸಹಕಾರ ಸಚಿವ ಕೆ.ಎನ್. ರಾಜಣ್ಣ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದರು.
ಹಾವೇರಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕ-ಶಿಕ್ಷಕಿಯರ ಪತ್ತಿನ ಸಹಕಾರಿ ಸಂಘದಲ್ಲಿ ಪ್ರಸ್ತುತ 745 ಸದಸ್ಯರು ಇದ್ದು, 2025 ಮಾ. 31ಕ್ಕೆ ₹4.43 ಕೋಟಿ ಶೇರು ಬಂಡವಾಳ ಹೊಂದಿದೆ. ಸಂಘದಲ್ಲಿ ಶೇ. 9ರ ಬಡ್ಡಿಯಂತೆ ಒಂದು ವರ್ಷದ ಮುದ್ದತಿ ಠೇವಣಿ ₹24.96 ಲಕ್ಷ ಇದೆ. 2024-25ನೇ ಸಾಲಿನಲ್ಲಿ ₹69.78 ಲಕ್ಷ ನಿವ್ವಳ ಲಾಭವಿದ್ದು, ಎ ಗ್ರೇಡ್ ಶ್ರೇಣಿಯ ಅಡಿಟ್ ವರ್ಗೀಕರಣಕ್ಕೆ ಸೇರಿದ್ದು ಹೆಮ್ಮೆ ಎನಿಸುತ್ತದೆ ಎಂದರು.
ಈ ಕಾರ್ಯಕ್ರಮದಲ್ಲಿ ಕಳೆದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಶೇ. 90ಕ್ಕಿಂತ ಹೆಚ್ಚು ಅಂಕ ಗಳಿಸಿದ ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು.ಅಕ್ಕಮಹಾದೇವಿ ನೀರಲಗಿ, ಈರನಗೌಡ ಅಗಸಿಬಾಗಿಲ, ಚಂದ್ರಪ್ಪ ದೇಸೂರ, ಬಿ.ವಿ. ಬಾರ್ಕಿ, ಮೌನೇಶ ಕರೆಮ್ಮನವರ, ಎ.ಎಚ್. ಹವಾಲ್ದಾರ, ಬಿ.ಎಫ್. ತಳವಾರ, ಸಿ.ಸಿ. ಕನವಳ್ಳಿ, ಸುರೇಶ ಮಡಿವಾಳರ ಇದ್ದರು.