ಹಾನಗಲ್ಲ: ರಾಜ್ಯಗಳ ತೆರಿಗೆ ಪಾಲು ಸರಿಯಾಗಿ ನೀಡದೇ, ಸೆಸ್ ಮೊತ್ತವನ್ನೂ ಹಂಚಿಕೆ ಮಾಡದ ಕೇಂದ್ರ ಸರ್ಕಾರ ಇದೀಗ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಹೆಸರು, ಸ್ವರೂಪ ಬದಲಿಸಿ ಶೇ. 40 ರಷ್ಟು ಯೋಜನಾ ವೆಚ್ಚವನ್ನು ರಾಜ್ಯ ಸರ್ಕಾರಗಳ ತಲೆಗೆ ಕಟ್ಟುವ ಮೂಲಕ ಒಕ್ಕೂಟ ವಿರೋಧಿ ಧೋರಣೆ ಅನುಸರಿಸುತ್ತಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಆಕ್ರೋಶ ವ್ಯಕ್ತಪಡಿಸಿದರು. ತಾಲೂಕಿನ ನಿಡಸಂಗಿ ಬಸಾಪುರ ಗ್ರಾಮದಲ್ಲಿ 18 ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಿದ ಅಂಗನವಾಡಿ ಕೇಂದ್ರದ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು. 20 ವರ್ಷಗಳ ಹಿಂದೆ ಯುಪಿಎ ಸರ್ಕಾರ ಜಾರಿಗೊಳಿಸಿದ್ದ ಖಾತ್ರಿ ಯೋಜನೆ ಗ್ರಾಮೀಣ ಪ್ರದೇಶದಲ್ಲಿನ ನಿರುದ್ಯೋಗ ಮತ್ತು ಬಡತನದ ನಿರ್ಮೂಲನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಪ್ರತಿಯೊಬ್ಬ ವ್ಯಕ್ತಿಗೂ ಉದ್ಯೋಗದ ಹಕ್ಕು ಖಾತರಿಗೊಳಿಸಿದ ಈ ಯೋಜನೆ ಆರ್ಥಿಕ ತಜ್ಞರ ಮೆಚ್ಚುಗೆ ಗಳಿಸಿದೆ. ಗ್ರಾಮೀಣ ಪ್ರದೇಶದ ಚಿತ್ರಣ ಬದಲಿಸುವ ಈ ಯೋಜನೆಯ ಅಸ್ತಿತ್ವಕ್ಕೆ ಇದೀಗ ಕೇಂದ್ರ ಸರ್ಕಾರ ಧಕ್ಕೆ ತರಲು ಹೊರಟಿದೆ. ಗ್ರಾಮಭಾರತದ ಜೀವನಾಡಿಯಂತಿದ್ದ ಪ್ರಮುಖ ಯೋಜನೆಯೊಂದರ ಹೆಸರು, ಸ್ವರೂಪ ಬದಲಾಗಿ ಮೌಲ್ಯಗಳ ಪಲ್ಲಟವಾಗಿದೆ ಎಂದು ಹರಿಹಾಯ್ದ ಶಾಸಕ ಮಾನೆ, ಮಹತ್ವಾಕಾಂಕ್ಷೆಯ ಯೋಜನೆಯನ್ನು ಮೊದಲಿನ ರೀತಿಯಲ್ಲಿಯೇ ಮುಂದುವರೆಸಬೇಕು. ಗ್ರಾಮೀಣ ಪ್ರದೇಶದ ಜನತೆಯ ಹಿತಾಸಕ್ತಿ ಕಾಯಲು ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು. ಗ್ರಾಪಂ ಸದಸ್ಯ ಲಕ್ಷ್ಮಣ ವರ್ದಿ ಮಾತನಾಡಿ, ಶಾಸಕ ಶ್ರೀನಿವಾಸ ಮಾನೆ ಅವರು ನಿಡಸಂಗಿ ಬಸಾಪುರ ಗ್ರಾಮಕ್ಕೆ ಸಾಕಷ್ಟು ಅನುದಾನ ದೊರಕಿಸಿದ್ದು, ಸ್ಮಶಾನಕ್ಕೆ ತೆರಳುವ ರಸ್ತೆ, ದೇವಸ್ಥಾನದ ರಸ್ತೆ ನಿರ್ಮಿಸಿಕೊಟ್ಟಿದ್ದಾರೆ. ಹುಳ, ಹುಪ್ಪಡಿಗಳ ತಾಣವಾಗಿದ್ದ ಅಂಗನವಾಡಿಗೆ ಸುಸಜ್ಜಿತ ಕಟ್ಟಡ ನಿರ್ಮಿಸಿ ಅನುಕೂಲ ಕಲ್ಪಿಸಿದ್ದಾರೆ ಎಂದರು. ಸಿಡಿಪಿಒ ರಾಮೂ ಬೈಲಸೀಮೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತಪ್ಪ ಮರಗಡಿ, ಮುಖಂಡರಾದ ಮುನ್ನಾ ಪಠಾಣ, ಉಮೇಶ ದೊಡ್ಡಮನಿ, ಮಹ್ಮದ್‌ಹನೀಫ್ ಬಂಕಾಪುರ, ಬಸವಂತಪ್ಪ ಕಮಾಟಿ, ಶೇಖಪ್ಪ ಕಮಾಟಿ, ಮೃತ್ಯುಂಜಯ ದೇಸಾಯಿ, ಲಕ್ಷ್ಮವ್ವ ರಾಯಪ್ಪನವರ, ಲಕ್ಷ್ಮಣ ಗೋಡಿ, ಹನುಮಂತಪ್ಪ ಯಳವಟ್ಟಿ ಇದ್ದರು.