ಕೇಂದ್ರ ರಾಜ್ಯಕ್ಕೆ ಮಾಸಿಕ 22 ಲಕ್ಷ ಕ್ವಿಂಟಲ್‌ ಅಕ್ಕಿ ನೀಡುತ್ತಿದೆ: ಕೋಟಾ

KannadaprabhaNewsNetwork | Published : Apr 17, 2024 1:17 AM

ಸಾರಾಂಶ

ಬಿ.ಎಚ್‌.ಕೈಮರದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ಕೇಂದ್ರ ಸರ್ಕಾರವು ರಾಜ್ಯಕ್ಕೆ ಪ್ರತಿ ತಿಂಗಳೂ 22 ಲಕ್ಷ ಕ್ವಿಂಟಲ್‌ ಅಕ್ಕಿ ಉಚಿತವಾಗಿ ನೀಡುತ್ತಿದೆ. ರಾಜ್ಯ ಸರ್ಕಾರದಿಂದ ಒಂದು ಕಾಳು ಅಕ್ಕಿ ಸಹ ಬಡವರಿಗೆ ನೀಡುತ್ತಿಲ್ಲ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಜೆಡಿಎಸ್ ಬೆಂಬಲಿತ ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ಆರೋಪಿಸಿದರು.

ಮಂಗಳವಾರ ಬಿ.ಎಚ್‌. ಕೈಮರದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಈಗ ಬಡವರಿಗೆ ನೀಡುತ್ತಿರುವ 5ಕೆಜಿ ಅಕ್ಕಿ ಕೇಂದ್ರದ ಮೋದಿ ಸರ್ಕಾರ ನೀಡುತ್ತಿರುವ ಅಕ್ಕಿಯಾಗಿದೆ. ಬಡವರಿಗೆ ಅಕ್ಕಿ ಬದಲು 170 ರುಪಾಯಿ ಬ್ಯಾಂಕಿಗೆ ಹಾಕುತ್ತಿದ್ದೇವೆ ಎಂದು ಕಾಂಗ್ರೆಸ್‌ ಪಕ್ಷದವರು ಹೇಳುತ್ತಾರೆ. ಆದರೆ, ನಾನು ಕೆಲವು ಗ್ರಾಮಗಳಲ್ಲಿ ಸಮೀಕ್ಷೆ ಮಾಡಿಸಿದ್ದು ಶೇ.75 ರಷ್ಟು ಜನರಿಗೆ ಅಕ್ಕಿ ದುಡ್ಡು ಬಂದಿಲ್ಲ. ಸಂಧ್ಯಾ ಸುರಕ್ಷಾ ಹಣ ಕಳೆದ 4 ತಿಂಗಳಿಂದ ನಿಂತು ಹೋಗಿದೆ. ಬಿಜೆಪಿ ಸರ್ಕಾರ ಇದ್ದಾಗ 13 ಸಾವಿರ ಶಾಲೆಗಳ ಕಟ್ಟಡಕ್ಕೆ ಹಣ ಮಂಜೂರು ಮಾಡಲಾಗಿತ್ತು. ಈಗ ಅಭಿವೃದ್ಧಿ ಕಾರ್ಯಗಳು ನಿಂತು ಹೋಗಿವೆ ಎಂದು ಆರೋಪಿಸಿದರು.

ಹಿಂದೆ ಕೇಂದ್ರದಲ್ಲಿ ಕಾಂಗ್ರೆಸ್‌ ಸರ್ಕಾರ ಇದ್ದಾಗ ನಮ್ಮ ದೇಶದ ಚಿನ್ನವನ್ನು ಅಡವಿಟ್ಟು ಸಾಲ ತರಲಾಗಿತ್ತು. ಮೋದಿ ಪ್ರಧಾನಿ ಆದ ಮೇಲೆ ಎಲ್ಲಾ ವಿದೇಶಿ ಸಾಲ ತೀರಿಸಿ ಚಿನ್ನ ವಾಪಸ್‌ ತಂದಿದ್ದಾರೆ. ಪ್ರಸ್ತುತ 70 ದೇಶಗಳಿಗೆ ಭಾರತ ಸಾಲ ನೀಡಿದೆ. ವಿಶ್ವದ ವಿವಿಧ ದೇಶಗಳಲ್ಲಿ ಭಯೋತ್ಪಾದನೆ ನಡೆಯುತ್ತಿದೆ. ಆದರೆ 140 ಕೋಟಿ ಜನ ಸಂಖ್ಯೆ ಇರುವ ಭಾರತ ದೇಶ ಶಾಂತಿಯಿಂದ ಇದೆ ಎಂದರೆ ಅದಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಾರಣವಾಗಿದ್ದಾರೆ ಎಂದು ಹೇಳಿದರು.

ಒಂದು ಕಾಲದಲ್ಲಿ ನಮ್ಮ ದೇಶದ ಗಡಿ ಕಾಯುವ ಸೈನಿಕರಿಗೆ ಮೂಲ ಭೂತ ಸೌಕರ್ಯ ಇರಲಿಲ್ಲ. ಈಗ ಕೇಂದ್ರ ಸರ್ಕಾರ ಸೈನಿಕರಿಗೆ ಆಧುನಿಕ ಶಸ್ತ್ರಾಸ್ತ್ರ ನೀಡಿದೆ. ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರನ್ನು ಮಟ್ಟ ಹಾಕಲಾಗಿದೆ. ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನ ಮಾನ ನೀಡಿದ್ದ ಸಂವಿಧಾನದ 370ನೇ ವಿಧಿ ರದ್ದುಗೊಳಿಸಲಾಗಿದೆ. 2014ರ ನಂತರ ಮೋದಿ ಪ್ರಧಾನಿಯಾಗಿ ಭಾರತವನ್ನು ಸಂಪೂರ್ಣ ಬದಲಾಯಿಸಿದ್ದಾರೆ ಎಂದು ಪ್ರತಿಪಾದಿಸಿದರು.

ಎಸ್‌.ಸಿ ಹಾಗೂ ಎಸ್.ಟಿ.ಜನಾಂಗದವರ ಅಭಿವೃದ್ಧಿಗಾಗಿ ಮೀಸಲಿಟ್ಟಿದ್ದ 11,500 ಕೋಟಿ ರುಪಾಯಿಯನ್ನು ಸಿದ್ದರಾಮಯ್ಯ ಸರ್ಕಾರ ಗ್ಯಾರಂಟಿ ಯೋಜನೆಗೆ ಬಳಸಿಕೊಂಡಿದೆ. ಇದು ಸರಿಯಲ್ಲ. ಹಿಂದುಳಿದ ವರ್ಗದವರು ಉನ್ನತ ಶಿಕ್ಷಣ ಪಡೆದು ಉನ್ನತ ಹುದ್ದೆಗೆ ಹೋಗಬೇಕಾದರೆ ಅವರಿಗೆ ಮೀಸಲಿಟ್ಟಿದ್ದ ಹಣ ಅವರಿಗೆ ನೀಡಬೇಕು. ಪ್ರತಿ ವರ್ಷ ರಾಜ್ಯ ಸರ್ಕಾರವು ಅಭಿವೃದ್ಧಿಗಾಗಿ 52 ಸಾವಿರ ಕೋಟಿ ರುಪಾಯಿ ಬಳಸಿಕೊಳ್ಳಲು ಅವಕಾಶವಿದೆ. ಅದನ್ನು ಮಾತ್ರ ಬಳಸಿಕೊಳ್ಳಬೇಕು ಎಂದರು.

ಮಾಜಿ ಸಚಿವ ಡಿ.ಎನ್‌.ಜೀವರಾಜ್‌ ಮಾತನಾಡಿ, ಕೋಟಾ ಶ್ರೀನಿವಾಸ್ ಪೂಜಾರಿ ಅವರು ಸಜ್ಜನ, ಸರಳ ಅಭ್ಯರ್ಥಿಯಾಗಿದ್ದಾರೆ. ಮೋದಿ 3ನೇ ಬಾರಿಗೆ ಪ್ರಧಾನಿಯಾಗಬೇಕು ಎಂಬುದು ಎಲ್ಲರ ಬಯಕೆಯಾಗಿದ್ದು ಕೋಟಾ ಶ್ರೀನಿವಾಸ ಪೂಜಾರಿ ಅವರನ್ನು ಅತ್ಯಧಿಕ ಬಹುಮತದಿಂದ ಗೆಲ್ಲಿಸಬೇಕು. ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಶೃಂಗೇರಿ ಕ್ಷೇತ್ರದಲ್ಲ ಶೋಭಾ ಕರಂದ್ಲಾಜೆ 27 ಸಾವಿರ ಮತಗಳ ಲೀಡ್‌ ಪಡೆದಿದ್ದರು. ಈ ಬಾರಿ ಈ ಲೀಡ್‌ ಇನ್ನಷ್ಟು ಹೆಚ್ಚಾಗಬೇಕು ಎಂದು ಬಿಜೆಪಿ ಹಾಗೂ ಜೆಡಿಎಸ್‌ ಕಾರ್ಯಕರ್ತರಿಗೆ ಕರೆ ನೀಡಿದರು.ಕಾಂಗ್ರೆಸ್‌ ಅಭ್ಯರ್ಥಿ ಜಯಪ್ರಕಾಶ ಹೆಗ್ಡೆ ಅವರು ಜೆಡಿಎಸ್‌ ಪಕ್ಷದಲ್ಲಿದ್ದರು. ಜೆಡಿಎಸ್ ಸರ್ಕಾರದಲ್ಲಿ 5 ವರ್ಷ ಮಂತ್ರಿಯೂ ಆಗಿದ್ದರು. ನಂತರ ಕಾಂಗ್ರೆಸ್‌ ಸೇರಿ ಅಲ್ಲಿ ಎಂ.ಪಿ.ಆಗಿದ್ದರೂ. ನಂತರ ಬಿಜೆಪಿಗೆ ಬಂದಾಗ ಹಿಂದುಳಿದ ಆಯೋಗದ ಅಧ್ಯಕ್ಷರಾದರು. ಅದರ ಅವಧಿ ಮುಗಿದ 2 ದಿನದಲ್ಲೇ ಮತ್ತೆ ಕಾಂಗ್ರೆಸ್‌ ಸೇರಿ ಅಭ್ಯರ್ಥಿಯಾಗಿದ್ದಾರೆ ಎಂದು ಟೀಕಿಸಿದರು.

ಜೆಡಿಎಸ್‌ ರಾಜ್ಯ ಉಪಾಧ್ಯಕ್ಷ ಸುಧಾಕರ ಶೆಟ್ಟಿ ಮಾತನಾಡಿ, ಈ ಚುನಾವಣೆಯು ದೇಶದ ಅಭಿವೃದ್ಧಿ, ಭದ್ರತೆಯ ಚುನಾವಣೆಯಾಗಿದೆ. ನರೇಂದ್ರ ಮೋದಿ ಕಳೆದ 10 ವರ್ಷ ದೇಶಕ್ಕಾಗಿ ನಿರಂತರ ದುಡಿದಿದ್ದಾರೆ. ಮೋದಿ ಅಭಿವೃದ್ಧಿ ಗ್ಯಾರಂಟಿ ನೀಡಿದ್ದಾರೆ. ಶೃಂಗೇರಿ ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿಗಳಿಗೆ ಹಣ ಇಲ್ಲ ಎಂದು ನಿಲ್ಲಿಸಲಾಗಿದೆ. ಕೋಟಾ ಶ್ರೀನಿವಾಸ ಪೂಜಾರಿ ಸಿಕ್ಕ ಅವಕಾಶದಲ್ಲಿ ದಕ್ಷ ಆಡಳಿತ ನಡೆಸಿದ್ದು, ಅವರನ್ನು ಅತ್ಯಧಿಕ ಬಹುಮತದಿಂದ ಗೆಲ್ಲಿಸಬೇಕು ಎಂದು ಕರೆ ನೀಡಿದರು.

ಅಧ್ಯಕ್ಷತೆ ತಾಲೂಕು ಬಿಜೆಪಿ ಅಧ್ಯಕ್ಷ ಅರುಣಕುಮಾರ್ ವಹಿಸಿದ್ದರು. ಸಭೆಯಲ್ಲಿ ಜೆಡಿಎಸ್‌ ತಾಲೂಕು ಅಧ್ಯಕ್ಷ ಚಂದ್ರಶೇಖರ್, ಜೆಡಿಎಸ್‌ ಮುಖಂಡ ಶಿವದಾಸ್‌, ಬಿಜೆಪಿ ಮುಖಂಡರಾದ ರಾಮಸ್ವಾಮಿ, ಪುಣ್ಯಪಾಲ್‌, ಮಾಲತೇಶ್ ಇದ್ದರು. ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೆಸವಿ ಮಂಜುನಾಥ್‌ ಕಾರ್ಯಕ್ರಮ ನಿರೂಪಿಸಿದರು.

Share this article