ಕೇಂದ್ರ - ರಾಜ್ಯ ಸರ್ಕಾರಗಳು ರೈತರ ಪರವಾಗಿಲ್ಲ: ಸಿದ್ದನಗೌಡ ಪಾಟೀಲ್‌

KannadaprabhaNewsNetwork |  
Published : Feb 16, 2024, 01:47 AM IST
ನಗರದ ಎ.ಪಿ.ಎಂ.ಸಿ. ರೈತ ಭವನದಲ್ಲಿ ನಡೆದ ಅಖಂಡ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳಸಭೆಯನ್ನುದ್ದೇಶಿಸಿ ರಾಜ್ಯಾಧ್ಯಕ್ಷ ಸಿದ್ದನಗೌಡ ಪಾಟೀಲ್ ಮಾತನಾಡಿದರು.  | Kannada Prabha

ಸಾರಾಂಶ

ಚಿತ್ರದುರ್ಗ ನಗರದ ಎಪಿಎಂಸಿ ರೈತ ಭವನದಲ್ಲಿ ನಡೆದ ಅಖಂಡ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳ ಸಭೆಯನ್ನುದ್ದೇಶಿಸಿ ರಾಜ್ಯಾಧ್ಯಕ್ಷ ಸಿದ್ದನಗೌಡ ಪಾಟೀಲ್ ಮಾತನಾಡಿದರು.

ಕನ್ನಡಪ್ರಭವಾರ್ತೆ ಚಿತ್ರದುರ್ಗ

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಪರವಾಗಿಲ್ಲ. ಒಗ್ಗಟ್ಟಾಗಿ ಹೋರಾಟ ಮಾಡುವ ಮೂಲಕ ನಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಿಕೊಳ್ಳೋಣ ಎಂದು ಅಖಂಡ ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಸಿದ್ದನಗೌಡ ಪಾಟೀಲ್ ಕರೆ ನೀಡಿದರು.

ನಗರದ ಎಪಿಎಂಸಿ ರೈತ ಭವನದಲ್ಲಿ ಗುರುವಾರ ನಡೆದ ಅಖಂಡ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಹರಿಯಾಣ, ಪಂಜಾಬ್, ಉತ್ತರಪ್ರದೇಶ ಸೇರಿ ಅನೇಕ ರಾಜ್ಯಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ರೈತರು ದೆಹಲಿಯಲ್ಲಿ ಚಳವಳಿ ನಡೆಸಿದಾಗ ಪೊಲೀಸರು ಅಶ್ರುವಾಯು, ಜಲಫಿರಂಗಿ ಪ್ರಯೋಗಿಸಿದರೂ ರೈತರು ಜಗ್ಗಲಿಲ್ಲ. ನೂರಾರು ರೈತರು ಪ್ರಾಣ ಕಳೆದುಕೊಂಡರು. ಬೆಳಗಾವಿ ಸುವರ್ಣಸೌಧದ ಎದುರು ಚಳವಳಿ ಮಾಡಿದ್ದೇವೆ. ರಾಜ್ಯದಲ್ಲಿ ನಾಲ್ಕು ಲಕ್ಷ ಪಂಪ್‍ಸೆಟ್‍ಗಳಿದ್ದು, ರೈತರ ಪಂಪ್‍ಸೆಟ್ ಟಿಸಿ ಸುಟ್ಟರೆ ಸರ್ಕಾರ ಫ್ರಿಯಾಗಿ ಕೊಡುತ್ತಿತ್ತು. ಈಗ ರೈತರೆ ರಿಪೇರಿ ಮಾಡಿಸಿಕೊಳ್ಳ ಬೇಕೆಂಬ ಕಾನೂನು ತಂದಿದೆ. ಸ್ಪ್ರಿಂಕ್ಲರ್‌ ಸೆಟ್‍ಗಳಿಗೆ ನಾಲ್ಕು ಸಾವಿರ ರು. ನಿಗದಿಪಡಿಸಿರುವುದು ಮೊದಲೆ ಬರಗಾಲದಲ್ಲಿರುವ ರೈತರ ಮೇಲೆ ಬರೆ ಎಳೆದಂತಾಗಿದೆ. ಮುಂದಿನ ಹೋರಾಟಕ್ಕೆ ಸಿದ್ಧರಾಗೋಣ ಎಂದು ಹೇಳಿದರು.

ಕೇಂದ್ರ ರಾಜ್ಯ ಸರ್ಕಾರದ ತಿಕ್ಕಾಟದಲ್ಲಿ ರೈತರು ಸಾಯುವಂತಾಗಿದೆ. ಹಾಗಾಗಿ ರೈತರು ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಬಿಟ್ಟು ಒಂದಾಗಬೇಕು. ಬೆಳೆ ಪರಿಹಾರ, ಬೆಳೆ ವಿಮೆ ಇನ್ನು ರೈತರ ಕೈಸೇರಿಲ್ಲ. ಬಾಬಾಗೌಡ ಪಾಟೀಲರ ಮಾರ್ಗದರ್ಶನದಂತೆ ಎಲ್ಲರೂ ಸಾಗೋಣ. ರೈತ ಮಕ್ಕಳಿಗೆ ಕನ್ಯೆ ಕೊಡಲು ಯಾರು ಮುಂದೆ ಬರುತ್ತಿಲ್ಲ. ಅದಕ್ಕಾಗಿ ರೈತ ಮಕ್ಕಳನ್ನು ವಿವಾಹವಾದ ಹೆಣ್ಣಿನ ಹೆಸರಿನಲ್ಲಿ ಐದು ಲಕ್ಷ ರು. ಸರ್ಕಾರ ಠೇವಣಿ ಮಾಡಬೇಕು. ಆರನೆ ಗ್ಯಾರೆಂಟಿಯಾಗಿ ಇದನ್ನು ಘೋಷಿಸಬೇಕು. ಇಲ್ಲದಿದ್ದರೆ ಮುಂದಿನ ಚುನಾವಣೆಯಲ್ಲಿ ಮತ ಹಾಕುವುದಿಲ್ಲ. ಇನ್ನು ಎಂಟು ದಿನದಲ್ಲಿ ಮತ್ತೊಂದು ಸಭೆ ಸೇರೋಣ ಎಂದು ತಿಳಿಸಿದರು.

ಅಖಂಡ ಕರ್ನಾಟಕ ರೈತ ಸಂಘದ ಕಾರ್ಯಾಧ್ಯಕ್ಷ ಸೋಮಗುದ್ದು ರಂಗಸ್ವಾಮಿ ಮಾತನಾಡಿ, ಸಂಘದ ಜಿಲ್ಲಾ ಸಮಿತಿಗಳು ರಚನೆಯಾಗಬೇಕು. ಹೊಸ ಹೊಸ ಸಮಿತಿ ರಚಿಸಿದಾಗ ಮಾತ್ರ ರೈತ ಸಂಘಕ್ಕೆ ಶಕ್ತಿ ಬರುತ್ತದೆ. ಪ್ರತಿ ಜಿಲ್ಲೆಯಲ್ಲಿಯೂ ಸಭೆಗಳಾಗಬೇಕು. ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸುವತನಕ ಹೋರಾಡೋಣ. ರೈತರಲ್ಲದವರು, ರೈತ ಸಂಘದ ತತ್ವ ಸಿದ್ದಾಂತಗಳೆ ಗೊತ್ತಿಲ್ಲದವರು ಅಖಂಡ ಕರ್ನಾಟಕ ರೈತ ಸಂಘದ ಅಧ್ಯಕ್ಷನಾಗಲು ಬಂದರೆ ಅಂತಹವರಿಗೆ ಜಾಗವಿಲ್ಲ ಎಂದು ಎಚ್ಚರಿಸಿದರು.

ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ಐದು ಸಾವಿರದ ಮುನ್ನೂರು ಕೋಟಿ ರು. ಘೋಷಿಸಿ ಇದುವರೆವಿಗೂ ಹಣ ಬಿಡುಗಡೆಗೊಳಿಸಿಲ್ಲ. ಇದರಿಂದ ಚಿತ್ರದುರ್ಗ ಜಿಲ್ಲೆಗೆ ನೀರು ಹರಿಯುವುದು ಯಾವಾಗ? ಇಲ್ಲಿಯವರೆಗೂ ಆಳಿದ ಎಲ್ಲಾ ಸರ್ಕಾರಗಳು ರೈತರನ್ನು ವಂಚಿಸುತ್ತಲೆ ಬರುತ್ತಿವೆ. ಇನ್ನಾದರೂ ರೈತರು ಎಚ್ಚೆತ್ತುಕೊಂಡು ಸರ್ಕಾರಗಳಿಗೆ ಒಗ್ಗಟ್ಟು ಪ್ರದರ್ಶಿಸಬೇಕಿದೆ ಎಂದರು.

ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ ಎಲ್. ಬಸವರಾಜಪ್ಪ ಅಳಗವಾಡಿ, ಗೌರವಾಧ್ಯಕ್ಷ ಜೆ. ಮೇಘರಾಜ್ ಹಳಿಯೂರು, ಕುರುಬರಹಳ್ಳಿ ಶಿವಣ್ಣ, ಬಸ್ತಿಹಳ್ಳಿ ನಾರಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ. ಸಿದ್ದಪ್ಪ ಹಳಿಯೂರು, ಎಸ್.ಎಂ. ಶಿವಕುಮಾರ್, ಎನ್.ಜಿ. ಷಣ್ಮುಖಪ್ಪ, ಜಿ. ಪರಮೇಶ್ವರಪ್ಪ, ಗೌಡ್ರು ಪರಮಶಿವಣ್ಣ, ಸತೀಶ್‍ರೆಡ್ಡಿ, ಮೈಸೂರಿನ ನಿಂಗಮ್ಮ, ವೇದಿಕೆಯಲ್ಲಿದ್ದರು.

PREV

Recommended Stories

ರಾಹುಲ್‌ ಗಾಂಧಿ ಧರಣಿಗೆ 4500 ಪೊಲೀಸರ ಭದ್ರತೆ
ಹಳಿತಪ್ಪಿದ ಬೆಂಗಳೂರು ಉಪನಗರ ರೈಲು ಯೋಜನೆ : ಕೆ-ರೈಡ್ ಜತೆಗಿನ ಎಲ್‌ ಆ್ಯಂಡ್‌ ಟಿ ಗುತ್ತಿಗೆ ರದ್ದು