ಗದಗ: ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಕೇಂದ್ರದ ಬಜೆಟ್ ಬಿಹಾರ ಚುನಾವಣೆಯ ಪ್ರಣಾಳಿಕೆ ಆಗಿದೆ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಕ್ಕೂಟ ವ್ಯವಸ್ಥೆಯಲ್ಲಿ ನಮ್ಮ ವಿಶ್ವಾಸ ಕಮರುವ ರೀತಿಯಲ್ಲಿ ಬಜೆಟ್ ಬಂದಿದೆ. ರಾಜ್ಯಕ್ಕೆ ಪಾಲೆಷ್ಟು? ರಾಜ್ಯದಿಂದ ಟ್ಯಾಕ್ಸ್ ಎಷ್ಟು ಕೊಟ್ಟಿದ್ದೀವಿ? ವಿಧಾನಸಭೆ, ಪರಿಷತ್‌ನಲ್ಲಿ ಚರ್ಚೆ ಮಾಡಿದ್ದೇವೆ. ಪರಿಣಾಮವೇ ಆಗಿಲ್ಲ. ದಕ್ಷಿಣ ಭಾರತಕ್ಕೆ ಭಾರೀ ಅನ್ಯಾಯ ಮಾಡಿದ ಬಜೆಟ್ ಇದಾಗಿದೆ ಎಂದರು.ಈ ಹಿಂದೆ ಭದ್ರಾ ಯೋಜನೆಗೆ ₹5000 ಕೋಟಿ ಕೊಟ್ಟಿದ್ದರು, ಮತ್ತಷ್ಟು ಕೊಡುವ ನಿರೀಕ್ಷೆ ಇತ್ತು. ಕೃಷ್ಣಾ ಮೇಲ್ದಂಡೆ ಯೋಜನೆ ರಾಷ್ಟ್ರೀಯ ಯೋಜನೆಯನ್ನಾಗಿ ಮಾಡುವ ವಿಶ್ವಾಸವಿತ್ತು. ಚುನಾವಣೆಯಲ್ಲಿ ಮಾತಾಡಿದ್ದನ್ನು ಈಗ ಮಾತನಾಡಿಲ್ಲ. ಅತ್ಯಂತ ನಿರಾಶೆ ತಂದ ಬಜೆಟ್, ಕರ್ನಾಟಕಕ್ಕೆ ಕರಾಳವಾಗಿದೆ ಎಂದು ಹೇಳಿದರು.
ಸಿದ್ದರಾಮಯ್ಯ ಕಾರ್ಯಕ್ರಮ ರದ್ದುಪಡಿಸಿದ್ದಾರೆ. ಅವರಿಗೆ ಮಂಡಿನೋವು ಕಾಣಿಸಿಕೊಂಡಿದೆ. ಮೂಳೆ ಸಮಸ್ಯೆ ಇತ್ತು ಹಿಂದೆ, ಆ ಭಾಗದಲ್ಲಿ ಸಮಸ್ಯೆ ಕಾಣಿಸಿಕೊಂಡಿರಬೇಕು. ಎರಡು ದಿನ ವಿಶ್ರಾಂತಿ ಹೇಳಿರುವ ಕಾರಣ ಕಾರ್ಯಕ್ರಮ ರದ್ದಾಗಿದೆ. ಬಹುಬೇಗ ತಮ್ಮ ಕರ್ತವ್ಯದ ಮೇಲೆ ಹಾಜರಾಗುತ್ತಾರೆ ಎಂದರು.ಕಿರು ಸಾಲದ ವಸೂಲಿ ವೇಳೆ ಅಮಾನುಷವಾಗಿ ವಸೂಲಿ ಮಾಡುತ್ತಿದ್ದಾರೆ. ಸಾಲಗಾರರಿಗೆ ಭಾರಿ ಕಿರುಕುಳ ಕೊಡುತ್ತಿದ್ದಾರೆ. ವಸೂಲಾತಿಯಲ್ಲಿ ಆ ರೀತಿ ದೌರ್ಜನ್ಯ ಆಗಬಾರದು, ಸಾಲಗಾರರ ಗೌರವಕ್ಕೆ ಧಕ್ಕೆ ಆಗಬಾರದು ಎಂಬ ದೃಷ್ಟಿಯಿಂದ ರಾಜ್ಯ ಸರ್ಕಾರ ಈಗಾಗಲೇ ಮಸೂದೆ ಸಿದ್ಧಪಡಿಸಿದೆ. ಕಾನೂನು ಮಾಡುವ ನಿರ್ಣಯಿಸಿದೆ. ಅದಕ್ಕಾಗಿ ಸುಗ್ರೀವಾಜ್ಞೆ ಮಾಡುವ ಸಲುವಾಗಿ ಸೂಕ್ತವಾಗುವ ಮಸೂದೆ ರಚಿಸಿ, ಮುಖ್ಯಮಂತ್ರಿ ಬಳಿ ಹೋಗಿದೆ, ಇನ್ನೇನು ರಾಜ್ಯಪಾಲರಿಗೆ ಬಹುಬೇಗ ತಲುಪಲಿದೆ ಎಂದರು.
ಬಿ.ಆರ್. ಪಾಟೀಲ ರಾಜೀನಾಮೆ ಕುರಿತು ಪ್ರತಿಕ್ರಿಯಿಸಿದ ಅವರು, ರಾಜೀನಾಮೆ ಕೊಟ್ಟಿರುವ ಕುರಿತು ಮಾಧ್ಯಮಗಳಲ್ಲಿ ನೋಡಿದೆ. ಮುಖ್ಯಮಂತ್ರಿ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ನಾನು ಅವರನ್ನು ಕರೆದು ಮಾತನಾಡುತ್ತೇನೆ ಎಂದು ಹೇಳಿದ್ದಾರೆ. ಮಾತಾಡುತ್ತಾರೆ ಅವರು, ಅವರ ಸ್ನೇಹಿತರು ಅದು ಏನೇ ಸಮಸ್ಯೆ ಇದ್ದರೂ ಬಹುಬೇಗ ಬಗೆಹರಿಯುತ್ತದೆ ಎಂದರು.