ಕನ್ನಡಪ್ರಭ ವಾರ್ತೆ ಧಾರವಾಡ
ಮುಂಗಾರು ಹಂಗಾಮಿನಲ್ಲಿ ಮಳೆ ಕೊರತೆಯಿಂದ ಬೆಳೆಹಾನಿಯಾಗಿ ಸಂಪೂರ್ಣ ಸೋತು ಹೋದ ರೈತರಿಗೆ ಆಶಾಕಿರಣವಾಗಿ ಕೇಂದ್ರದ ಬರ ಅಧ್ಯಯನ ತಂಡ ಧಾರವಾಡ ತಾಲೂಕಿನ ಹಲವು ಗ್ರಾಮಗಳ ರೈತರ ಹೊಲಗಳಿಗೆ ಭೇಟಿ ನೀಡಿ ಹಸಿ ಹಾಗೂ ಒಣ ಬರ ಪರಿಸ್ಥಿತಿಯನ್ನು ಅವಲೋಕಿಸಿತು.ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ನೇತೃತ್ವದ ಅಧಿಕಾರಿಗಳ ತಂಡ ಜಿಲ್ಲೆಯ ಮಳೆಕೊರತೆ, ಬಿತ್ತನೆಯಾಗದ ಪ್ರದೇಶ, ಬೆಳೆ ನಾಶ ಹಾಗೂ ಹಸಿರು ಬರದ ಕುರಿತು ಕೇಂದ್ರ ತಂಡದ ಅಧಿಕಾರಿಗಳಿಗೆ ಮನವರಿಕೆ ಮಾಡಿತು. ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಅಜಿತ ಕುಮಾರ ಸಾಹು ನೇತೃತ್ವದ ಐವರು ಅಧಿಕಾರಿಗಳ ತಂಡ ಶನಿವಾರ ಸಂಜೆ 4ರ ಸುಮಾರಿಗೆ ಸವದತ್ತಿ ಮಾರ್ಗವಾಗಿ ಜಿಲ್ಲೆಗೆ ಆಗಮಿಸಿತು. ತಾಲೂಕಿನ ಹಾರೋಬೆಳವಡಿ ಗ್ರಾಮದ ರೈತ ವೀರಣ್ಣ ಕುರುಬರ ಜಮೀನಿನಲ್ಲಿದ್ದ ಎರಡು ಎಕರೆ ಈರುಳ್ಳಿ ಬೆಳೆ ಹಾನಿ ಮತ್ತು ರೈತ ಮಹಿಳೆ ಬಸವ್ವ ಜಮೀನಿನಲ್ಲಿದ್ದ ಹತ್ತಿ ಬೆಳೆ ಹಾನಿ ಪರಿಶೀಲಿಸಿತು.
ಅವಸರದಲ್ಲಿ ಪರಿಶೀಲನೆಬರ ಅಧ್ಯಯನ ತಂಡಕ್ಕೆ ತಮ್ಮ ಸಂಕಷ್ಟವನ್ನು ಹೇಳಬೇಕು ಎಂದು ಸಾಕಷ್ಟು ರೈತರು ಪ್ರತಿಯೊಂದು ಹೊಲಗಳಲ್ಲಿ ಕಾಯುತ್ತಿದ್ದರು. ಆದರೆ, ಪ್ರತಿಯೊಂದು ಹೊಲಗಳಲ್ಲಿ ತಂಡದ ಸದಸ್ಯರು ಒಂದಿಬ್ಬರು ರೈತರನ್ನು ಮಾತನಾಡಿಸಿ ಮುಂದಿನ ಹೆಜ್ಜೆ ಇಡುತ್ತಿದ್ದರು. ಎಲ್ಲಿಯೂ ತುಸು ಸಮಾಧಾನದಿಂದ ರೈತರೊಂದಿಗೆ ಚರ್ಚಿಸಿ ಅವರ ಸಂಕಷ್ಟ ಕೇಳುವ ಪ್ರಯತ್ನ ಮಾಡದೇ ಇರುವುದಕ್ಕೆ ರೈತರು ಕೇಂದ್ರ ತಂಡದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಈರುಳ್ಳಿ ಬೆಳೆ ವೀಕ್ಷಣೆನಂತರ ಅಮ್ಮಿನಭಾವಿ ಗ್ರಾಮದ ರೈತ ಅನ್ವರ ಶೇಖ್ ಜಮೀನಿನಲ್ಲಿದ್ದ ಎರಡು ಎಕರೆ ಈರುಳ್ಳಿ ಬೆಳೆ ಹಾನಿ ಮತ್ತು ಸುಮಾರು 20 ಗುಂಟೆ ಮೆಣಸಿನಕಾಯಿ ಬೆಳೆ ಹಾನಿ ಪರಿಶೀಲಿಸಿದರು. ಅಲ್ಲಿಂದ ಅಮ್ಮಿನಭಾವಿ ಗ್ರಾಮದ ಮೊರಬ ರಸ್ತೆಯ ರೈತ ಶಿವಪುತ್ರಪ್ಪ ಹೆಬ್ಬಳ್ಳಿ ಜಮೀನಿನಲ್ಲಿದ್ದ ಶೇಂಗಾ, ಹತ್ತಿ ಬೆಳೆ ಹಾನಿ ಪರಿಶೀಲಿಸಿದರು. ರೈತರು ಸಹ ತಮಗಾದ ಬೆಳೆಹಾನಿಯನ್ನು ಅಧಿಕಾರಿಗಳ ಎದುರು ಹೇಳಿಕೊಂಡರು. ನರೇಗಾ ಕಾಮಗಾರಿ ವೀಕ್ಷಣೆಬರಗಾಲ ಕಾಮಗಾರಿ ಕೈಗೊಳ್ಳಲು ಉದ್ದೇಶಿಸಿ ನರೇಗಾ ಯೋಜನೆಯಡಿ ಉದ್ಯೋಗ ಚೀಟಿ ಹೊಂದಿರುವ ಕಾರ್ಮಿಕರಿಗೆ ಉದ್ಯೋಗ ಸೃಷ್ಟಿಸಲು, ಅಮ್ಮಿನಬಾವಿ ಗ್ರಾಮದ ಗೈರಾಣ 27 ಎಕರೆ ಜಮೀನಿನಲ್ಲಿ ಸಸಿ ನೆಡುವ ಕಾಮಗಾರಿ ಸ್ಥಳಕ್ಕೆ ಅಧಿಕಾರಿಗಳ ತಂಡ ಭೇಟಿ ನೀಡಿತು. ಈ ಸಂದರ್ಭದಲ್ಲಿ ಕೂಲಿಕಾರರಾದ ಶಕೀಲಾ ನವಲಗುಂದ ಹಾಗೂ ಸವಿತಾ ಕಬ್ಬೂರು ಎಂಬುವರು ಹೊಲಗಳಲ್ಲಿ ಕೂಲಿ ಕೆಲಸ ಮಾಡುತ್ತಿದ್ದು ನಮಗೆ ಕೂಲಿ ಸಿಗದೇ ಇಲ್ಲಿ ಬಂದಿದ್ದೇವೆ. ನಿತ್ಯವೂ ಕೆಲಸ ಕೊಡುವ ಮೂಲಕ ಜೀವನ ನಡೆಸಲು ಅನುವು ಮಾಡಿಕೊಡಿ ಎಂದು ಮನವಿ ಮಾಡಿದರು.ಉದ್ಯೋಗ ನಿರತ ಸುಮಾರು 20ಕ್ಕೂ ಹೆಚ್ಚು ಜನ ಕೆಲಸ ಮಾಡುವುದನ್ನು ವೀಕ್ಷಿಸಿದ ತಂಡ ಅವರೊಂದಿಗೆ ಬರಪರಿಸ್ಥಿತಿ ಹಾಗೂ ಉದ್ಯೋಗ ಲಭ್ಯತೆಯ ಬಗ್ಗೆ ಮಾಹಿತಿ ಪಡೆದರು ನಂತರ ಧಾರವಾಡ ಗ್ರಾಮದ ರೈತ ಪ್ರಕಾಶ ದಂಡಿನ ಜಮೀನಿಗೆ ಭೇಟಿ ನೀಡಿ ಸೋಯಾಬೀನ ಬೆಳೆ ಹಾನಿ ಪರಿಶೀಲಿಸಿದರು.ಕೇಂದ್ರ ಅಧ್ಯಯನ ತಂಡದಲ್ಲಿ ಎಣ್ಣೆ ಬೀಜಗಳ ಅಭಿವೃದ್ದಿ ಇಲಾಖೆಯ ನಿರ್ದೇಶಕರಾದ ಡಾ. ಜೆ ಪೊನ್ನುಸ್ವಾಮಿ, ವೆಚ್ಚ ವ್ಯವಹಾರಗಳ ಇಲಾಖೆಯ ಸಹಾಯಕ ನಿರ್ದೇಶಕ ಮಹೇಂದ್ರ ಚಂಡೇಲಿಯ, ನೀತಿ ಆಯೋಗದ ಸಂಶೋಧನಾಧಿಕಾರಿ ಶಿವಚರಣ್ ಮೀನಾ, ರಾಜ್ಯ ಕೃಷಿ ಆಯುಕ್ತ ವೈ.ಎಸ್. ಪಾಟೀಲ್ ಅವರನ್ನು ಒಳಗೊಂಡಿತ್ತು. ಬರ ಪರಿಶೀಲನೆ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಅಧಿಕಾರಿಗಳ ತಂಡ ಪ್ರತಿಕ್ರಿಯೆ ನೀಡಲಿಲ್ಲ.
ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಈ ಸಂದರ್ಭದಲ್ಲಿ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ ಶೇ.65 ರಷ್ಟು ಮಳೆ ಕೊರತೆಯಾಗಿದ್ದರಿಂದ ಜಿಲ್ಲೆಯಲ್ಲಿ ಬಿತ್ತನೆಗೆ ಗುರಿ ಹೊಂದಲಾಗಿದ್ದ ಕೃಷಿಭೂಮಿ ಪೈಕಿ ಕೇವಲ ಶೇ. 16ರಷ್ಟು ಮಾತ್ರ ಬಿತ್ತನೆ ಮಾಡಲಾಗಿತ್ತು. ಮಳೆ ಕೊರತೆಯಿಂದ ಬೆಳೆಯ ಶೇ. 91ರಷ್ಟು ಬೆಳೆಹಾನಿಯಾಗಿದೆ. ಕೇಂದ್ರದ ತಂಡ ಹೊಲಗಳಿಗೆ ಹೋಗಿ ರೈತರೊಂದಿಗೆ ಚರ್ಚೆ ಮಾಡಿ ಹಾನಿ ಬಗ್ಗೆ ಮಾಹಿತಿ ಪಡೆದಿದ್ದಾರೆ. ಬೆಳೆ ಹಸಿರಿದ್ದು ಹಾನಿಯಾಗಿದೆ ಎಂದು ತಾವೇ ನಮ್ಮ ಬಳಿ ಹೇಳಿಕೊಂಡಿದ್ದಾರೆ ಎಂದು ಹೇಳಿದರು. ಜಿಪಂ ಸಿಇಒ ಹಾಗೂ ಕೃಷಿ ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳು ಇದ್ದರು.ಬರ ಪರಿಹಾರಕ್ಕೆ ಕಾಯೋಣ
ಪ್ರತಿ ಎಕೆರೆಗೆ ₹15-20 ಸಾವಿರದಂತೆ ವೆಚ್ಚ ಮಾಡಿ ಮುಂಗಾರಿನಲ್ಲಿ ಶೇಂಗಾ ಹಾಗೂ ಸೋಯಾ ಬಿತ್ತನೆ ಮಾಡಲಾಗಿತ್ತು. ಗೊಬ್ಬರ, ಕಳೆ ಸೇರಿದಂತೆ ಮತ್ತಷ್ಟು ಖರ್ಚು ಮಾಡಲಾಗಿತ್ತು. ಆದರೆ, ಮಳೆ ಕೊರತೆಯಿಂದ ಬೆಳೆ ಹಾನಿಯಾಗಿದೆ. ಪ್ರತಿ ಎಕೆರೆಗೆ ಕನಿಷ್ಠ 8 ಕ್ವಿಂಟಲ್ ಸೋಯಾ ಬರಬೇಕಿತ್ತು. ಈಗಿನ ಸ್ಥಿತಿ ನೋಡಿದರೆ ಒಂದು ಕ್ವಿಂಟಲ್ ಬಂದರೆ ಹೆಚ್ಚು. ಕೇಂದ್ರದ ಬರ ಅಧ್ಯಯನ ಅಧಿಕಾರಿಗಳು ನಮ್ಮ ಹೊಲಕ್ಕೆ ಬಂದು ಪರಿಸ್ಥಿತಿ ತಿಳಿದುಕೊಂಡು ಹೋಗಿದ್ದಾರೆ. ಎಷ್ಟರ ಮಟ್ಟಿಗೆ ಬರ ಪರಿಹಾರ ಬರುತ್ತದೆಯೋ ಕಾದು ನೋಡೋಣ ಎನ್ನುತ್ತಾರೆ ಧಾರವಾಡದ ರೈತರಾದ ಪ್ರಕಾಶ ದಂಡಿನ,