ಕನ್ನಡ ಶಾಸ್ತ್ರೀಯ ಅತ್ಯುನ್ನತ ಕೇಂದ್ರಕ್ಕೆ ಸ್ವಾಯತ್ತತೆ ನೀಡಲು ಕೇಂದ್ರ ಸರ್ಕಾರ ಸಮ್ಮತಿ: ಪುರುಷೋತ್ತಮ ಬಿಳಿಮಲೆ

KannadaprabhaNewsNetwork |  
Published : Feb 16, 2025, 01:47 AM IST
36 | Kannada Prabha

ಸಾರಾಂಶ

ಪ್ರಸ್ತುತ ಕನ್ನಡ ಶಾಸ್ತ್ರೀಯ ಅತ್ಯುನ್ನತ ಕೇಂದ್ರವು ಭಾರತೀಯ ಭಾಷಾ ಸಂಸ್ಥಾನದ ಅಧೀನದಲ್ಲಿದೆ. ಈಗ ಸ್ವಾಯತ್ತತೆ ಲಭಿಸಲಿದೆ. ಭಾಷಾ ಸಾಹಿತ್ಯದ ವಿಚಾರದಲ್ಲಿ ಯೋಜನೆ ರೂಪಿಸಿದರೆ ಅನುದಾನ ಕೊಡಲು ಒಪ್ಪಿರುವುದರಿಂದ ಬೇಕಾದ ಕೆಲಸ ಆರಂಭಿಸಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ಕನ್ನಡ ಶಾಸ್ತ್ರೀಯ ಅತ್ಯುನ್ನತ ಕೇಂದ್ರಕ್ಕೆ ಸ್ವಾಯತ್ತತೆ ನೀಡಲು ಕೇಂದ್ರ ಸರ್ಕಾರ ಒಪ್ಪಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಅಧಿಕಾರಿಗಳ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಕನ್ನಡ ಶಾಸ್ತ್ರೀಯ ಅತ್ಯುನ್ನತ ಕೇಂದ್ರವು ಭಾರತೀಯ ಭಾಷಾ ಸಂಸ್ಥಾನದ ಅಧೀನದಲ್ಲಿದೆ. ಈಗ ಸ್ವಾಯತ್ತತೆ ಲಭಿಸಲಿದೆ. ಭಾಷಾ ಸಾಹಿತ್ಯದ ವಿಚಾರದಲ್ಲಿ ಯೋಜನೆ ರೂಪಿಸಿದರೆ ಅನುದಾನ ಕೊಡಲು ಒಪ್ಪಿರುವುದರಿಂದ ಬೇಕಾದ ಕೆಲಸ ಆರಂಭಿಸಬೇಕು ಎಂದರು.

ಕೇಂದ್ರ ಮಾನವ ಸಂಪನ್ಮೂಲ ಸಚಿವ ಧರ್ಮೇಂದ್ರ ಪ್ರದಾನ್ ಅವರನ್ನು ಭೇಟಿಯಾಗಿ ಸ್ವಾಯತ್ತತೆ ನೀಡುವ ಬಗ್ಗೆ ಪ್ರಸ್ತಾಪಿಸಿದಾಗ ಸಕರಾತ್ಮಕವಾಗಿ ಒಪ್ಪಿಕೊಂಡಿದ್ದಾರೆ. ಸ್ವಾಯತ್ತತೆ ನೀಡಿ ರಾಜ್ಯ ಸರ್ಕಾರದ ವ್ಯಾಪ್ತಿಗೆ ಕೊಡದೆ ಕೇಂದ್ರದ ಅಧೀನದಲ್ಲಿ ಮುಂದುವರಿಯಲಿದೆ ಎಂದರು.

ತಮಿಳು ಭಾಷೆಗೆ ಸ್ವಾಯತ್ತತೆ ನೀಡಿದಾಗ ಅಂದಿನ ರಾಜಕಾರಣ ಪರಿಸ್ಥಿತಿ ಬೇರೆ ಇತ್ತು. ಅಂದಿನ ಡಿಎಂಕೆ ಸರ್ಕಾರದ ಬೇಡಿಕೆಗೆ ತಕ್ಕಂತೆ ಕೊಡಲಾಗಿತ್ತು. ಆದರೆ, ಈಗ ಅಂತಹ ವಾತಾವರಣ ಇಲ್ಲ. ಭಾರತೀಯ ಭಾಷಾ ಸಂಸ್ಥಾನದ ಅಧೀನದಿಂದ ಬೇರ್ಪಡಿಸಿ ಸ್ವಾಯತ್ತತೆ ನೀಡುವುದಕ್ಕೆ ಒಪ್ಪಿದ್ದಾರೆ ಎಂದರು.

ಅಲ್ಲದೇ, ಕೇಂದ್ರವು ಮೈಸೂರಿನಲ್ಲಿಯೇ ಇರಲು ಕೇಂದ್ರ ಸಚಿವರು ಒಪ್ಪಿದ್ದಾರೆ. ಆದರೆ, ಬೆಂಗಳೂರಿಗೆ ಸ್ಥಳಾಂತರಿಸಿದರೆ ಒಳ್ಳೆಯದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಆದರೆ, ಮೈಸೂರು ಸಾಹಿತ್ಯಿಕವಾಗಿ ಹೆಚ್ಚು ಅವಕಾಶವಿದೆ ಮತ್ತು ಶಾಸ್ತ್ರೀಯ ಅಧ್ಯಯನಕ್ಕೆ ಪೂರಕವಾಗಿದೆ ಎಂದು ಹೇಳಿದ ಮೇಲೆ ಮೈಸೂರಿನಲ್ಲಿಯೇ ಉಳಿಸಲು ಹಾಗೂ ಬೆಂಗಳೂರಿನಲ್ಲಿ ಪ್ರಾದೇಶಿಕ ಕೇಂದ್ರ ತೆರೆಯಲು ಒಪ್ಪಿದ್ದಾರೆ ಎಂದರು.

ಸದ್ಯದಲ್ಲಿಯೇ ಪ್ರಾದೇಶಿಕ ಕೇಂದ್ರವಾಗಿ ಬೆಂಗಳೂರಿನಲ್ಲಿ ಕಚೇರಿ ಆರಂಭವಾಗಲಿದೆ. ಭಾಷಾ ವಿಚಾರಗಳಿಗೂ ಮತ್ತು ಶಾಸ್ತ್ರೀಯ ವಿಚಾರಗಳಿಗೂ ಬೇರೆ ಇದೆ. ಕನ್ನಡ, ತೆಲುಗು, ಮರಾಠಿ ಸೇರಿದಂತೆ ಹತ್ತು ಶಾಸ್ತ್ರೀಯ ಭಾಷಾ ವಿಷಯಕ್ಕೆ ಸಂಬಂಧಿಸಿದಂತೆ ಯೋಜನೆಗಳು ಇವೆ. ಮುಂದಿನ ದಿನಗಳಲ್ಲಿ ಶಾಸ್ತ್ರೀಯ ಕೆಲಸಗಳಿಗೆ ಸಂಬಂಧಿಸಿದಂತೆ ಪ್ರಸ್ತಾವನೆ ಸಲ್ಲಿಸಿದರೆ ಅನುದಾನ ದೊರೆಯಲಿದೆ ಎಂದರು.

ನಾಮಫಲಕ ಅಳವಡಿಕೆಯಲ್ಲಿ 60:40 ಅನುಪಾತ ಇಲ್ಲದಿದ್ದರೆ ಉದ್ದಿಮೆ ಪರವಾನಗಿ ನವೀಕರಣಕ್ಕೆ ತಡೆ ನೀಡುವಂತೆ ಆದೇಶಿಸಲು ಜಿಲ್ಲಾಧಿಕಾರಿ ಒಪ್ಪಿದ್ದಾರೆ. ನಾಮಫಲಕ ವಿಷಯದಲ್ಲಿ ನಿರಾಶದಾಯಕ ಅಲ್ಲದಿದ್ದರೂ ಶೇ. 100ಕ್ಕೆ ನೂರರಷ್ಟು ಕನ್ನಡ ನಾಮಫಲಕಗಳು ಬರಬೇಕು. ಮುಂದಿನ ದಿನಗಳಲ್ಲಿ ನಗರಪಾಲಿಕೆ ವ್ಯಾಪ್ತಿಯಲ್ಲಿ 60:40 ಅನುಪಾತದಲ್ಲಿ ಇರುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಒಂದು ವೇಳೆ ಪಾಲಿಸದಿದ್ದರೆ ನವೀಕರಿಸುವುದಿಲ್ಲ ಎಂದರು.

ಬ್ಯಾಂಕ್‌ ಗಳಲ್ಲಿ ಕನ್ನಡ ಕಲಿತ ಸಿಬ್ಬಂದಿ ನೇಮಕ ವಿಷಯವನ್ನು ಕೇಂದ್ರ ಹಣಕಾಸು ಸಚಿವರ ಗಮನಕ್ಕೆ ತರಲಾಗಿದೆ. ಅದೇ ರೀತಿ ರಾಜ್ಯ ಬ್ಯಾಂಕ್ ಅಧಿಕಾರಿಗಳ ಸಭೆಯಲ್ಲೂ ಈ ವಿಚಾರ ಹೇಳಲಾಗಿದೆ. ಪ್ರತಿಯೊಂದು ಬ್ಯಾಂಕ್‌ ನಲ್ಲೂ ಕನ್ನಡ ಕಲಿತ ಸಿಬ್ಬಂದಿ ಇರುವಂತೆ ಆಗಬೇಕು. ಕನ್ನಡ ಬಾರದ ಸಿಬ್ಬಂದಿ ಜತೆಗೆ ಸ್ಥಳೀಯರು ವ್ಯವಹರಿಸಲು ಸಾಧ್ಯವಾಗದೆ ಸಾಮರಸ್ಯ ಹದಗೆಡಲು ಕಾರಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಸಿ ಮತ್ತು ಡಿ ಗ್ರೂಪ್ ನೌಕರರಿಗೆ ರಜೆ ನೀಡುವುದು ಸೇರಿದಂತೆ ಮತ್ತಿತರ ವಿಷಯವನ್ನು ಗಮನಿಸಲು ಮಾನವ ಸಂಪನ್ಮೂಲ ವಿಭಾಗದಲ್ಲಿ ಕನ್ನಡ ಕಲಿತವರನ್ನು ನೇಮಿಸಬೇಕು. ಮೊದಲೆಲ್ಲಾ ಕನ್ನಡ ಬಲ್ಲವರು ಇದ್ದರು. ಆದರೆ, ಈಗ ಒಬ್ಬರನ್ನು ನೇಮಕ ಮಾಡಿಕೊಳ್ಳುವುದು ನಿಲ್ಲಿಸಿರುವ ಕಾರಣ ಸಮಸ್ಯೆಗಳಾಗಿವೆ. ಈ ವಿಷಯವನ್ನು ಸಚಿವ ಪ್ರಿಯಾಂಕ ಖರ್ಗೆ ಅವರ ಗಮನಕ್ಕೆ ತರಲಾಗಿದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗುಣಮಟ್ಟ ಸಾಹಿತ್ಯ ರಚಿಸಲು ಶುದ್ಧ ಮನಸ್ಸು ಅಗತ್ಯ
ಒಂದೇ ಒಂದು ಸರ್ಕಾರಿ ಶಾಲೆ ಮುಚ್ಚಬೇಡಿ