ಬಳ್ಳಾರಿ: ಕಾರ್ಮಿಕರ ಕಲ್ಯಾಣಕ್ಕೆ ಕಂಟಕವಾಗಿ ಪರಿಣಮಿಸಿರುವ ನಾಲ್ಕು ದುಡಿಯುವ ಜನ ವಿರೋಧಿ ಕಾರ್ಮಿಕ ಸಂಹಿತೆಗಳನ್ನು ಕೂಡಲೇ ರದ್ದುಗೊಳಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಕರೆ ನೀಡಿದ್ದ ಅಖಿಲ ಭಾರತ ಮುಷ್ಕರಕ್ಕೆ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಜಿಲ್ಲಾಧಿಕಾರಿ ಕಚೇರಿ ಬಳಿ ಜರುಗಿದ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿದ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಮುಖಂಡರು, ಕೇಂದ್ರದ ಬಿಜೆಪಿ ಸರ್ಕಾರ ಕಾರ್ಮಿಕ ಸಂಹಿತೆ ಜಾರಿಗೆ ತಂದು ದುಡಿಯುವ ವರ್ಗದ ಜನರ ಮೇಲೆ ಹೇರಲು ಹವಣಿಸುತ್ತಿದೆ. ಕೆಲಸ ಹಾಗೂ ಕೆಲಸದ ಪರಿಸ್ಥಿತಿಗಳಿಗೆ ಸಂಬಂಧಿಸಿದ ದುಡಿಮೆಯ ಸಮಯ, ಕನಿಷ್ಠ ವೇತನಗಳು, ಸಾಮಾಜಿಕ ಭದ್ರತೆ ಇತ್ಯಾದಿ ಮತ್ತು ಸಂಘಟಿತರಾಗುವ ಹಕ್ಕು, ಅವರ ಸಾಮೂಹಿಕ ಚೌಕಾಶಿ ಹಕ್ಕುಗಳು, ಆಂದೋಲನಗಳು, ಹೋರಾಟಗಳು ಮತ್ತು ಮುಷ್ಕರದ ಹಕ್ಕು ಸೇರಿದಂತೆ ಪ್ರತಿಭಟನೆಗಳ ಯಾವುದೇ ರೀತಿಯ ಸಾಮೂಹಿಕ ಅಭಿವ್ಯಕ್ತಿಗಳ ಮೇಲೆ ಕಾರ್ಮಿಕರ ಎಲ್ಲ ಮೂಲಭೂತ ಹಕ್ಕುಗಳನ್ನು ದಮನ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಮಾಲೀಕವರ್ಗದ ಹಿತಾಸಕ್ತಿಯಲ್ಲಿ ವ್ಯಾಪಾರವನ್ನು ಸುಲಭಗೊಳಿಸುವ ಹೆಸರಿನಲ್ಲಿ ಕಾರ್ಮಿಕ ಸಂಹಿತೆಗಳನ್ನು ಜಾರಿಗೊಳಿಸಲಾಗುತ್ತಿದೆ ಎಂದು ಟೀಕಿಸಿದರು.
ಜಂಟಿ ಸಮಿತಿಯ ಜಿಲ್ಲಾ ಪ್ರಮುಖರಾದ ಸೋಮಶೇಖರಗೌಡ, ಜೆ. ಸತ್ಯಬಾಬು, ಕೆ. ಸೋಮಶೇಖರ ಹಾಗೂ ರೈತ ಸಂಘದ ಮಾಧವರೆಡ್ಡಿ ಕರೂರು ಮಾತನಾಡಿದರು.ಅಖಿಲ ಭಾರತ ವಿಮಾ ನೌಕರರ ಸಂಘದ ಸೂರ್ಯನಾರಾಯಣ, ಟಿ.ಜಿ. ವಿಠಲ, ಜನವಾದಿ ಮಹಿಳಾ ಸಂಘಟನೆಯ ಚಂದ್ರಕಲಾ, ಎಐಯುಟಿಸಿ ಸಂಘಟನೆಯ ಡಾ. ಪ್ರಮೋದ, ಈ. ಹನುಮಂತಪ್ಪ, ಗೋವಿಂದ, ಸುರೇಶ, ರೈತ ಸಂಘದ ಸಂಗನಕಲ್ಲು ಕೃಷ್ಣ, ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಕಾರ್ಯದರ್ಶಿ ನಾಗಲಕ್ಷ್ಮಿ, ವಿ. ಘನ ಮಲ್ಲಿಕಾರ್ಜುನ, ಚೆನ್ನಪ್ಪ, ಬಸವರಾಜ, ಕೀರ್ತಿರಾಜ, ವೇಣಗೋಪಾಲ್ ಶೆಟ್ಟಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಇಲ್ಲಿನ ಗಾಂಧಿಭವನದಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು ನಗರದ ಪ್ರಮುಖ ಬೀದಿಗಳ ಮೂಲಕ ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾಯಿಸಿ, ಸಮಾವೇಶಗೊಂಡರು.