- ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಬರದ ಬಗ್ಗೆ ಚರ್ಚಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಕೆಲವು ಸಚಿವರ ಭೇಟಿಗೆ ಅವಕಾಶ ಕೋರಿ ನ. 27ಕ್ಕೆ ಪತ್ರ ಬರೆಯಲಾಗಿದೆ. ಆದರೆ ಈ ವರೆಗೂ ಅಲ್ಲಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಯಾವುದೇ ಅವಕಾಶ ಕೊಡುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ನಿವಾಸಕ್ಕೆ ಭೇಟಿ ನೀಡಿ ಜನ್ಮದಿನದ ಶುಭಾಶಯ ಕೋರಿದ ಬಳಿಕ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.
ರಾಜ್ಯದಲ್ಲಿ ₹35 ಸಾವಿರ ಕೋಟಿ ಮೊತ್ತದ ಬೆಳೆನಷ್ಟ ಆಗಿದೆ. ರಾಷ್ಟ್ರೀಯ ವಿಕೋಪ ಪರಿಹಾರ ನಿಧಿಯಡಿ (ಎನ್‌ಡಿಆರ್‌ಎಫ್) ರಾಜ್ಯಕ್ಕೆ ₹18 ಸಾವಿರ ಕೋಟಿ ನೀಡಬೇಕು. ಇಷ್ಟು ಹಣವನ್ನು ನೀಡಿ ಎಂದು ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ ಈ ವರೆಗೂ ನೀಡಿಲ್ಲ. ಎನ್‌ಡಿಆರ್‌ಎಫ್‌ನಡಿ ಕೇಂದ್ರ ರಾಜ್ಯಕ್ಕೆ ನೀಡುವ ಹಣ ಕೇಂದ್ರ ಸರ್ಕಾರದ್ದಲ್ಲ. ಅದು ರಾಜ್ಯದ ಜನರ ತೆರಿಗೆ ಹಣ ಎಂದರು.ನಾವು (ಕರ್ನಾಟಕ) ₹4 ಲಕ್ಷ ಕೋಟಿ ತೆರಿಗೆ ಕಟ್ಟುತ್ತೇವೆ. ಕೇಂದ್ರಕ್ಕೆ ತೆರಿಗೆ ಕಟ್ಟುವುದರಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದರೆ, ನಾವು ಎರಡನೆಯ ಸ್ಥಾನದಲ್ಲಿದ್ದೇವೆ ಎಂದ ಅವರು, ಕೇಂದ್ರದಿಂದ ನಮಗೆ ವಾಪಸ್ ಬರುವುದು ₹ 50 ಸಾವಿರ ಕೋಟಿ ಮಾತ್ರ ಎಂದರು.
ವಂಟಮೂರಿ ರಾಜಕಾರಣ:ಬೆಳಗಾವಿ ತಾಲೂಕಿನ ಹೊಸ ವಂಟಮೂರಿಯಲ್ಲಿ ಮಹಿಳೆಯನ್ನು ಬೆತ್ತಲೆಗೊಳಿಸಿ, ಹಲ್ಲೆ ಮಾಡಿದ ಪ್ರಕರಣದ ಆರೋಪಿಗಳನ್ನು ತಕ್ಷಣ ಬಂಧಿಸಲಾಗಿದೆ. ಅವರಿಗೆ ಶಿಕ್ಷೆ ಕೊಡಿಸಲು ಎಲ್ಲ ರೀತಿಯ ಪ್ರಯತ್ನ ಮಾಡಲಾಗುವುದು. ಇದು ನಾಗರಿಕ ಸಮಾಜ ತಲೆತಗ್ಗಿಸುವ ಕೃತ್ಯ. ಇದನ್ನು ನಾವು ಸುಮ್ಮನೆ ಬಿಟ್ಟಿಲ್ಲ. ಕಟ್ಟುನಿಟ್ಟಿನ ಕ್ರಮಕೈಗೊಳ್ಳುತ್ತಿದ್ದೇವೆ. ಆದರೆ ಬಿಜೆಪಿ ಈ ವಿಷಯದಲ್ಲಿ ರಾಜಕಾರಣ ಮಾಡುತ್ತಿದೆ ಎಂದು ಕಿಡಿಕಾರಿದರು.
ಉತ್ತರ ಪ್ರದೇಶದಲ್ಲಿ ಅವರ ಪಕ್ಷದ ಶಾಸಕರೊಬ್ಬರು ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಜೈಲು ಸೇರಿದ್ದರಲ್ಲ. ಆ ಬಗ್ಗೆ ಬಿಜೆಪಿಯ ನಡ್ಡಾ ಸೇರಿದಂತೆ ಉಳಿದವರು ಯಾಕೆ ಮಾಡುತ್ತಿಲ್ಲ?ನ್ಯಾಷನಲ್ ಕ್ರೈಂ ಬ್ಯೂರೋದಲ್ಲಿನ ವರದಿ ನೋಡಲಿ. ಯಾರ ಕಾಲದಲ್ಲಿ ಎಷ್ಟು ಪ್ರಕರಣಗಳಾಗಿವೆ ಎಂದು ಗೊತ್ತಾಗುತ್ತದೆ. ಹಾಗಂತ ನಾವು ಇದನ್ನು ಸಮರ್ಥಿಸಿಕೊಳ್ಳುತ್ತಿಲ್ಲ. ಯಾರ ಮೇಲೆ ದೌರ್ಜನ್ಯವಾದರೂ ತಪ್ಪಿತಸ್ಥರ ಮೇಲೆ ನಾವು ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಭರವಸೆ ವ್ಯಕ್ತಪಡಿಸಿದರು.
ಅಲ್ಪಸಂಖ್ಯಾತರಿಗೂ ಟಿಕೆಟ್:ಅಲ್ಪಸಂಖ್ಯಾತರಿಗೆ ಮೂರು ಕ್ಷೇತ್ರಗಳಲ್ಲಿ ಟಿಕೆಟ್ ನೀಡಬೇಕು ಎಂಬ ಸಚಿವ ಜಮೀರ್ ಅಹ್ಮದಖಾನ್ ಒತ್ತಾಯಕ್ಕೆ ಪ್ರತಿಕ್ರಿಯಿಸಿದ ಅವರು, ಈ ಹಿಂದೆಯೂ ಎರಡು ಕ್ಷೇತ್ರಗಳಲ್ಲಿ ಟಿಕೆಟ್ ನೀಡಲಾಗಿತ್ತು. ಈ ಬಾರಿಯೂ ನೀಡುತ್ತೇವೆ ಎಂದು ಸ್ಪಷ್ಟಪಡಿಸಿದರು.
ಆದರೆ, ಬಿಜೆಪಿಯವರು ಅಲ್ಪಸಂಖ್ಯಾತರ ಮತಗಳೇ ಬೇಡ ಎನ್ನುತ್ತಾರೆ. ಗಡ್ಡ ಬಿಟ್ಟವರು, ಬುರ್ಖಾ ಹಾಕಿದವರು ಬೇಡ ಎಂದು ಬಿಜೆಪಿ ಶಾಸಕ ಯತ್ನಾಳ ಹೇಳುತ್ತಾರೆ. ಏಕೆ ಅವರು ನಮ್ಮ ದೇಶದ ನಾಗರಿಕರಲ್ಲವೇ ? ಎಂದು ಪ್ರಶ್ನಿಸಿದರು.ನಮ್ಮ ದೇಶ ಬಹುತ್ವ ಸಂಸ್ಕೃತಿ ಇರುವ ದೇಶ. ಈ ದೇಶದಲ್ಲಿ ಇರುವವರನ್ನು ರಕ್ಷಣೆ ಮಾಡುವುದು ಸರ್ಕಾರದ ಜವಾಬ್ದಾರಿ ಎಂದು ನುಡಿದರು.
ಭಯೋತ್ಪಾದಕನ ನಂಟಿರುವವನ ಜತೆಗೆ ತಾವು ವೇದಿಕೆ ಹಂಚಿಕೊಂಡ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಅದೆಲ್ಲ ಸುಳ್ಳು. ಮೌಲ್ವಿ ತನ್ವೀರ್ ಹಾಸ್ಮಿ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಕೆಲಸ ಮಾಡಿದ್ದರು. ಹೀಗಾಗಿ, ಅವರ ವಿರುದ್ಧ ಆರೋಪ ಮಾಡುತ್ತಿದ್ದಾರೆ ಅಷ್ಟೇ. ನರೇಂದ್ರ ಮೋದಿ ಹಾಗೂ ಗಡ್ಕರಿ ಜತೆಯಲ್ಲೂ ಮೌಲ್ವಿ ಹಾಸ್ಮಿ ವೇದಿಕೆ ಹಂಚಿಕೊಂಡಿದ್ದರು. ಇದೇ ಯತ್ನಾಳ ಹಿಂದೆ ಅವರ ಜತೆ ಬಿಸಿನೆಸ್ ಮಾಡುತ್ತಿದ್ದರಂತೆ ಎಂದರು.ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಸಂಬಂಧಿಸಿದಂತೆ ಪ್ರತಿಜಿಲ್ಲೆಗೆ ಒಬ್ಬೊಬ್ಬ ಸಚಿವರನ್ನು ವೀಕ್ಷಕರನ್ನಾಗಿ ನೇಮಕ ಮಾಡಲಾಗಿದೆ. ಅವರು ನೀಡುವ ವರದಿ ಮತ್ತು ಶಾಸಕರು, ಹಿಂದೆ ಅಭ್ಯರ್ಥಿಗಳಾಗಿದ್ದವರು, ಕಾರ್ಯಕರ್ತರ ಅಭಿಪ್ರಾಯ ಪಡೆದು ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು ಎಂದರು.
ಶೀಘ್ರ ನೇಮಕನಿಗಮ ಮತ್ತು ಮಂಡಳಿಗಳಿಗೆ ಶೀಘ್ರವೇ ನೇಮಕ ಮಾಡಲಾಗುವುದು. ಮೊದಲ ಹಂತದಲ್ಲಿ ಶಾಸಕರು, ಎರಡನೆಯ ಹಂತದಲ್ಲಿ ಕಾರ್ಯಕರ್ತರಿಗೆ ಅವಕಾಶ ನೀಡಲಾಗುವುದು. ಈ ಸಂಬಂಧ ತಯಾರಿ ಮಾಡಿಕೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಕಟ್ಟುನಿಟ್ಟಿನ ಕ್ರಮಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಯಲುವಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ನಿಲಯದ ಮಕ್ಕಳನ್ನು ಮಲದ ಗುಂಡಿಯೊಳಗೆ ಇಳಿಸಿ ಸ್ವಚ್ಛಗೊಳಿಸಿದ ಪ್ರಕರಣ ಸಂಬಂಧ ವರದಿ ತರಿಸಿಕೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.