ಹಾನಗಲ್ಲ: ತಾಲೂಕಿನ ಕಂಚಿನೆಗಳೂರು ಗ್ರಾಮದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಒಂದು ಕೋಟಿ ರು. ವೆಚ್ಚದಲ್ಲಿ ನೂತನ ಶಾದಿಮಹಲ್ ನಿರ್ಮಾಣ ಕಾಮಗಾರಿಗೆ ಶಾಸಕ ಶ್ರೀನಿವಾಸ ಮಾನೆ ಭೂಮಿಪೂಜೆ ನೆರವೇರಿಸಿದರು.ಬಳಿಕ ಜನಸಂಪರ್ಕ ಸಭೆ ನಡೆಸಿ ಗ್ರಾಮಸ್ಥರ ಅಹವಾಲು, ಸಮಸ್ಯೆಗಳನ್ನು ಕೇಳಿದರು. ಮಳಗಿ ಧರ್ಮಾ ಜಲಾಶಯದಿಂದ ನೀರು ಹರಿಸಬೇಕು, ವಿವಿಧ ಆಶ್ರಯ ವಸತಿ ಯೋಜನೆಯಡಿ ಮನೆ ನಿರ್ಮಿಸಿಕೊಳ್ಳಲು ನೀಡಲಾಗುತ್ತಿರುವ ಸಹಾಯಧನ ಹೆಚ್ಚಿಸಬೇಕು, ಗ್ರಾಮದ ಕೆಲ ಓಣಿಗಳಲ್ಲಿ ಪಕ್ಕಾ ಗಟಾರ ಇಲ್ಲದೇ ಸಮಸ್ಯೆ ಸೃಷ್ಟಿಯಾಗಿದ್ದು, ನೈರ್ಮಲ್ಯದ ದೃಷ್ಟಿಯಿಂದ ಗಟಾರ ನಿರ್ಮಿಸಬೇಕು ಎನ್ನುವ ಮನವಿಗೆ ಸ್ಪಂದಿಸಿದರು.ಬಳಿಕ ಮಾತನಾಡಿದ ಅವರು, ಹಿಂದಿನ ಸರ್ಕಾರ ಹಣಕಾಸಿನ ವ್ಯವಸ್ಥೆ ಮಾಡಿಕೊಳ್ಳದೇ ಸಾವಿರಾರು ಕೋಟಿ ರು. ವೆಚ್ಚದ ಕಾಮಗಾರಿಗಳಿಗೆ ಅನುಮೋದನೆ ನೀಡಿತ್ತು. ಆ ಎಲ್ಲ ಕಾಮಗಾರಿಗಳಿಗೆ ಅನುದಾನ ದೊರಕಿಸದ ಕಾರಣ ಅಭಿವೃದ್ಧಿ ಕೆಲಸ, ಕಾರ್ಯಗಳಿಗೆ ಸ್ವಲ್ಪಮಟ್ಟಿನ ಹಿನ್ನಡೆ ಆಗಿದೆ. ಕೇಂದ್ರ ಸರ್ಕಾರವೂ ನಮಗೆ ಸಾಥ್ ನೀಡುತ್ತಿಲ್ಲ. ಜಿಎಸ್‌ಟಿ ರೂಪದಲ್ಲಿ ಸಂಗ್ರಹವಾಗುತ್ತಿರುವ ಆದಾಯವನ್ನೆಲ್ಲ ಉತ್ತರ ಭಾರತದ ರಾಜ್ಯಗಳಿಗೆ ಯಥೇಚ್ಛವಾಗಿ ನೀಡುವ ಮೂಲಕ ನಮಗೆ ಅನ್ಯಾಯ ಮಾಡುತ್ತಿದೆ. ಈ ಅನ್ಯಾಯವನ್ನು ಬಿಜೆಪಿ ಸಂಸದರು ಪ್ರಶ್ನಿಸುತ್ತಿಲ್ಲ. ಬರ ಪರಿಹಾರ ಹಣವನ್ನೂ ಕೋರ್ಟ್ ಮೆಟ್ಟಿಲೇರಿ ಪಡೆಯುವಂಥ ದೌರ್ಭಾಗ್ಯ ನಮ್ಮದಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ವಸತಿ ಯೋಜನೆಗಳಿಗೆ ನೀಡಲಾಗುವ ಸಹಾಯಧನ ಹೆಚ್ಚಿಸಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇವೆ. ಈ ಬಾರಿಯ ಬಜೆಟ್‌ನಲ್ಲಿ ಹೆಚ್ಚಿಸುವ ನಿರೀಕ್ಷೆ ಇದೆ ಎಂದರು.ಗ್ರಾಪಂ ಅಧ್ಯಕ್ಷೆ ರಾಧಾ ಇಂಗಳಕಿ, ಅಂಜುಮನ್ ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಸನಾವುಲ್ಲಾ ಮುಲ್ಲಾ, ಶಾನೆಅಲಿ ಬಾದಶಾ ಪೀರಾ, ಮುಖಂಡರಾದ ವಿರುಪಾಕ್ಷಪ್ಪ ತಳವಾರ, ಖಾದರಸಾಬ ಮೂಲಿಮನಿ, ಮಾರುತಿ ಇಂಗಳಕಿ, ಹುಲ್ಲಪ್ಪ ಬಾರ್ಕಿ, ದೇವೇಂದ್ರಪ್ಪ ಭೈರಕ್ಕನವರ, ಶಶಿಧರ ಭೈರಕ್ಕನವರ, ಮುನೀರ್ ಚನ್ನಾಪೂರ, ಮೆಹಬೂಬಖಾನ ಹೊಂಡದ, ಮತೀನ್ ಶಿರಬಡಗಿ, ಅಬ್ದುಲ್‌ಖಾದರ ಎಣ್ಣಿ ಸೇರಿದಂತೆ ಗ್ರಾಪಂ ಸದಸ್ಯರು, ಮುಖಂಡರು ಉಪಸ್ಥಿತರಿದ್ದರು.ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ ಪ್ರಯುಕ್ತ ಇಂದು
ಹಾವೇರಿ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ ಹಾಗೂ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ ಅಂಗವಾಗಿ ಕಾನೂನು ಅರಿವು ಕಾರ್ಯಕ್ರಮ ಫೆ. 27ರಂದು ಸಂಜೆ 4 ಗಂಟೆಗೆ ಡಾ. ಬಿ.ಆರ್. ಅಂಬೇಡ್ಕರ ಸರ್ಕಾರಿ ಮೆಟ್ರಿಕ್ ನಂತರದ ಬಾಲಕಿಯರ ವಸತಿನಿಲಯ ನಂ. 2ರಲ್ಲಿ ಜರುಗಲಿದೆ.ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಆರ್. ಮುತಾಲಿಕದೇಸಾಯಿ ಅವರು ಉದ್ಘಾಟನೆ ನೆರವೇರಿಸುವರು. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಆಂಜನೇಯ ಹುಲ್ಲಾಳ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಎಚ್. ಜತ್ತಿ, ಕಾರ್ಯದರ್ಶಿ ಪಿ.ಎಸ್. ಹೆಬ್ಬಾಳ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕಿ ಭಾರತಿ ಎಚ್., ನಿಲಯ ಪಾಲಕಿ ನಂದಾ ಹೂಗಾರ ಅವರು ಭಾಗವಹಿಸಲಿದ್ದಾರೆ.ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಾಯಕ ಕಾನೂನು ನೆರವು ಅಭಿರಕ್ಷಕ ಎನ್.ಎನ್. ಡಿಳ್ಳೆಪ್ಪನರ ಅವರು ವಿಶ್ವ ಸಾಮಾಜಿಕ ನ್ಯಾಯ ಸಿದ್ದಾಂತದ ಕುರಿತು ಉಪನ್ಯಾಸ ನೀಡಲಿದ್ದಾರೆ.