ದ.ಕ. ಜಿಲ್ಲೆಯ ವೈದ್ಯರು, ನರ್ಸ್‌ಗಳು, ಆಶಾ ಕಾರ್ಯಕರ್ತರಿಗೆ ವೇತನ ಬಾಕಿ ಇದೆ. ಈ ವೇತನ ಬಾಕಿಯಾಗಲು ಕೇಂದ್ರ ಸರ್ಕಾರದ ನೀತಿಯೇ ಕಾರಣ ಹೊರತು ರಾಜ್ಯ ಸರ್ಕಾರದ ವಿಳಂಬದಿಂದ ಅಲ್ಲ ಎಂದು ಕಾಂಗ್ರೆಸ್ ಮುಖಂಡ ಪದ್ಮರಾಜ್ ಆರ್. ಪೂಜಾರಿ ಹೇಳಿದ್ದಾರೆ.
ಮಂಗಳೂರು: ದ.ಕ. ಜಿಲ್ಲೆಯ ವೈದ್ಯರು, ನರ್ಸ್‌ಗಳು, ಆಶಾ ಕಾರ್ಯಕರ್ತರಿಗೆ ವೇತನ ಬಾಕಿ ಇದೆ, ಇದಕ್ಕೆ ರಾಜ್ಯ ಸರ್ಕಾರ ಕಾರಣ ಎಂದು ಬಿಜೆಪಿ ಶಾಸಕರು ಹಾಗೂ ಮುಖಂಡರು ಆರೋಪಿಸುತ್ತಿದ್ದಾರೆ. ಈ ವೇತನ ಬಾಕಿಯಾಗಲು ಕೇಂದ್ರ ಸರ್ಕಾರದ ನೀತಿಯೇ ಕಾರಣ ಹೊರತು ರಾಜ್ಯ ಸರ್ಕಾರದ ವಿಳಂಬದಿಂದ ಅಲ್ಲ ಎಂದು ಕಾಂಗ್ರೆಸ್ ಮುಖಂಡ ಪದ್ಮರಾಜ್ ಆರ್. ಪೂಜಾರಿ ಹೇಳಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ರಾಷ್ಟ್ರೀಯ ಆರೋಗ್ಯ ಅಭಿಯಾನ (NHM) ಕರ್ನಾಟಕದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಒಪ್ಪಂದ ಆಧಾರಿತ ನೌಕರರು ಹಾಗೂ ಆಶಾ ಕಾರ್ಯಕರ್ತರಿಗೆ 2025ರ ನವೆಂಬರ್ ಮತ್ತು ಡಿಸೆಂಬರ್ ತಿಂಗಳ ವೇತನ ಮತ್ತು ಪ್ರೋತ್ಸಾಹಧನ ಪಾವತಿಯಲ್ಲಿ ಸಂಭವಿಸಿದ ವಿಳಂಬಕ್ಕೆ ಕೇಂದ್ರ ಸರ್ಕಾರದ ನೀತಿಯೇ ಕಾರಣವಾಗಿದೆ.
SNA-SPARSH ವ್ಯವಸ್ಥೆಡಿ ಕೇಂದ್ರ ಸರ್ಕಾರದಿಂದ ಅನುದಾನ ಬಿಡುಗಡೆಯಾದ ನಂತರ ಮಾತ್ರ ರಾಜ್ಯ ಸರ್ಕಾರ ಪಾವತಿಗಳನ್ನು ಪ್ರಕ್ರಿಯೆಗೊಳಿಸಲು ಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಪಾಲಿನ ನಿಧಿಗಳ ಸ್ವೀಕೃತಿಯಲ್ಲಿ ಉಂಟಾದ ವಿಳಂಬ ಮತ್ತು ಹೊಸ ವ್ಯವಸ್ಥೆಗೆ ಹೊಂದಾಣಿಕೆಯ ಪ್ರಕ್ರಿಯೆಗಳ ಕಾರಣದಿಂದಾಗಿ NHM ನೌಕರರಿಗೆ ವೇತನ ಪಾವತಿ ನಿರ್ದಿಷ್ಟ ಸಮಯಕ್ಕೆ ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಭಾರತ ಸರ್ಕಾರ ದಿನಾಂಕ 08.01.2026 ರಂದು ಅನುದಾನ ಬಿಡುಗಡೆ ಮಾಡಿದೆ. ಸಂಬಂಧಿತ ಕೇಂದ್ರ ಹಾಗೂ ರಾಜ್ಯ ಪಾಲಿನ ನಿಧಿಗಳು ಪ್ರಸ್ತುತ ರಾಜ್ಯ ಸರ್ಕಾರದ ಮಟ್ಟದಲ್ಲಿ ಪ್ರಕ್ರಿಯೆಯಲ್ಲಿದೆ. NHM ನೌಕರರ ಸಾಮಾಜಿಕ ಭದ್ರತೆ ಮತ್ತು ಆರ್ಥಿಕ ಕಲ್ಯಾಣವನ್ನು ಗಮನದಲ್ಲಿಟ್ಟುಕೊಂಡು, ಮುಂದಿನ ದಿನಗಳಿಂದ ಕೇಂದ್ರ ಅನುದಾನಗಳ ಸಮಯವನ್ನು ಪರಿಗಣಿಸದೆ, ವೇತನ ಪಾವತಿಯನ್ನು ಆದ್ಯತೆಯ ಮೇರೆಗೆ ಶೀಘ್ರವಾಗಿ ಬಿಡುಗಡೆಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.ಮುಂದಿನ ದಿನಗಳಲ್ಲಿ ಯಾವುದೇ ವಿಳಂಬವಾಗದಂತೆ ಹಣಕಾಸು ಪ್ರಕ್ರಿಯೆಯನ್ನು ಸರಳಗೊಳಿಸಿ ನಿಧಿಗಳ ಸುಗಮ ಹರಿವು ಖಚಿತಪಡಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ರಾಜ್ಯ ಸರ್ಕಾರ ಕೈಗೊಳ್ಳುತ್ತಿದೆ.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ನೀತಿಯಿಂದ ವೇತನ ಬಾಕಿ ಆಗಿದೆ ಎನ್ನುವುದನ್ನು ಮೊದಲು ತಿಳಿದುಕೊಂಡು ಮತ್ತೆ ಪ್ರತಿಕ್ರಿಯೆ ಕೊಡಲಿ. ಕಾಂಗ್ರೆಸ್ ಎಂದಿಗೂ ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಮಾಡುವುದಿಲ್ಲ ಎಂದು ಪದ್ಮರಾಜ್ ಆರ್. ಪೂಜಾರಿ ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.