ರೈತರ ವಿರುದ್ಧ ಕೇಂದ್ರ ದಮನಕಾರಿ ನೀತಿ: ಡೆಮಾಕ್ರಟಿಕ್‌ ಯೂತ್‌ ಫೆಡರೇಷನ್‌

KannadaprabhaNewsNetwork | Published : Feb 17, 2024 1:21 AM

ಸಾರಾಂಶ

ಕೇಂದ್ರ ಸರ್ಕಾರ ರೈತರು ನಡೆಸುತ್ತಿರುವ ಹೋರಾಟ ಹತ್ತಿಕ್ಕುವ ಯತ್ನವಾಗಿ ಲಾಠಿ ಚಾರ್ಜ್, ಅಶ್ರುವಾಯು ಸಿಡಿಸುವ ಮೂಲಕ ದಮನಕಾರಿ ನೀತಿ ಅನುಸರಿಸುತ್ತಿದೆ ಎಂದು ಡೆಮಾಕ್ರಟಿಕ್ ಯೂತ್ ಫೆಡರೇಷನ್ ಆಫ್ ಇಂಡಿಯಾದ ಜಿಲ್ಲಾ ಕಾರ್ಯದರ್ಶಿ ಪೃಥ್ವಿ ಆರೋಪಿಸಿದರು. ಹೊಳೆನರಸೀಪುರದಲ್ಲಿ ಪ್ರತಿಭಟನಾ ಮೆರವಣಿಗೆಯಲ್ಲಿ ಮಾತನಾಡಿದರು.

ಆರೋಪ । ಕೇಂದ್ರ ಸರ್ಕಾರದ ಜನವಿರೋಧಿ, ರೈತ ವಿರೋಧಿ ನೀತಿ ಖಂಡಿಸಿ ಡೆಮಾಕ್ರಟಿಕ್‌ ಯೂತ್‌ ಫೆಡರೇಷನ್‌ ಪ್ರತಿಭಟನೆಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ಕೇಂದ್ರ ಸರ್ಕಾರ ದೇಶಕ್ಕೆ ಅನ್ನ ನೀಡುವ ರೈತರು ಬೆಳೆದ ಬೆಳೆಗಳಿಗೆ ಡಾ. ಸ್ವಾಮಿನಾಥನ್ ಶಿಫಾರಸಿನಂತೆ ಬೆಂಬಲ ಬೆಲೆಗೆ ಕಾನೂನು ತರುವ ಬದಲಿಗೆ, ರೈತರು ನಡೆಸುತ್ತಿರುವ ಹೋರಾಟ ಹತ್ತಿಕ್ಕುವ ಯತ್ನವಾಗಿ ಲಾಠಿ ಚಾರ್ಜ್, ಅಶ್ರುವಾಯು ಸಿಡಿಸುವ ಮೂಲಕ ದಮನಕಾರಿ ನೀತಿ ಅನುಸರಿಸುತ್ತಿದೆ ಎಂದು ಡೆಮಾಕ್ರಟಿಕ್ ಯೂತ್ ಫೆಡರೇಷನ್ ಆಫ್ ಇಂಡಿಯಾದ ಜಿಲ್ಲಾ ಕಾರ್ಯದರ್ಶಿ ಪೃಥ್ವಿ ಆರೋಪಿಸಿದರು.

ಪಟ್ಟಣದ ಶ್ರೀ ಲಕ್ಷ್ಮಿನರಸಿಂಹಸ್ವಾಮಿ ದೇವಾಲಯದ ಮುಂಭಾಗದಿಂದ ಸಿಐಟಿಯು, ತಾಲೂಕು ಅಂಗನವಾಡಿ ನೌಕರರು, ಎಸ್‌ಕೆಎಂ, ಜೆಸಿಟಿಯು ಹಾಗೂ ರೈತ ಸಂಘಟನೆಗಳ ಒಕ್ಕೂಟದ ಸಹಯೋಗದಲ್ಲಿ ಕೇಂದ್ರ ಸರ್ಕಾರದ ಜನ ವಿರೋಧಿ ನೀತಿ ವಿರುದ್ಧ ಆಯೋಜನೆ ಮಾಡಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿ ಮಾತನಾಡಿದರು.

ಕೇಂದ್ರದ ಎನ್‌ಡಿಎ ಸರ್ಕಾರವು ಅಧಿಕಾರಕ್ಕೆ ಬಂದು ೧೦ ವರ್ಷಗಳಾಗಿವೆ. ಪಕ್ಷದ ಪ್ರಣಾಳಿಕೆಯಲ್ಲಿ ೨ ಕೋಟಿ ಉದ್ಯೋಗದ ಸೃಷ್ಟಿ, ಪ್ರತಿಯೊಬ್ಬರ ಖಾತೆಗೆ ೧೫ ಲಕ್ಷ ರು. ನೀಡುವುದು ಮತ್ತು ಡಾ. ಸ್ವಾಮಿನಾಥನ್‌ ಶಿಫಾರಸಿನಂತೆ ಬೆಂಬಲ ಬೆಲೆಯ ಕಾನೂನು ರಚಿಸುವುದಾಗಿ ಭರವಸೆ ನೀಡಿದ್ದರು. ಆದರೆ ಸಬ್ ಕಾ ಸಾಥ್ ಎಂಬ ಜನ ಸಾಮಾನ್ಯರ ಕೊಂಡುಕೊಳ್ಳುವ ಸಾಮರ್ಥ್ಯವನ್ನು ಕುಗ್ಗಿಸಿ, ಆಹಾರ, ಆರೋಗ್ಯ ಮತ್ತು ಶಿಕ್ಷಣಕ್ಕಾಗಿ ಅನುದಾನಗಳನ್ನು ಕಡಿತ ಮಾಡಿ, ಆರೋಗ್ಯ ಮತ್ತು ಶಿಕ್ಷಣವನ್ನು ಸಂಪೂರ್ಣವಾಗಿ ಖಾಸಗೀಕರಣಗೊಳಿಸಿದ ಪರಿಣಾಮ ಇಂದು ಭಾರತ ಹಸಿವಿನ ಸೂಚ್ಯಂಕದಲ್ಲಿ ೧೧೧ನೇ ಸ್ಥಾನಕ್ಕೆ ಕುಸಿದಿದೆ ಎಂದು ದೂರಿದರು.

ನ್ಯಾಯಯುತ ಜಿಎಸ್‌ಟಿ ಪಾಲನ್ನು ರಾಜ್ಯಗಳಿಗೆ ನೀಡಿ, ಒಕ್ಕೂಟ ವ್ಯವಸ್ಥೆಯನ್ನು ಬಲಪಡಸಿಬೇಕು. ಸಾರ್ವಜನಿಕ ರಂಗದ ಕೈಗಾರಿಕೆ ಹಾಗೂ ಸೇವೆಗಳನ್ನು ಬಲಪಡಿಸಬೇಕು ಜತೆಗೆ ರೈಲ್ವೆ, ವಿದ್ಯುತ್ ಒಳಗೊಂಡ ಎಲ್ಲಾ ಸಾರ್ವಜನಿಕ ಕ್ಷೇತ್ರಗಳ ಮತ್ತು ಎನ್‌ಎಂಪಿಯನ್ನೊಳಗೊಂಡಂತೆ ಎಲ್ಲಾ ಸ್ವರೂಪದ ಖಾಸಗೀಕರಣವನ್ನು ಕೈಬಿಡಬೇಕು. ೪೯ ವರ್ಷಗಳಿಂದ ದುಡಿಯುತ್ತಿರುವ ಅಂಗನವಾಡಿ ನೌಕರರು ೨೦ ವರ್ಷಗಳಿಂದ ದುಡಿಯುವ ಬಿಸಿಯೂಟ ನೌಕರರಿಗೆ, ಆಶಾ ಮತ್ತು ಇತರ ಸಿಬ್ಬಂದಿಗೆ ೩೧ ಸಾವಿರ ರು. ಕನಿಷ್ಠ ವೇತನ, ನಿವೃತ್ತಿ ಸೌಲಭ್ಯಗಳನ್ನು ಹಾಗೂ ಕನಿಷ್ಠ ೧೦ ಸಾವಿರ ರು. ಪಿಂಚಣಿ ಕೊಡಬೇಕು. ಬೆಲೆ ಏರಿಕೆ ಹಾಗೂ ಇತರೆ ಬೇಡಿಕೆಗಳಿಗೆ ಒತ್ತಾಯಿಸಿ ಫೆ.೧೬ರ ಶುಕ್ರವಾರ ದೇಶದ್ಯಾಂತ ಪ್ರತಿಭಟನೆ ಮಾಡುತ್ತಿದ್ದೇವೆ ಎಂದರು.

ಪಟ್ಟಣದ ಶ್ರೀ ಲಕ್ಷ್ಮಿನರಸಿಂಹಸ್ವಾಮಿ ದೇವಾಲಯದ ಮುಂಭಾಗದಿಂದ ಪ್ರತಿಭಟನಾ ಮೆರವಣಿಗೆ ಪ್ರಾರಂಭಿಸಿ, ಕೋಟೆ ಮುಖ್ಯ ರಸ್ತೆ, ಡಾ. ಅಂಬೇಡ್ಕರ್ ವೃತ್ತ, ಮಹಾತ್ಮಗಾಂಧಿ ವೃತ್ತದ ಮೂಲಕ ಸಾಗಿ ಪ್ರಾಧಾನ ಮಂತ್ರಿಗೆ ಬರೆದ ಮನವಿ ಪತ್ರವನ್ನು ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್ ಕೆ.ಕೆ.ಕೃಷ್ಣಮೂರ್ತಿ ಅವರಿಗೆ ಸಲ್ಲಿಸಿದರು.

ತಾಲೂಕು ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ವೀಣಾ ಕೆ.ಪಿ., ಪ್ರಧಾನ ಕಾರ್ಯದರ್ಶಿ ಶೈಲಜಾ ಜಿ.ಪಿ., ಖಜಾಂಚಿ ಗೀತಾ ಎಚ್.ಕೆ., ಡಿ.ಉಷಾ, ಜ್ಯೋತಿ ಬಿ.ಪಿ., ಶಾಂತಿ ಎಸ್.ಪಿ., ಶೋಭ, ರಂಗಮ್ಮ ಎಂ.ಎಸ್., ಪ್ರತಿಭಾ, ವಿವಿಧ ಸಂಘಟನೆಗಳ ರಾಜು, ಕುಮಾರಸ್ವಾಮಿ, ಕೃಷ್ಣಮೂರ್ತಿ ಇದ್ದರು.ಹೊಳೆನರಸೀಪುರ ಪಟ್ಟಣದ ಶ್ರೀ ಲಕ್ಷ್ಮಿನರಸಿಂಹಸ್ವಾಮಿ ದೇವಾಲಯದ ಮುಂಭಾಗದಿಂದ ಸಿಐಟಿಯು ಹಾಗೂ ರೈತ ಸಂಘಟನೆಗಳ ಒಕ್ಕೂಟದ ಸಹಯೋಗದಲ್ಲಿ ಕೇಂದ್ರ ಸರ್ಕಾರದ ಜನ ವಿರೋಧಿ ನೀತಿ ವಿರುದ್ಧ ಪ್ರತಿಭಟನೆ ಆಯೋಜನೆ ಮಾಡಲಾಯಿತು.

Share this article