ಕೇಂದ್ರದ ಹೊಸ ಜಿಎಸ್‌ಟಿ ರಾಜ್ಯಕ್ಕೆ ಭಾರೀ ಆದಾಯ ಕೊರತೆ: ಮಾನೆ

KannadaprabhaNewsNetwork |  
Published : Apr 03, 2026, 02:15 AM IST
ಶ್ರಿನಿವಾಸ ಮಾನೆ | Kannada Prabha

ಸಾರಾಂಶ

ಕೇಂದ್ರದ ಹೊಸ ಜಿಎಸ್‌ಟಿ ನೀತಿ ಬಂದ ಮೇಲೆ ರಾಜ್ಯಕ್ಕೆ ಭಾರೀ ಆದಾಯದ ಕೊರತೆ ಉಂಟಾಗಿದ್ದು, ರಾಜ್ಯಗಳು ಪಾವತಿಸಿದ ಅರ್ಧದಷ್ಟು ತೆರಿಗೆ ಹಣವನ್ನಾದರೂ ಕೇಂದ್ರ ರಾಜ್ಯಕ್ಕೆ ಮರಳಿಸಬೇಕು ಎಂದು ಹಾನಗಲ್ಲ ಶಾಸಕ ಶ್ರೀನಿವಾಸ ಮಾನೆ ಆಗ್ರಹಿಸಿದರು.

ಹಾನಗಲ್ಲ: ಕೇಂದ್ರದ ಹೊಸ ಜಿಎಸ್‌ಟಿ ನೀತಿ ಬಂದ ಮೇಲೆ ರಾಜ್ಯಕ್ಕೆ ಭಾರೀ ಆದಾಯದ ಕೊರತೆ ಉಂಟಾಗಿದ್ದು, ರಾಜ್ಯಗಳು ಪಾವತಿಸಿದ ಅರ್ಧದಷ್ಟು ತೆರಿಗೆ ಹಣವನ್ನಾದರೂ ಕೇಂದ್ರ ರಾಜ್ಯಕ್ಕೆ ಮರಳಿಸಬೇಕು ಎಂದು ಹಾನಗಲ್ಲ ಶಾಸಕ ಶ್ರೀನಿವಾಸ ಮಾನೆ ಆಗ್ರಹಿಸಿದರು.ಇಲ್ಲಿನ ಪ್ರವಾಸಿ ಮಂದಿರದಲ್ಲಿ ಗುರುವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಅಭಿವೃದ್ಧಿ ಹೊಂದಬೇಕಾದರೆ ಕೇಂದ್ರ ಸರ್ಕಾರದ ಅನುದಾನ ಹಂಚಿಕೆಯ ನೀತಿ ಬದಲಾಗಬೇಕು. ಜಿಎಸ್‌ಟಿ ರೂಪದಲ್ಲಿ ಸಂಗ್ರಹಿಸಿದ ತೆರಿಗೆ ಹಣದಲ್ಲಿ ಅರ್ಧವನ್ನಾದರೂ ಮರಳಿ ರಾಜ್ಯಕ್ಕೆ ನೀಡುವಂತಾಗಬೇಕು. ಇಲ್ಲವೇ ನಮ್ಮ ರಾಜ್ಯದ ಆದಾಯವನ್ನು ನಮಗೆ ಬಿಟ್ಟುಕೊಡಬೇಕು. ಕೇಂದ್ರ ಸರ್ಕಾರ ಜನಸಂಖ್ಯೆ ಆಧಾರದಲ್ಲಿ ಅನುದಾನ ಹಂಚಿಕೆ ಮಾಡುತ್ತಿದೆ. ಜನಸಂಖ್ಯೆ ನಿಯಂತ್ರಣಕ್ಕೆ ವಿಶೇಷ ಗಮನ ನೀಡಿರುವ ದಕ್ಷಿಣ ಭಾರತದ ರಾಜ್ಯಗಳಿಗೆ ಕೇಂದ್ರ ಸರ್ಕಾರದ ಅನುದಾನ ಹಂಚಿಕೆ ನೀತಿಯಿಂದ ಭಾರಿ ಅನ್ಯಾಯವಾಗುತ್ತಿದೆ. ದಕ್ಷಿಣದ ರಾಜ್ಯಗಳು ಒಂದು ರು. ಕಟ್ಟಿ ಮರಳಿ ಕೇವಲ ೧೩ ಪೈಸೆಯನ್ನಷ್ಟೇ ಪಡೆಯುತ್ತಿದ್ದರೆ, ಉತ್ತರದ ರಾಜ್ಯಗಳು ಕಟ್ಟುವ ತೆರಿಗೆಗಿಂತಲೂ ಹೆಚ್ಚು ಹಣವನ್ನು ಪಡೆಯುತ್ತಿವೆ ಎಂದು ವಿವರಿಸಿದರು. ದೇಶದಲ್ಲಿ ಜಿಎಸ್‌ಟಿ ಜಾರಿಗೆ ಬಂದ ಬಳಿಕ ಕೇಂದ್ರ ಸರ್ಕಾರದ ಆದಾಯ ಗಣನೀಯವಾಗಿ ಹೆಚ್ಚಿದೆ. ಬೇರೆ ಬೇರೆ ವಿಭಾಗದಲ್ಲಿ ಬರದೇ ಇರುವ ಆದಾಯವೂ ಕೇಂದ್ರದ ಬೊಕ್ಕಸಕ್ಕೆ ಸಂಗ್ರಹವಾಗುತ್ತಿದೆ. ಹೀಗಿರುವ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಅಭಿವೃದ್ಧಿ, ಮೂಲಸೌಲಭ್ಯ ಹೆಚ್ಚಿಸುವ ದೃಷ್ಟಿಯಲ್ಲಿ ರಾಜ್ಯಗಳತ್ತ ಕಣ್ತೆರೆದು ನೋಡಬೇಕಿದೆ. ಇದೇ ಪರಿಸ್ಥಿತಿ ಮುಂದುವರೆದರೆ ಆರ್ಥಿಕತೆ ದಿವಾಳಿಯತ್ತ ಮುಖ ಮಾಡಿ ಅದರ ದುಷ್ಪರಿಣಾಮ ಎದುರಿಸಬೇಕಾದ ಅನಿವಾರ್ಯತೆ ಇದೆ ಎಂದು ಎಚ್ಚರಿಸಿದರು. ಗ್ರಾಮ ಭಾರತದ ಮಹತ್ವಾಕಾಂಕ್ಷೆಯ ಯೋಜನೆ ಉದ್ಯೋಗ ಖಾತ್ರಿ ಯೋಜನೆಗೂ ಕೇಂದ್ರ ಸರ್ಕಾರ ಕತ್ತರಿ ಹಾಕಿದೆ. ಯೋಜನೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ ಎನ್ನುತ್ತಿರುವ ಬಿಜೆಪಿ ನಾಯಕರು ಕಾಮಗಾರಿಗಳ ಕ್ರಿಯಾಯೋಜನೆಗಳಿಗೆ ಅನುಮೋದನೆ ದೊರಕಿಸಿಕೊಡಲಿ ಗೊತ್ತಾಗುತ್ತದೆ ಎಂದು ಹೇಳಿದ ಶ್ರೀನಿವಾಸ ಮಾನೆ, ಕಳೆದ ವರ್ಷ ಗ್ರಾಪಂ, ತಾಪಂ, ಜಿಪಂ, ಪುರಸಭೆ ಸೇರಿದಂತೆ ಸ್ಥಳೀಯ ಸಂಸ್ಥೆಗಳಿಗೆ ಕೇಂದ್ರದ ೧೫ ನೇ ಹಣಕಾಸು ಯೋಜನೆಯ ಅನುದಾನ ಬಿಡುಗಡೆಯಾಗದ ಕಾರಣ ಆರ್ಥಿಕ ಸಂಕಷ್ಟ ಎದುರಾಗಿದೆ. ಸ್ವಚ್ಛತೆ, ಕುಡಿಯುವ ನೀರು ಪೂರೈಕೆ, ಬೀದಿದೀಪ ನಿರ್ವಹಣೆಗೂ ಪರದಾಡುವಂತಾಗಿದೆ. ೨೦೧೭ರಿಂದ ವಸತಿ ಯೋಜನೆಯಡಿ ಕೇಂದ್ರ ಸರ್ಕಾರದ ಪಾಲು ಫಲಾನುಭವಿಗಳಿಗೆ ದೊರೆತಿಲ್ಲ. ಈ ಬಗ್ಗೆ ಪತ್ರ ಬರೆದರೂ ಸ್ಪಂದನೆ ಸಿಕ್ಕಿಲ್ಲ. ಹಾನಗಲ್ ಪುರಸಭೆ ವ್ಯಾಪ್ತಿಯೊಂದರಲ್ಲಿಯೇ ೫೦೪ ಫಲಾನುಭವಿಗಳು ಹಲವು ವರ್ಷಗಳಿಂದ ಕೇಂದ್ರದ ಅನುದಾನಕ್ಕೆ ಕಾಯುತ್ತಿದ್ದಾರೆ. ರಾಜ್ಯದಲ್ಲಿನ ಗ್ರಾಮೀಣ ಕುಡಿಯುವ ನೀರಿನ ಯೋಜನೆಗಳಿಗೆ ಕೇಂದ್ರ ಸರ್ಕಾರ ನೀಡಬೇಕಿದ್ದ ೨೩ ಸಾವಿರ ಕೋಟಿ ರೂ. ಹಣವನ್ನು ರಾಜ್ಯ ಸರ್ಕಾರವೇ ಭರಿಸಿದೆ. ಕೇಂದ್ರದ ಬಜೆಟ್‌ನಲ್ಲಿ ರಾಜ್ಯಕ್ಕೇನು ಎನ್ನುವ ಬಗ್ಗೆ ಯಾವುದೇ ನಿಖರ ಮಾಹಿತಿ ಇಲ್ಲ. ಕಳೆದ ಬಾರಿ ರಾಜ್ಯಕ್ಕೆ ಸಿಗಬೇಕಿದ್ದ ಬರ ಪರಿಹಾರ ಹಣವನ್ನು ಕೋರ್ಟ್ ಮೊರೆ ಹೋಗಿ ಪಡೆಯುವಂತಾಯಿತು. ನ್ಯಾಯಯುತ ಅನುದಾನಕ್ಕೂ ಸಹ ಕೋರ್ಟ್ ಮೊರೆ ಹೋಗುವಂಥ ಅನಿವಾರ್ಯತೆ ಎದುರಾಗಿದೆ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಪ್ತು ಸ್ಥಗಿತ, ಗಿಡದಲ್ಲಿಯೇ ಕೊಳೆಯುತ್ತಿರುವ ಪಪ್ಪಾಯಿ ಹಣ್ಣು!
ಸನಾತನ ಧರ್ಮ ಜಗತ್ತಿಗೆ ಬೆಳಕು ನೀಡುವ ಧರ್ಮ: ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ